ಮಾ. 22ರಂದು ಕಾಂಗ್ರೆಸ್  20 ಅಭ್ಯರ್ಥಿಗಳ ಪಟ್ಟಿ ಪ್ರಕಟ
ಮೈಸೂರು

ಮಾ. 22ರಂದು ಕಾಂಗ್ರೆಸ್ 20 ಅಭ್ಯರ್ಥಿಗಳ ಪಟ್ಟಿ ಪ್ರಕಟ

March 19, 2019

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸಲಿರುವ ಇಪ್ಪತ್ತು ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್ 22 ರಂದು ಅಂತಿಮಗೊಳಿಸಲು ಎಐಸಿಸಿ ಮುಖಂಡರು ನಿರ್ಧರಿಸಿದ್ದಾರೆ.

ಬೆಂಗಳೂರು ಉತ್ತರ, ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡದೆ ಜೆಡಿಎಸ್‍ಗೆ ಬಿಟ್ಟುಕೊಡಲು ನಿರ್ಧಾರವಾಗಿರುವ ಹಿನ್ನೆಲೆಯಲ್ಲಿ ಎಂಟು ಕ್ಷೇತ್ರಗಳಲ್ಲಿರುವ ಹಾಲಿ ಸಂಸದರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದ್ದು ಉಳಿದಂತೆ 12 ಕ್ಷೇತ್ರಗಳ ಕ್ಯಾಂಡಿಡೇಟುಗಳ ಪಟ್ಟಿಯನ್ನು ಅಂದು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ.ಜೆಡಿಎಸ್ ಜತೆಗಿನ ಮೈತ್ರಿಗಿಂತ ಕಾಂಗ್ರೆಸ್ ಪಕ್ಷ ಫ್ರೆಂಡ್ಲಿ ಫೈಟ್‍ಗೆ ಅನುವು ಮಾಡಿಕೊಳ್ಳಬೇಕಿತ್ತು.ಹಾಗೆ ಮಾಡದೆ ಇರುವುದರಿಂದ ಹಲವು ಕ್ಷೇತ್ರಗಳಲ್ಲಿ ಗೊಂದಲ ಎದುರಾಗಿದೆ ಎಂದು ರಾಜ್ಯದ ಕಾಂಗ್ರೆಸ್ ನಾಯಕರು ಹೈಕಮಾಂಡ್‍ಗೆ ದೂರಿದ್ದಾರೆ.

ಪರಿಣಾಮವಾಗಿ ನಾಳೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಬೇಕಿತ್ತಾದರೂ ಆ ಪ್ರಕ್ರಿಯೆಯನ್ನು ಮಾರ್ಚ್ ಇಪ್ಪತ್ತೆರಡಕ್ಕೆ ಮುಂದೂಡಲು ತೀರ್ಮಾನಿಸಲಾಯಿತು.

ಅಂದ ಹಾಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಪರಿಣಾಮವಾಗಿ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‍ನ ಸ್ಥಳೀಯ ನಾಯಕರು ಬಂಡಾಯದ ಬಾವುಟ ಹಾರಿಸಿದ್ದು ಹಾಸನ ಜಿಲ್ಲೆಯ ನಾಯಕ ಎ.ಮಂಜು ಇದೀಗ ಬಿಜೆಪಿ ಕ್ಯಾಂಡಿಡೇಟ್ ಆಗಿ ಕಣಕ್ಕಿಳಿಯವುದು ನಿಶ್ಚಿತವಾಗಿದೆ. ಇದೇ ರೀತಿ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಕಾಂಗ್ರೆಸ್ ನಿರ್ಧಾರವನ್ನು ವಿರೋಧಿಸಿ ಸ್ಥಳೀಯ ನಾಯಕರನೇಕರು ಬಿಜೆಪಿ ಜತೆ ಒಳ ಸಂಧಾನ ಮಾಡಿಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಸಂಭಾವ್ಯತೆ ಕಡಿಮೆಯಾಗುತ್ತಿರುವ ಕುರಿತು ಹಲವು ಕ್ಯಾಂಡಿಡೇಟುಗಳು ಅಪಸ್ವರ ಎತ್ತುತ್ತಿರುವು ದರಿಂದ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಆದ್ದರಿಂದಲೇ ಮಾರ್ಚ್ ಹತ್ತೊಂ ಭತ್ತರಂದು ನಡೆಯಬೇಕಿದ್ದ ಪಟ್ಟಿ ಫೈನಲೈಸ್ ಸಭೆ ಮೂರು ದಿನಗಳ ಮಟ್ಟಿಗೆ ಮುಂದಕ್ಕೆ ಹೋಗಿದ್ದು,ಅಷ್ಟರಲ್ಲಿ ಸ್ಥಳೀಯ ಮಟ್ಟದಲ್ಲಿ ಎದ್ದಿರುವ ಅಸಮಾಧಾನವನ್ನು ನಿವಾರಿಸುವಂತೆ ರಾಜ್ಯ ನಾಯಕರಿಗೆ ಸಲಹೆ ನೀಡಲಾಗಿದೆ.

Translate »