ಸಿದ್ಧಾರ್ಥನಗರ ಸಂಕೀರ್ಣಕ್ಕೆ ಕಚೇರಿಗಳ ಶೀಘ್ರ ಸ್ಥಳಾಂತರಕ್ಕೆ ಸಚಿವರ ಸೂಚನೆ
ಮೈಸೂರು

ಸಿದ್ಧಾರ್ಥನಗರ ಸಂಕೀರ್ಣಕ್ಕೆ ಕಚೇರಿಗಳ ಶೀಘ್ರ ಸ್ಥಳಾಂತರಕ್ಕೆ ಸಚಿವರ ಸೂಚನೆ

January 5, 2020

ಮೈಸೂರು, ಜ.4(ಎಸ್‍ಬಿಡಿ)- ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ನೂತನ ಜಿಲ್ಲಾ ಕಚೇರಿಗಳ ಸಂಕೀರ್ಣಕ್ಕೆ ಎಲ್ಲಾ ಕಚೇರಿ ಗಳನ್ನು ಶೀಘ್ರ ಸ್ಥಳಾಂತರ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ.

ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಶನಿವಾರ ಸಭೆ ನಡೆಸಿದ ಅವರು, ತ್ವರಿತ ವಾಗಿ ಸ್ಥಳಾಂತರ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನೂತನ ಕಟ್ಟಡದಲ್ಲಿ ಇನ್ನೂ ಕೆಲ ಕೆಲಸಗಳು ಆಗಬೇಕಿದೆ. ಕಂದಾಯ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳಲ್ಲಿ ಇ-ಕಚೇರಿ ವ್ಯವಸ್ಥೆ ಇದೆ. ಆದರೆ ಅದಕ್ಕೆ ಪೂರಕವಾದ ಲ್ಯಾನ್ ನೆಟ್‍ವರ್ಕ್ ವ್ಯವಸ್ಥೆಯನ್ನು ನೂತನ ಕಟ್ಟಡದಲ್ಲಿ ಮಾಡಬೇಕಿದೆ ಎಂದು ತಿಳಿಸಿದರು. ಇದೇ ವೇಳೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಕಾಮಗಾರಿ ಬಾಕಿ ಮೊತ್ತದ ಬಗ್ಗೆ ಸಚಿವರ ಗಮನ ಸೆಳೆದರು. ಸಭೆಯಲ್ಲಿ ಶಾಸಕ ಎಲ್.ನಾಗೇಂದ್ರ, ನಗರ ಪೆÇಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಜ್ಯೋತಿ, ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮ, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ಟೌನ್ ಪ್ಲಾನಿಂಗ್ ಸದಸ್ಯ ಬಿ.ಎನ್.ಗಿರೀಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಒಂದೂವರೆ ವರ್ಷದಿಂದ ಖಾಲಿ: ಸಾರ್ವಜನಿಕರ ಅನುಕೂಲಕ್ಕೆ ಜಿಲ್ಲಾ ಮಟ್ಟದ ಎಲ್ಲಾ ಸರ್ಕಾರಿ ಕಚೇರಿಗಳು ಒಂದೇ ಸೂರಿನಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಉದ್ದೇಶದಿಂದ ಸಿದ್ಧಾರ್ಥನಗರದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಭವ್ಯ ಕಟ್ಟಡ ಒಂದೂವರೆ ವರ್ಷದಿಂದ ಬಿಕೋ ಎನ್ನುತ್ತಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಿದ್ದಾಗ 2018ರ ಮಾರ್ಚ್ ತಿಂಗಳಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ಉದ್ಘಾಟನೆ ಮಾಡಲಾಯಿತು. ಅಂದಿನಿಂದ ಯಾರೂ ಅತ್ತ ಸುಳಿದಿರಲಿಲ್ಲ. 2019ರ ಜೂನ್ ತಿಂಗಳೊಳಗೆ ಎಲ್ಲಾ ಕಚೇರಿಗಳ ಸ್ಥಳಾಂತರಕ್ಕೆ ಮುಂದಾಗಿದ್ದ ಜಿಲ್ಲಾಧಿಕಾರಿಗಳು, ಇನ್ನೂ ಕೆಲವು ಕೆಲಸ ಬಾಕಿ ಇದೆ ಎಂಬ ಕಾರಣದಿಂದ ಮುಂದೂಡಿದ್ದರು. ಆದರೂ ಕೆಲ ತಿಂಗಳ ಹಿಂದೆ ಆಹಾರ ಇಲಾಖೆ, ಭೂಮಾಪನ ಇಲಾಖೆ ಸೇರಿದಂತೆ ನಾಲ್ಕೈದು ಇಲಾಖೆಗಳ ಕಚೇರಿಗಳು ಸ್ಥಳಾಂತರವಾಗಿವೆ. ಆದರೆ ವಿಸ್ತಾರವಾದ ಕಟ್ಟಡ ಈಗಲೂ ಬಿಕೋ ಎನ್ನುತ್ತಿದೆ. ಸುತ್ತಮುತ್ತ ಗಿಡಗಂಟಿ ಬೆಳೆದಿವೆ. ಒಳಾಂಗಣ ಶುಚಿಯಾಗಿಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಈಗಲೂ ಹಲವು ಕಾಮಗಾರಿ, ತಾಂತ್ರಿಕ ಸಂಪರ್ಕ ಕೆಲಸ ಬಾಕಿ ಇದೆ ಎಂದು ತಿಳಿಸಿರುವುದರಿಂದ ಎಲ್ಲಾ ಕಚೇರಿಗಳ ಸ್ಥಳಾಂತರ ಸದ್ಯಕ್ಕೆ ಅನುಮಾನ ಎನ್ನುವಂತಾಗಿದೆ.

Translate »