ಏಕವ್ಯಕ್ತಿಯಿಂದ ಏನೂ ಮಾಡಲಾಗದು, ಒಟ್ಟಾಗಿ ಕೆಲಸ ಮಾಡೋಣ
ಮೈಸೂರು

ಏಕವ್ಯಕ್ತಿಯಿಂದ ಏನೂ ಮಾಡಲಾಗದು, ಒಟ್ಟಾಗಿ ಕೆಲಸ ಮಾಡೋಣ

January 1, 2020

ಮೈಸೂರು, ಡಿ.31(ಪಿಎಂ)- ರಂಗಭೂಮಿ ಎಂಬುದು ಸಮೂಹ ಮಾಧ್ಯಮ. ಇಲ್ಲಿ ಏಕವ್ಯಕ್ತಿಯಿಂದ ಏನೂ ಮಾಡಲಾಗದು. ಏಕವ್ಯಕ್ತಿ ಪ್ರದರ್ಶನದಲ್ಲೂ ಹಲವರು ಕೆಲಸ ಮಾಡಬೇಕು. ಹೀಗಾಗಿ ರಂಗಾ ಯಣದ ಬೆಳವಣಿಗೆಗೆ ನಾವು ಒಟ್ಟಾಗಿ ಪ್ರಾಮಾಣಿಕವಾಗಿ ಕೆಲಸ ಮಾಡೋಣ ಎಂದು ಮೈಸೂರಿನ ರಂಗಾಯಣದ ನೂತನ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣದ ಕಲಾವಿದರು ಹಾಗೂ ಸಿಬ್ಬಂದಿಯಲ್ಲಿ ತಿಳಿಸಿದರು.

ಮೈಸೂರಿನ ರಂಗಾಯಣದ ಭೂಮಿಗೀತ ಸಭಾಂಗಣದಲ್ಲಿ ಮಂಗಳವಾರ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಸರಳ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ರಂಗ ಭೂಮಿ ರಾಜಕೀಯ ಇಲ್ಲವೇ ನಿಗಮ-ಮಂಡಳಿಯಲ್ಲ. ಇದೊಂದು ಕಲ್ಚರ್. ರೈತನ ದುಡಿಮೆಯಂತೆಯೇ ರಂಗಭೂಮಿ. ಅದಕ್ಕಾಗಿಯೇ ಅದನ್ನು ಅಗ್ರಿಕಲ್ಚರ್ ಎಂದು ಕರೆದರೆ, ಇದನ್ನು ಕಲ್ಚರ್ ಎಂದು ಕರೆಯಲಾಗಿದೆ. ರೈತ ಮತ್ತು ರಂಗಭೂಮಿ ಕಲಾವಿದರು ನಮ್ಮ ಸಮಾಜದ ಎರಡು ಕಣ್ಣುಗಳು ಎಂದು ಬಣ್ಣಿಸಿದರು.

ಮಾಧ್ಯಮ ರಂಗಾಯಣದ ನ್ಯೂನತೆ ಯನ್ನೇ ಬೊಟ್ಟು ಮಾಡದೇ ಇಲ್ಲಿನ ಸೊಗಸು ಗಾರಿಕೆ ಬಿತ್ತರಿಸಿದೆ. ಹೀಗಾಗಿ ರಂಗಾಯಣ ಬೆಳೆಯಲು ಮಾಧ್ಯಮದ ಕೊಡುಗೆಯೂ ಇದೆ. 1989ರಲ್ಲಿ ಬಿ.ವಿ.ಕಾರಂತರು ರಂಗಾ ಯಣದ ಕನಸು ಕಂಡಾಗ ನಾವೂ ಅವರೊಂ ದಿಗೆ ಇದ್ದೆವು. ಆಗ ಅನಿತಾ ನನ್ನ ಹೆಂಡತಿ ಆಗಿರಲಿಲ್ಲ. ಅವರು ರಂಗಾಯಣಕ್ಕೆ ಕಲಾ ವಿದೆಯಾಗಿ ಆಯ್ಕೆಯಾಗಿದ್ದರು. ಕೊಡಗಿನಲ್ಲಿ ರಂಗಭೂಮಿ ಕಟ್ಟೋಣ ಎಂದು ಅನಿತಾ ರನ್ನು ಪಟಾಯಿಸಿದ್ದೆ ಎಂದು ಹಾಸ್ಯಭರಿತ ಮಾತುಗಳಲ್ಲಿ ಹಳೇ ನೆನಪಿಗೆ ಜಾರಿದರು.

ಮೈಸೂರಿನ ವೃತ್ತಿ ರಂಗಭೂಮಿಯ ಮೊಹಮ್ಮದ್ ಫೀರ್ ಅವರಿಂದ ಪ್ರೇರಿತರಾದ ಹರಿದಾಸ ಅಪ್ಪಚ್ಚು ಕವಿಗಳು ತಮ್ಮ ತವ ರಾದ ಕೊಡಗಿನಲ್ಲಿ ವೃತ್ತಿ ರಂಗಭೂಮಿ ಕಂಪನಿ ಕಟ್ಟಿದ್ದರು. ಹೀಗಾಗಿ ನಾನು ಕೂಡ ರಂಗಭೂಮಿಯನ್ನು ಕೊಡಗಿನಲ್ಲಿ ಕಟ್ಟುವ ವಿಶ್ವಾಸದೊಂದಿಗೆ ದುಡಿದೆ. ಆ ಮೂಲಕ ಕೊಡಗನ್ನು ಕರ್ನಾಟಕದಲ್ಲಿ ಗುರುತಿಸುವಂತೆ ಮಾಡುವಲ್ಲಿ ತೃಪ್ತಿ ಹೊಂದಿದ್ದೇನೆ. ಕೊಡಗು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ವೇಳೆ ಹಲವು ಏಳು ಬೀಳು ಸಹ ಕಂಡಿದ್ದೇನೆ ಎಂದರು.

ಬಿ.ವಿ.ಕಾರಂತರ ಬಳಿಕ ರಂಗಾಯಣ ದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನೇಕರು ತಮ್ಮ ಕೊಡುಗೆ ನೀಡಿದ್ದಾರೆ. ಬಸವಲಿಂಗಯ್ಯ ಅದ್ಭುತ ನಾಟಕಗಳನ್ನು ಇಲ್ಲಿ ಸೃಷ್ಟಿ ಮಾಡಿದರು. ಆಗ ಈಗಿನ ಹಿರಿಯ ಕಲಾವಿದರು ರಂಗಾಯಣ ಯೌವನದ ಚೆಲುಮೆಯಾಗಿದ್ದರು. ಪ್ರಸನ್ನ ಭೂಮಿಗೀತ ನಿರ್ಮಿಸಿದ ಹಿನ್ನೆಲೆಯಲ್ಲಿ ಈ ಸಭಾಂಗಣದಲ್ಲಿ ಅದ್ಭುತ ನಾಟಕ ಪ್ರದರ್ಶನ ಸಾಧ್ಯವಾಯಿತು. ನನ್ನ ಗುರು ಗಳಾದ ಚಿದಂಬರರಾವ್ ಜಂಬೆ, ಪ್ರಸನ್ನ, ಲಿಂಗದೇವರು ಹಳೆಮನೆ ಸೇರಿದಂತೆ ಎಲ್ಲಾ ನಿರ್ದೇಶಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ನಿರ್ದೇಶಕನಾದ ಕಾರಣಕ್ಕೆ ನನಗೆ ಕೊಡು ಬಂದಿಲ್ಲ. ನಾನು ಧೂಳಿಗೆ ಸಮಾನ. ಈ ಸ್ಥಾನಕ್ಕೆ ನಾನೇ ಮೊದಲಲ್ಲ. ಕೊನೆಯೂ ಅಲ್ಲ. ಹಲವು ಅರ್ಹರು ಇದ್ದಾಗ್ಯೂ ನಿರ್ದೇಶಕ ಸ್ಥಾನ ನನಗೆ ಒಲಿದು ಬಂದಿದೆ. ಯೋಗ್ಯತೆ ಇದ್ದರೂ ಯೋಗವೂ ಇರಬೇಕು ಎನ್ನುವಂತೆ ನನಗೆ ಅವಕಾಶ ಸಿಕ್ಕಿದೆ ಎಂದ ರಲ್ಲದೆ, ಉದ್ದೇಶಪೂರ್ವಕವಾಗಿ ನಾನು ತಪ್ಪು ಮಾಡಲ್ಲ. ಸಣ್ಣ ತಪ್ಪಾದರೆ ಅದನ್ನೇ ದೊಡ್ಡದು ಮಾಡಬೇಡಿ ಎಂದು ಮಾಧ್ಯಮ ದವರನ್ನು ಉದ್ದೇಶಿಸಿ ಹಾಸ್ಯ ಧಾಟಿಯಲ್ಲಿ ಹೇಳುವ ಮೂಲಕ ಕಚಗುಳಿ ಇಟ್ಟರು.

ಬಳಿಕ ಮಾತನಾಡಿದ ರಂಗಾಯಣದ ಹಿರಿಯ ಕಲಾವಿದ ಹುಲಗಪ್ಪ ಕಟ್ಟಿಮನಿ, ಇಂದು ಇಲ್ಲಿ ಸಂಭ್ರಮದ ವಾತಾವರಣ ಕಾಣುತ್ತಿದೆ. ಅಡ್ಡಂಡ ಸಿ.ಕಾರ್ಯಪ್ಪ ಹಾಗೂ ನಾನು ಒಂದೇ ಬ್ಯಾಚಿನವರು. ಕಾರ್ಯಪ್ಪ ಯುವಕನಾಗಿದ್ದಾಗಲೇ ರಂಗಭೂಮಿ ಕುರಿತಂತೆ ಉತ್ಕಟವಾದ ತುಡಿತ ಹೊಂದಿ ದ್ದರು. 1986-87ರಲ್ಲಿ ಅಭಿನಯದೊಂದಿಗೆ ಉತ್ತಮ ಸಂಘಟ ರಾಗಿಯೂ ಹೊರಹೊಮ್ಮಿ ದರು. ಬಿ.ವಿ. ಕಾರಂತರ ಕನಸು ನನಸು ಮಾಡುವ ಉತ್ಕಟತೆ ಇವರಲಿದ್ದು, ನಮ್ಮ ರಂಗಾ ಯಣದ ಅಂಗಳ ಕಲ್ಯಾಣದ ಮಹಾಮನೆ ಯಂತೆ ಆಗಲಿ ಎಂದು ಆರೈಸಿದರು.

ಮೈಸೂರು ಕೊಡವ ಸಮಾಜದ ಮಾಜಿ ಅಧ್ಯಕ್ಷರೂ ಆದ ಹಿರಿಯ ವೈದ್ಯ ಡಾ.ಎ.ಎ.ಕುಟ್ಟಪ್ಪ ಮಾತನಾಡಿ, ಮೈಸೂರಿ ನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೋಡಲು ಒಂದು ತೊಂದರೆ ಇದೆ. ಅದೆಂದರೆ ವಿಪರೀತ ಕಾರ್ಯಕ್ರಮಗಳು. ಯಾವುದನ್ನೂ ನೋಡುವುದು ಯಾವುದನ್ನು ಬಿಡುವುದು ಎನ್ನುವಂತಾಗಿ ಮುಕ್ಕಾಲು ಭಾಗ ಕೊಡವರು ಯಾವುದನ್ನೂ ನೋಡಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರಲ್ಲದೆ, ಇದೊಂದು ಅದ್ಭುತ ಸನ್ನಿವೇಶ ಎಂದು ನೂತನ ನಿರ್ದೇಶಕರನ್ನು ಆರೈಸಿದರು.

ಅಭಿನಂದನೆ: ಇದೇ ವೇಳೆ ಕೊಡವ ಸಮಾಜದ ಹಿರಿಯರು, ಗಣ್ಯರು, ಕಲಾ ವಿದರು ಹಾಗೂ ಅಭಿಮಾನಿಗಳು ಸೇರಿ ದಂತೆ ಹಲವು ಮಂದಿ ಅಡ್ಡಂಡ ಸಿ. ಕಾರ್ಯಪ್ಪ ಅವರನ್ನು ಅಭಿನಂದಿಸಿದರು.

ಅಡ್ಡಂಡ ಸಿ.ಕಾರ್ಯಪ್ಪ ಅವರ ಪತ್ನಿ ಅನಿತಾ ಕಾರ್ಯಪ್ಪ, ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಕೆ.ಕೆ.ಬೆಳ್ಳಿಯಪ್ಪ, ಮಾಜಿ ಅಧ್ಯಕ್ಷ ಕೆ.ಎ. ಕಾರ್ಯಪ್ಪ, ಕಾರ್ಯದರ್ಶಿ ಎಂ.ಎಂ. ಪೊನ್ನಪ್ಪ, ಭರಣಿ ಆರ್ಟ್ ಗ್ಯಾಲರಿಯ ಕಾವೇರಪ್ಪ, ಪಾಲಿಕೆ ಸದಸ್ಯ ಎಂ.ಯು. ಸುಬ್ಬಯ್ಯ ಮತ್ತಿತರರು ಹಾಜರಿದ್ದರು.

Translate »