ಬಡವರಿಗೆ ಅಗ್ಗದ ಬೆಲೆಯ ಮದ್ಯ ಮಾರಾಟಕ್ಕೆ ಚಿಂತನೆ
ಮೈಸೂರು

ಬಡವರಿಗೆ ಅಗ್ಗದ ಬೆಲೆಯ ಮದ್ಯ ಮಾರಾಟಕ್ಕೆ ಚಿಂತನೆ

January 1, 2020

ಬೆಂಗಳೂರು, ಡಿ.31(ಕೆಎಂಶಿ)-ಬಡವರು ಮತ್ತು ಗ್ರಾಮೀಣ ಜನತೆಗೆ ಕಡಿಮೆ ದರದಲ್ಲಿ ಮದ್ಯ (ಚೀಪ್ ಲಿಕ್ಕರ್) ಮಾರಾಟ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನತೆ ಕಿರಾಣಿ ಅಂಗಡಿಗಳಲ್ಲಿ ಹೆಚ್ಚು ಬೆಲೆ ನೀಡಿ, ಮದ್ಯ ಖರೀದಿಸುವುದನ್ನು ತಪ್ಪಿಸಲು ಪ್ರತಿ ವಿಧಾನಸಭಾ ಶಾಸಕರ ಕ್ಷೇತ್ರಗಳಲ್ಲಿ ಎಂಎಸ್‍ಐಎಲ್ ಮೂಲಕ ಮದ್ಯದಂಗಡಿ ತೆರೆಯುವುದಾಗಿ ಹೇಳಿದರು. ರಾಜ್ಯಾದ್ಯಂತ ಈಗಾಗಲೇ 765 ಎಂಎಸ್‍ಐಎಲ್ ಮಳಿಗೆಗಳಿದ್ದು, ಮತ್ತೇ 408 ಮಳಿಗೆಗಳನ್ನು ತೆರೆಯಲು ಅನುವು ಮಾಡಿಕೊಡಲಾಗಿದೆ. ಎಲ್ಲಿ ಬೇಡಿಕೆ ಇದಿಯೋ ಅಂತಹ ಕಡೆ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಸಾರಾಯಿ ನಿಷೇಧದ ನಂತರ ಬಡವರಿಗೆ ಕಡಿಮೆ ದರದಲ್ಲಿ ಮದ್ಯ ಕಲ್ಪಿಸಬೇಕೆಂಬ ಉದ್ದೇಶದಿಂದ ಅಂದಿನ ಕಾಲದಲ್ಲೇ ಕಡಿಮೆ ಬೆಲೆ ಮದ್ಯವನ್ನು ತರಲಾಗಿತ್ತು. ಆದರೆ, ವರ್ಷದಿಂದ ವರ್ಷಕ್ಕೆ ಅದರ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಇದನ್ನು ಅವರು ಖರೀದಿಸಲು ಸಾಧ್ಯವಾಗುತ್ತಿಲ್ಲ. ಆರೋಗ್ಯಕ್ಕೆ ಹಾನಿಯಾಗದ ರೀತಿಯಲ್ಲಿ ಕಡಿಮೆ ದರದಲ್ಲಿ ಮದ್ಯ ತಯಾರಿಸಬೇಕಾಗಿದೆ. ಇದೆಲ್ಲವನ್ನು ಗಮನದಲ್ಲಿಟ್ಟು ಕೊಂಡು ಮುಂದಿನ ಮುಂಗಡ ಪತ್ರದ ವೇಳೆಗೆ ಬಡವರಿಗೆ ಸಿಹಿ ಸುದ್ದಿ ಕೊಡುವುದಾಗಿ ತಿಳಿಸಿದರು.

ಬೆಂಗಳೂರು ನಗರ ಹೊರತು ಪಡಿಸಿದರೆ, ಉಳಿದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಡಿಮೆದರದ ಮದ್ಯವೇ ಹೆಚ್ಚು ಮಾರಾಟವಾಗಿ ರಾಜ್ಯ ಬೊಕ್ಕಸಕ್ಕೆ ಆದಾಯ ತರುತ್ತಿದೆ ಎಂದರು.

ರಾಜ್ಯದಲ್ಲಿ ಸದ್ಯಕ್ಕೆ ಮದ್ಯ ನಿಷೇಧಿಸುವ ಪ್ರಸ್ತಾಪ ಇಲ್ಲ. ಹೊಸ ವೈನ್ ಶಾಪ್‍ಗಳನ್ನು ತೆರೆಯಲು ಅನುಮತಿ ನೀಡು ವುದಿಲ್ಲ. ಅಗತ್ಯವಿರುವ ಕಡೆ ಎಂಎಸ್‍ಐಎಲ್‍ನವರೇ ಮಳಿಗೆ ತೆರೆಯುತ್ತಾರೆ. ಪ್ರಸಕ್ತ ವರ್ಷದಲ್ಲಿ ಡಿ.30ರವರೆಗೆ ಮದ್ಯ ಮಾರಾಟ ದಿಂದ 16,100 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ 20,950ಕೋಟಿ ರೂ. ರಾಜಸ್ವ ಸಂಗ್ರಹದ ಗುರಿಯನ್ನು ನಮ್ಮ ಇಲಾಖೆಗೆ ನೀಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಈ ಗುರಿ ತಲುಪುವ ನಿರೀಕ್ಷೆ ಇದೆ. ಡಿಸೆಂಬರ್ ಒಂದೇ ತಿಂಗಳಲ್ಲಿ 1700 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹವಾಗಿದೆ ಎಂದರು. ಬೇಡಿಕೆಯಷ್ಟು ಬಿಯರ್ ನೀಡಲಾಗುತ್ತಿಲ್ಲ ಎಂಬ ಆರೋಪ ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಮಾ ಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Translate »