ಕಾಳಮ್ಮನಕೊಪ್ಪಲು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಎಚ್ಚರಿಕೆ
ಮೈಸೂರು

ಕಾಳಮ್ಮನಕೊಪ್ಪಲು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಎಚ್ಚರಿಕೆ

March 27, 2019

ಮನವೊಲಿಸುವಲ್ಲಿ ತಾಲೂಕು ಆಡಳಿತ ವಿಫಲ, ಆಧಿಕಾರಿಗಳೊಂದಿಗೆ ವಾಗ್ವಾದ
ಭೇರ್ಯ: ಕೆ.ಆರ್.ನಗರ ತಾಲೂಕು ಗಡಿ ಗ್ರಾಮ ಕಾಳಮ್ಮನಕೊಪ್ಪಲು ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಹಿನ್ನೆಲೆ ಎಚ್ಚೆತ್ತ ತಾಲೂಕು ಆಡಳಿತ ಗ್ರಾಮಕ್ಕೆ ತೆರಳಿ ಮನವೊಲಿಕೆಗೆ ಯತ್ನಿಸಿ ನಡೆಸಿದ ಗ್ರಾಮಸ್ಥರ ಸಭೆ ವಿಫಲವಾಯಿತಲ್ಲದೆ, ಆಧಿಕಾರಿಗಳೊಂದಿಗೆ ವಾಗ್ವಾದ ಏರ್ಪಟ್ಟಿತು.

ಸಾಲಿಗ್ರಾಮ ಸಾಲಿಗ್ರಾಮ ಸಮೀಪವಿರುವ ಕಾಳಮ್ಮನಕೊಪ್ಪಲು ಗ್ರಾಮವು ಹತ್ತಾರು ವರ್ಷದಿಂದ ಮೂಲಸೌರ್ಕಗಳಿಂದ ವಂಚಿತವಾಗಿದ್ದು, ಸರ್ಕಾರ ಕೇವಲ ಭರವಸೆ ನೀಡುತ್ತಿದೆಯೇ ಹೊರತು ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ತಹಶೀಲ್ದಾರ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಮಂಗಳವಾರ ಪತ್ರ ಬರೆದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ತಹಶೀಲ್ದಾರ್ ಮಂಜುಳಾ ಅವರು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ದೌಡಾಯಿಸಿ ಅವರ ಸಮಸ್ಯೆಗಳಿಗೆ ಕಿವಿಗೊಟ್ಟರು.

ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಗ್ರಾಮಸ್ಥರನ್ನು ಮನವೊಲಿಸಲು ಪ್ರಯತ್ನಿಸಿ ವಿಫಲರಾದ ತಹಶೀಲ್ದಾರ್ ಮಂಜುಳಾ, ಸಹಾಯಕ ಚುನಾವಣಾ ಅಧಿಕಾರಿ ಗೀತಾ, ತಾಪಂ ಇಓ ಲಕ್ಷ್ಮೀಮೋಹನ್, ವಿವಿಧ ಇಲಾಖಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಪಂ ಪಿಡಿಓ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ತೆರಳಿದರು.

ಗ್ರಾಮಕ್ಕೆ ಅಧಿಕಾರಿಗಳು ಆಗಮಿಸುತ್ತಿದ್ದಂತೆಯೇ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟ ಗ್ರಾಮಸ್ಥರು, ನಮ್ಮ ಊರು ಕುಗ್ರಾಮವಾಗಿದ್ದು, ಕನಿಷ್ಠ ಮೂಲಸೌಲಭ್ಯಗಳಿಂದ ವಂಚಿವಾಗಿದೆ. ಕಳೆದ ಲೋಕಸಭಾ ಉಪಚುನಾಣೆಯಲ್ಲೂ ನಾವೆಲ್ಲರೂ ಸಂಪೂರ್ಣ ಮತದಾನ ಬಹಿಷ್ಕಾರಿಸಿದ್ದಾಗ ತ್ವರಿತಗತಿಯಲ್ಲಿ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಕ್ಕೆ ಆಗಿರುವ ಅಭಿವೃದ್ಧಿ ಕೆಲಸಗಳ ಕುರಿತು ಮಾಹಿತಿ ನೀಡಲು ಮುಂದಾದ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಗ್ರಾಮಸ್ಥರು, ಈವರೆಗೂ ಯಾವೊಂದು ಕೆಲಸಗಳಾಗದಿದ್ದರೂ ಬರೀ ಸುಳ್ಳುಗಳನ್ನೇ ಹೇಳುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಗೊಂದಲದ ಗೂಡಾದ ಸಭೆಯನ್ನು ಯಥಾಸ್ಥಿತಿಗೆ ತರಲು ಪೊಲೀಸರು ಹರಸಾಹಸ ಪಟ್ಟರು.

ಅಧಿಕಾರಿಗಳ ವಿವರಣೆಯನ್ನು ಕೇಳಿಸಿಕೊಳ್ಳದ ಗ್ರಾಮಸ್ಥರು, ಬರೀ ಸುಳ್ಳು ಭರವಸೆ ನೀಡುತ್ತಿದ್ದೀರಾ?. ಯಾವುದೇ ಕಾರಣಕ್ಕೂ ಈ ಚುನಾವಣೆಯಲ್ಲೂ ಮತ ಚಲಾಯಿಸುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು. ಕೊನೆಗೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಧಿಕಾರಿಗಳು ವಾಪಸ್ ತೆರಳುವಂತಾಯಿತು. ಆರು ತಿಂಗಳ ಹಿಂದಷ್ಟೇ ನಡೆದಿದ್ದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲೂ ಮತದಾನ ಬಹಿಷ್ಕಾರಿಸುವುದಾಗಿ ಎಚ್ಚರಿಸಿದ್ದರು.

ಚಿತ್ರಶೀರ್ಷಿಕೆ: ಕಾಳಮ್ಮನಕೊಪ್ಪಲು ಗ್ರಾಮದಲ್ಲಿ ಮಂಗಳವಾರ ಮತದಾನ ಬಹಿಷ್ಕಾರ ಮಾಡುವುದಾಗಿ ಬರೆದಿದ್ದ ಪತ್ರದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದರು.

Translate »