ಚಾ.ಬೆಟ್ಟ ವ್ಯಾಪಾರಿಗಳೊಂದಿಗೆ ಅಧಿಕಾರಿಗಳ ಸಭೆ
ಮೈಸೂರು

ಚಾ.ಬೆಟ್ಟ ವ್ಯಾಪಾರಿಗಳೊಂದಿಗೆ ಅಧಿಕಾರಿಗಳ ಸಭೆ

September 8, 2019

ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಅಂಗಡಿಗಳ ತೆರವುಗೊಳಿಸದಂತೆ ಮನವಿ
ಮೈಸೂರು,ಸೆ.7(ಎಸ್‍ಬಿಡಿ)- ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ನಮ್ಮನ್ನು ತೆರವು ಗೊಳಿಸಬೇಡಿ ಎಂದು ಚಾಮುಂಡಿ ಬೆಟ್ಟದ ವ್ಯಾಪಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಚಾಮುಂಡಿ ಬೆಟ್ಟದ ದಾಸೋಹ ಭವನ ದಲ್ಲಿ ಶನಿವಾರ ಅಪರ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಹಾಗೂ ಜಿ.ಪಂ. ಸಿಇಓ ಕೆ.ಜ್ಯೋತಿ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ವ್ಯಾಪಾರಿಗಳು, ಸ್ಥಳೀಯ ಜನಪ್ರತಿ ನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಶಕ ಗಳಿಂದ ವ್ಯಾಪಾರ ಮಾಡಿಕೊಂಡಿರುವ ನಮ್ಮನ್ನು ಏಕಾಏಕಿ ತೆರವುಗೊಳಿಸಬೇಡಿ. ಜೀವನ ನಿರ್ವಹಣೆಗೆ ವ್ಯಾಪಾರವನ್ನೇ ಅವಲಂಬಿಸಿದ್ದೇವೆ. ವ್ಯಾಪಾರ ನಿಂತರೆ ನಮ್ಮ ಕುಟುಂಬಗಳು ಬೀದಿ ಪಾಲಾಗು ತ್ತವೆ. ಗ್ರಾಮ ಪಂಚಾಯ್ತಿಯಿಂದ ಪರವಾನಗಿ ಪಡೆದಿರುವ 91 ವ್ಯಾಪಾರಿಗಳು ಸೇರಿದಂತೆ 340ಕ್ಕೂ ಹೆಚ್ಚು ಮಂದಿ ವ್ಯಾಪಾರದಿಂದ ಜೀವನ ಕಟ್ಟಿಕೊಂಡಿದ್ದೇವೆ. ಕೆಲ ವರ್ಷಗಳಿಂದ ಪರವಾನಗಿ ನೀಡದ ಕಾರಣಕ್ಕೆ ಪರವಾನಗಿ ರಹಿತವಾಗಿ ವ್ಯಾಪಾರ ಮಾಡುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ಅನಧಿಕೃತ ವ್ಯಾಪಾರಿಗಳೆಂದು ಪರಿಗಣಿಸು ವುದು ಸರಿಯಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದ ಬಳಿ ನಿರ್ಮಿಸಿರುವ 116 ಮಳಿಗೆಗಳಲ್ಲಿ ಪರವಾನಗಿಯುಳ್ಳ ವ್ಯಾಪಾರಿಗಳಿಗೆ ಅವ ಕಾಶ ಕಲ್ಪಿಸಿ, ಉಳಿದವರಿಗೆ ಬೇರೆ ಸ್ಥಳ ದಲ್ಲಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದೀರಿ. ಆದರೆ ಜನ ಸಂಚಾರವಿಲ್ಲದ ಸ್ಥಳದಲ್ಲಿ ಸ್ಥಳಾವಕಾಶ ಕಲ್ಪಿಸಿದರೆ ನಮಗೆ ನಷ್ಟವಾಗು ವುದರ ಜೊತೆಗೆ ಪ್ರವಾಸಿಗರಿಗೂ ತೊಂದರೆಯಾಗುತ್ತದೆ. ವಾಹನ ಪಾರ್ಕಿಂಗ್ ಸಮೀಪದಲ್ಲೇ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ಸಾಲ ಮಾಡಿ ಬಂಡವಾಳ ಹೂಡಿದ್ದೇವೆ. ದಸರಾ ಸಂದರ್ಭ ದಲ್ಲೇ ನಮಗೊಂದಿಷ್ಟು ಆದಾಯ ಸಿಗುತ್ತದೆ. ಈಗ ಖಾಲಿ ಮಾಡಿಸಿದರೆ ನಷ್ಟವಾಗಿ, ಸಾಲ ತೀರಿಸುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಹೊಸ ಮಳಿಗೆ ಗಳಲ್ಲಿ ಇನ್ನೂ ಮೂಲ ಸೌಲಭ್ಯಗಳಿಲ್ಲ. ಎಲ್ಲಾ ವ್ಯಾಪಾರಿಗಳಿಗೂ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ನಾವೇ ಸ್ಥಳಾಂತರ ಮಾಡುತ್ತೇವೆ ಎಂದು ಒಕ್ಕೊರಲ ಅಭಿಪ್ರಾಯ ತಿಳಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಗ್ರಾಪಂ ಸದಸ್ಯರುಗಳು, ಚಾಮುಂಡಿ ಬೆಟ್ಟದ ನಿವಾಸಿಗಳ ಹಿತ ಕಾಯಬೇಕು. ಹತ್ತಾರು ವರ್ಷಗಳಿಂದ ವ್ಯಾಪಾರವೇ ಇವರ ಜೀವನಕ್ಕೆ ಆಧಾರವಾಗಿದೆ. ವ್ಯಾಪಾರಿಗಳೆಲ್ಲಾ ಶ್ರೀಮಂತರಲ್ಲ. ಒಂದು ದಿನ ವ್ಯಾಪಾರ ನಡೆಯದಿದ್ದರೂ ಸಂಕಷ್ಟ ಅನುಭವಿಸುವ ಸ್ಥಿತಿಯಲ್ಲಿದ್ದಾರೆ. ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿದ ಬಳಿಕ ತೆರವು ಕಾರ್ಯಾಚರಣೆಗೆ ಮುಂದಾಗಬೇಕೆಂದು ತಿಳಿಸಿದರು.

ವ್ಯಾಪಾರಿಗಳ ಮನವಿಗೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ, ನಿಮ್ಮ ಅಭಿಪ್ರಾಯವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಗಳ ಗಮನಕ್ಕೆ ತರುವುದಾಗಿ ಹೇಳಿದರು.

ಚಾಮುಂಡಿ ಬೆಟ್ಟ ಗ್ರಾಪಂ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ನರೇಂದ್ರ ನಾಯಕ್, ತಹಶಿಲ್ದಾರ್ ಟಿ.ರಮೇಶ್‍ಬಾಬು, ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್ ವಿನಯ್ ಕುಮಾರ್, ಎಇಇ ರಾಜು, ತಾಪಂ ಇಓ ಕೃಷ್ಣಕುಮಾರ್, ಚಾಮುಂಡೇಶ್ವರಿ ದೇವಾಲಯದ ಇಓ ಯತಿರಾಜ್, ವ್ಯವ ಸ್ಥಾಪಕ ಸಮಿತಿ ಅಧ್ಯಕ್ಷ ಕಾಳಯ್ಯ ಹಾಗೂ ಸುಮಾರು 250ಕ್ಕೂ ಹೆಚ್ಚು ವ್ಯಾಪಾರಿ ಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ, ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ದಸರಾ ಆರಂಭವಾ ಗುವುದರೊಳಗೆ ಅನಧಿಕೃತ ಅಂಗಡಿ ಗಳನ್ನು ತೆರವುಗೊಳಿಸಿ, ಪರವಾನಗಿ ಪಡೆದಿರುವ ವ್ಯಾಪಾರಿಗಳನ್ನು ಹೊಸ ಮಳಿಗೆಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ನಂತರ ವ್ಯಾಪಾರಿಗಳು ಕಳೆದ ಬುಧವಾರ ಜಲದರ್ಶಿನಿ ಅತಿಥಿ ಗೃಹದಲ್ಲಿ ಸಚಿವರನ್ನು ಭೇಟಿ ಮಾಡಿ, ದಸರಾ ಮುಗಿಯುವವರೆಗೆ ತೆರವು ಗೊಳಿಸದಂತೆ ಮನವಿ ಮಾಡಿದ್ದರು. ಆದರೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂದು ಶುಕ್ರವಾರ ಸಾಂಕೇ ತಿಕವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ,
ಪ್ರತಿಭಟಿಸಿದ್ದರಲ್ಲದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಸಹಕಾರ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ದೂರವಾಣಿ ಮೂಲಕ ಸಚಿವ ವಿ. ಸೋಮಣ್ಣ ಹಾಗೂ ಜಿಲ್ಲಾಧಿಕಾರಿ ಅಬಿ üರಾಮ್ ಜಿ.ಶಂಕರ್ ಅವರನ್ನು ಸಂಪ ರ್ಕಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸುವ ವರೆಗೆ ವ್ಯಾಪಾರಿಗಳನ್ನು ತೆರವು ಮಾಡದಂತೆ ಕೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »