ಮೈಸೂರು: ಮೈಸೂರಿನ ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಕೃತಿಗಳ ಕುರಿತಾದ 2 ದಿನಗಳ ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ ಕಾರ್ಯ ಕ್ರಮವನ್ನು ಜ.19ರಂದು ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 9.30ಕ್ಕೆ ಮೈಸೂರಿನ ಹುಣ ಸೂರು ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಕಾರ್ಯ ಕ್ರಮ ನಡೆಯಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರು ಹಾಗೂ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಚಂದ್ರಶೇಖರ ಕಂಬಾರ ಉದ್ಘಾಟನೆ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಖ್ಯಾತ ಭಾಷಾ ಶಾಸ್ತ್ರಜ್ಞ ಡಾ.ಪ್ರದಾನ ಗುರುದತ್ತ ಅವರು ಡಾ.ಎಸ್.ಎಲ್.ಭೈರಪ್ಪನವರೊಂದಿಗಿನ ಸಂದರ್ಶನಗಳ ಸಂಕಲನ ಚಿಂತನ-ಮಂಥನ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.
ಭಾಷಣಕಾರರಾಗಿ ಶತಾವಧಾನಿ ಡಾ.ಆರ್.ಗಣೇಶ್ ಪಾಲ್ಗೊಳ್ಳಲಿದ್ದಾರೆ. ನಂತರ ಮಧ್ಯಾಹ್ನ 2.30ರಿಂದ 5 ಗಂಟೆಯವರೆಗೆ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಲೇಖಕ ಡಾ.ಕೃಷ್ಣೇಗೌಡ ಅವರ ಭಾಷಣವಿದ್ದು, ನಂತರ ಡಾ.ಎಸ್.ಎಲ್. ಭೈರಪ್ಪನವರೊಂದಿಗೆ ಸಂದರ್ಶನ ಕಾರ್ಯಕ್ರಮವಿದೆ.
ಸಂಜೆ 5.15ರಿಂದ ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿಯಲ್ಲಿ ಕಾಣಬರುವ ರಾಗಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪಂಡಿತ್ ನಾಗರಾಜ್‍ರಾವ್ ಹವಾಲ್ದಾರ್ ಅವರಿಂದ ಗಾಯನವಿದೆ. ಸಂಜೆ 6.30ಕ್ಕೆ ಭೈರಪ್ಪನವರ ಕಾದಂಬರಿ ಆಧರಿಸಿದ ಮಂದ್ರ ಕನ್ನಡ ನಾಟಕ ಪ್ರದರ್ಶನವಿದ್ದು, ಬೆಂಗಳೂರಿನ ಕಲಾಗಂಗೋತ್ರಿ ತಂಡದ ಕಲಾವಿದರು ಅಭಿನಯಿಸಲಿದ್ದಾರೆ.
ಜ.20ರಂದು ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಹಾಗೂ ಲೇಖಕ ಡಾ.ನಂದಕಿಶೋರ್ ಆಚಾರ್ಯ ಅವರ ಭಾಷಣವಿದ್ದು, ನಂತರ ಸಾಹಿತ್ಯೋತ್ಸವದ ಕೇಂದ್ರ ಬಿಂದು ಡಾ.ಎಸ್.ಎಲ್.ಭೈರಪ್ಪನವರ ಭಾಷಣವಿದೆ.