ಸಾರ್ವಜನಿಕರ ಸಮಸ್ಯೆ ಶೀಘ್ರ ಪರಿಹರಿಸಲು ಸೂಚನೆ
ಮಂಡ್ಯ

ಸಾರ್ವಜನಿಕರ ಸಮಸ್ಯೆ ಶೀಘ್ರ ಪರಿಹರಿಸಲು ಸೂಚನೆ

August 2, 2018
  • ರೈತರಿಗೆ ತೊಂದರೆ ನೀಡಿದರೆ ಶಿಸ್ತು ಕ್ರಮ: ಸಚಿವ ಡಿ.ಸಿ.ತಮ್ಮಣ್ಣ ಎಚ್ಚರಿಕೆ

ಮದ್ದೂರು: ‘ಸಾರ್ವಜನಿಕರ ಸರಳ ಕೆಲಸಗಳಿಗೆ ತೊಡಕು ಆಗದಂತೆ ಕೆಲಸನಿರ್ವಹಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ ತ್ವರಿತವಾಗಿ ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೂಚಿಸಿದರು.ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಸಾರ್ವಜನಿಕರಿಂದ ಹಾಗೂ ರೈತರಿಂದ ಹೆಚ್ಚು ದೂರು ಬಂದ ಹಿನ್ನೆಲೆಯಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಎರಡು ತಿಂಗಳಲ್ಲಿ ತಾಲೂಕು ಮಟ್ಟದ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದ್ದು ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಸರಾಗವಾಗಿ ಹಾಗೂ ತ್ವರಿತವಾಗಿ ಕೆಲಸಗಳನ್ನು ಮಾಡಬೇಕು ಹಾಗೂ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ಅಧಿಕಾರಿಗಳು ರೈತರ ಕೆಲಸಗಳನ್ನು ಸಕಾಲದಲ್ಲಿ ಮಾಡದೇ ಅವರಿಗೆ ತೊಂದರೆ ನೀಡಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊ ಳ್ಳಲಾಗುವುದು ಎಂದ ಅವರು, ಕಂದಾಯ ಇಲಾಖೆ ಹಾಗೂ ಭೂ ದಾಖಲೆ ಇಲಾಖೆಯವರು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮಾತನಾಡಿ, ಪ್ರಥಮ ಬಾರಿಗೆ ತಾಲೂಕು ಮಟ್ಟದ ಜನಸಂಪರ್ಕ ಸಭೆಯನ್ನು ಏರ್ಪಡಿಸಿದ್ದು, ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಹಾಗೂ ಜನರ ಕೆಲಸಗಳನ್ನು ವಿಳಂಬ ಮಾಡದೇ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಮೂರ್ತಿ, ಕರಡಕೆರೆ ಯೋಗೇಶ್ ಮಾತನಾಡಿ, ಭಾರತೀನಗರದ ನಾಡಕಚೇರಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಉಪ ತಹಶೀಲ್ದಾರ್ ವೆಂಕಟೇಶ್ ಅವರು ಬೇಜವಾಬ್ದಾರಿ ಪ್ರದ ರ್ಶಿಸುತ್ತಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಯಾವುದೇ ಸರ್ಕಾರಿ ಸವಲತ್ತು ಗಳನ್ನು ನೀಡಲು ಸತಾಯಿಸುತ್ತಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಆತಗೂರು ಶಂಕರ್ ಮಾತನಾಡಿ, ಆತಗೂರು ಹೋಬಳಿಯಲ್ಲಿ ರೀ ಸರ್ವೇ ಆಗದ ಕಾರಣ 4 ಸಾವಿರಕ್ಕೂ ಹೆಚ್ಚು ಅರ್ಜಿಗಳೂ ಬಾಕಿ ಉಳಿದಿವೆ. ಹೀಗಾಗಿ, ಇಲ್ಲಿ ಸಮಸ್ಯೆ ನಿವಾರಣೆ ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಂಜುಶ್ರೀ ಅವರು, ವಾರದಲ್ಲಿ ಎರಡು ದಿನ, ಎಡಿಎಲ್‍ಆರ್ ಡಿಡಿ ಎಲ್‍ಆರ್ ನೇಮಿಸಿ ಅವರಿಗೆ ಸಮಸ್ಯೆಗಳನ್ನು ತಿಳಿಸಿ ಸರ್ವೇ ಸಮಸ್ಯೆ ನಿವಾರಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಗೊರವನಹಳ್ಳಿ ಸುರೇಶ ಮಾತನಾಡಿ, ತಾಲ್ಲೂಕು ಕಚೇರಿಯಲ್ಲಿ ಪುನರ್ ಸರ್ವೇ ಕಾರ್ಯ ಮಾಡಲು ರಾಜಸ್ವ ನಿರೀಕ್ಷಕ ನಾಗರಾಜು 2 ಸಾವಿರ ಲಂಚ ಕೇಳುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವರು ನಾಗರಾಜು ಅವರ ಅಮಾನತು ಪಡಿಸಬೇಕು ಎಂದು ಸೂಚನೆ ನೀಡಿದರು. ಈ ವೇಳೆ ಪ್ರಕೃತಿ ವಿಕೋಪದಡಿ ಮಳೆಯಿಂದ ಮನೆ ಹಾನಿಯಾದವರಿಗೆ ಸಹಾಯಧನ ಚೆಕ್‍ಗಳನ್ನು ವಿತರಿಸಲಾಯಿತು. ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ವೃದ್ದಾಪ್ಯ ವೇತನ ಹಾಗೂ ಅಂಗವಿಕಲರ ವೇತನ ಪ್ರಮಾಣ ಪತ್ರ ವಿತರಿಸಲಾಯಿತು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಮದ್ದೂರು ಪುರಸಭೆಯ ಅಧ್ಯಕ್ಷೆ ಉಮಾ ಪ್ರಕಾಶ್, ಉಪಾಧ್ಯಕ್ಷೆ ಪಾರ್ವತಮ್ಮ, ಮಂಡ್ಯ ಉಪ ವಿಭಾಗಾ ಧಿಕಾರಿ ರಾಜೇಶ್, ಮದ್ದೂರು ತಹಶೀ ಲ್ದಾರ್ ಶಿವಪ್ಪ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Translate »