ಮೈಸೂರು ನಗರದಲ್ಲಿ ಯುದ್ಧ ಸ್ಮಾರಕವಿಲ್ಲದಿರುವುದು ಬೇಸರದ ಸಂಗತಿ: ಮಾಜಿ ಸೈನಿಕರ ಕ್ಷೇಮಾಭ್ಯುದಯ ಸಂಘ ವಿಷಾದ
ಮೈಸೂರು

ಮೈಸೂರು ನಗರದಲ್ಲಿ ಯುದ್ಧ ಸ್ಮಾರಕವಿಲ್ಲದಿರುವುದು ಬೇಸರದ ಸಂಗತಿ: ಮಾಜಿ ಸೈನಿಕರ ಕ್ಷೇಮಾಭ್ಯುದಯ ಸಂಘ ವಿಷಾದ

August 8, 2019

ಮೈಸೂರು,ಆ.7-ಕೊಡಗಿನ ಮಾಜಿ ಸೈನಿಕರ ಕ್ಷೇಮಾಭ್ಯುದಯ (ಮೈಸೂರು ಪೂರ್ವ) ಸಂಘದ ವಾರ್ಷಿಕ ಸಭೆ ಇತ್ತೀ ಚೆಗೆ ಬನ್ನೂರು ರಸ್ತೆಯ ಚಾಮುಂಡೇಶ್ವರಿ ಕನ್ವೆನ್ಷನ್ ಹಾಲ್‍ನಲ್ಲಿ ನಡೆಯಿತು.

ಚಾಮರಾಜನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಹಾಗೂ ಸಮಾಜ ಸೇವಕರಾದ ಸಿಂಗ್ರಿಗೌಡ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಅಧ್ಯಕ್ಷ ಕಂಜಿತಂಡ ಅಯ್ಯಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ನಾಗರಿಕ ಸೌಕರ್ಯ (ಸಿಎ) ನಿವೇಶನ ವನ್ನು ಪಡೆದು ವಿವಿಧೋದ್ದೇಶ ಸಮು ದಾಯ ಭವನವನ್ನು ನಿರ್ಮಿಸಲು ಪ್ರಯತ್ನ ಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

ಮಾಜಿ ಸೈನಿಕರೂ ಆಗಿರುವ ಆನಂದ್, ಮಾಜಿ ಸೈನಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ವನ್ನು ನೀಡಬೇಕಿದೆ, ಸಶಸ್ತ್ರ ಪಡೆಗೆ ಸೇರುವಂತೆ ಅವರನ್ನು ಪ್ರೇರೇಪಿಸಬೇಕಿದೆ. ಇದರಿಂದ ದೇಶಸೇವೆ ಮಾಡುವುದರೊಂದಿಗೆ ಶಿಸ್ತುಬದ್ಧ ಜೀವನ ನಡೆಸಿದಂತಾಗುತ್ತದೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಯುದ್ಧ ಸ್ಮಾರಕವೊಂ ದನ್ನು ನಿರ್ಮಿಸಿ ಅದಕ್ಕೆ ಸ್ಕ್ವಾಡ್ರನ್ ಲೀಡರ್ ಅಜ್ಜಮಡ ಬೋಪಯ್ಯ ದೇವಯ್ಯರವರ ಸವಿನೆನಪಿನಲ್ಲಿ ‘ಸೈನಿಕ್ ಅರಾಮ್ ಘರ್’ ಎಂದು ಹೆಸರಿಡಬೇಕೆಂದು 2000ನೇ ಇಸವಿಯಲ್ಲಿ ಮೈಸೂರು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ ವಿಕೇರ್ ಮಾಜಿ ಸೈನಿಕರ ಟ್ರಸ್ಟಿನ ಮಂಡೆಟಿರ ಎನ್. ಸುಬ್ರಮಣಿಯವರ ಪ್ರಯತ್ನವನ್ನು ಶ್ಲಾಘಿಸಿ, ಮೈಸೂರಿನ ಯಾವುದೇ ಸಶಸ್ತ್ರ ಪಡೆಗಳ ಸಿಬ್ಬಂದಿ ಈ ಕುರಿತು ಚಿಂತಿಸಿ ರಲಿಲ್ಲ ಎಂದು ಆನಂದ್ ತಿಳಿಸಿದರು. ಕೆಲವು ವರ್ಷಗಳ ಹಿಂದೆ ತಾವು ಮೈಸೂರಿನಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸು ತ್ತಿದ್ದಾಗ ಯುದ್ಧ ಸ್ಮಾರಕ ಪ್ರಸ್ತಾಪಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನೂ ಪರಿಶೀಲಿಸಿದ್ದಾಗಿ ಮತ್ತು ಅದಕ್ಕಾಗಿ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದೇನೆ ಎಂದು ಅವರು ಮಾಹಿತಿ ನೀಡಿದರು.

ಸಶಸ್ತ್ರ ಪಡೆಗಳ ಸೈನಿಕರನ್ನು ಕೇವಲ ಯುದ್ಧ ಮತ್ತು ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಮಾತ್ರ ನೆನಪಿಸಿಕೊಳ್ಳಲಾಗು ತ್ತದೆ. ಮಾಜಿ ಸೈನಿಕರ ಕ್ಷೇಮಾಭ್ಯುದಯ ಕ್ಕಾಗಿ ಕೈಜೋಡಿಸುವುದು ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಮತ್ತೊಬ್ಬ ಅತಿಥಿಗಳಾಗಿ ಮಾತನಾಡಿದ ಚಾಮುಂಡೇಶ್ವರಿ ಕನ್ವೆನ್ಷನ್ ಹಾಲಿನ ಮಾಲೀ ಕರೂ ಆಗಿರುವ ಸಿಂಗ್ರಿಗೌಡ ಅಭಿಪ್ರಾಯಪಟ್ಟರು.

ಅಸೋಸಿಯೇಷನ್ನಿನ ಗೌರವ ಕಾನೂನು ಸಲಹೆಗಾರರೂ ಆಗಿರುವ ಮಂಡೆಟಿರ ಸುಬ್ರಮಣಿ ಮಾತನಾಡಿ, ಜಿಲ್ಲಾಧಿ ಕಾರಿಗಳಾಗಿದ್ದ ಡಾ.ಬಿ. ಬಸವರಾಜು ರವರ ನೆರವಿನಿಂದ 2000ನೇ ಇಸವಿಯಿಂದಲೇ ಮೈಸೂರಿನ ಎನ್‍ಸಿಸಿ ಕೇಂದ್ರ ಕಚೇರಿಯ ಎದುರು ಖಾಲಿ ಇರುವ ಜಾಗದಲ್ಲಿ ತಾವು ಸಲ್ಲಿಸಿದ ಪ್ರಸ್ತಾವನೆಯಂತೆಯೇ ಸ್ಮಾರಕದ ನಿರ್ಮಾಣಕ್ಕಾಗಿ ಭೂಮಿಯನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು. ಆದರೆ ಕಳೆದ ಎರಡು ದಶಕಗಳಿಂದಲೂ ಯುದ್ಧ ಸ್ಮಾರಕವನ್ನು ನಿರ್ಮಿಸುವ ಕನಸು ಇನ್ನೂ ಹಾಗೆಯೇ ಉಳಿದಿದೆ ಎಂದು ಅವರು ವಿಷಾದಿಸಿದರು.

ಮಾಜಿ ಸೈನಿಕರು, ಹಿರಿಯ ನಿವೃತ್ತ ಸಶಸ್ತ್ರ ಪಡೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರ ಬೆಂಬಲದೊಂದಿಗೆ ತಮ್ಮ ವಿಕೇರ್ ಮಾಜಿ ಸೈನಿಕರ ಟ್ರಸ್ಟಿನ ಮೂಲಕ ಜಿಲ್ಲಾಡಳಿತದೊಂದಿಗೆ ಈ ವಿಷಯ ಕುರಿತು ಚರ್ಚಿಸುವುದಾಗಿ ಸದಸ್ಯರಿಗೆ ಭರವಸೆ ನೀಡಿದರು. ಸಂಘದ ಕಾರ್ಯದರ್ಶಿ ಗಳಾದ ಅಪ್ಪಚಂಗಡ ಮೋಟಯ್ಯ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಗಳಾದ ಮಾಜಿ ಸುಬೇದಾರ್ ಸಿ.ಕೆ.ಬಸಪ್ಪ ವಂದನೆ ಸಲ್ಲಿಸಿದರು.

Translate »