ವಿಚಾರಣೆಗಾಗಿ ಶಂಕಿತ ನಕ್ಸಲ್ ಮುಖಂಡನನ್ನು  ಮಡಿಕೇರಿಗೆ ಕರೆತಂದ ಪೊಲೀಸರು
ಕೊಡಗು

ವಿಚಾರಣೆಗಾಗಿ ಶಂಕಿತ ನಕ್ಸಲ್ ಮುಖಂಡನನ್ನು ಮಡಿಕೇರಿಗೆ ಕರೆತಂದ ಪೊಲೀಸರು

March 19, 2019

ಮಡಿಕೇರಿ: ದಕ್ಷಿಣ ಭಾರತದಲ್ಲಿ ನಿಷೇಧಿತ ನಕ್ಸಲ್ ಸಂಘಟನೆಯ ಚಟು ವಟಿಕೆಯನ್ನು ಸಕ್ರಿಯಗೊಳಿಸುವ ಹೊಣೆ ಹೊತ್ತ ಆರೋಪ ಎದುರಿಸುತ್ತಿರುವ ಶಂಕಿತ ನಕ್ಸಲ್ ಮುಖಂಡ ರೂಪೇಶ್ ಎಂಬಾತನನ್ನು ವಿಚಾರಣೆಗಾಗಿ ಮಡಿಕೇರಿಗೆ ಕರೆತರಲಾಗಿದೆ.

ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ರೂಪೇಶ್‍ನ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯಲ್ಲಿ ಸೋಮವಾರ ಸಂಜೆ ಕರೆತಂದು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ರೂಪೇಶನನ್ನು ಇಡಲಾಯಿತು. ಕೇರಳ ರಾಜ್ಯದ ವೈವೂರು ಕೇಂದ್ರ ಕಾರಾ ಗೃಹದಲ್ಲಿದ್ದ ಶಂಕಿತ ನಕ್ಸಲ್ ರೂಪೇಶ್‍ನನ್ನು ಕೇರಳ ಪೊಲೀಸರು ಹಾಗೂ ಕೊಡಗು ಕಮಾಂಡೊ ಶಸ್ತ್ರ ಸಜ್ಜಿತ ಸಿಬ್ಬಂದಿಗಳು ಮಡಿಕೇರಿ ಕೇಂದ್ರ ಕಾರಾ ಗೃಹಕ್ಕೆ ಸ್ಥಳಾಂತರಿಸಿದರು.

ಪ್ರಕರಣ ಹಿನ್ನೆಲೆ: ಶಂಕಿತ ನಕ್ಸಲ್ ಮುಖಂಡ ರೂಪೇಶ್ ವಿರುದ್ದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಆರೋಪಗಳಿವೆ. 2010ರಲ್ಲಿ ಭಾಗಮಂಡಲ ಸಮೀಪದ ಮುಂಡ್ರೋಟು ಮತ್ತು 2013ರಲ್ಲಿ ಕಾಲೂರು ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಎನ್ನಲಾಗಿದೆ. ಮಾತ್ರವಲ್ಲದೆ ಕಾಲೂರಿನ ನಿವಾಸಿ ಗಣೇಶ್ ಎಂಬುವರ ಮನೆಗೆ ನುಗ್ಗಿ ಪಡಿತರ ಸಾಮಾಗ್ರಿ ಹೊತ್ತೊಯ್ದಿರುವುದು ಮತ್ತು ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳೂ ದಾಖಲಾಗಿದೆ.

ಕೊಡಗು ಜಿಲ್ಲೆಯಲ್ಲಿ ದಾಖಲಾದ 2 ಪ್ರಕರಣದ ವಿಚಾರಣೆಗಾಗಿ 2016ರಲ್ಲಿ ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭ ಮಡಿಕೇರಿ ಗ್ರಾಮಾಂತರ ಪೊಲೀಸರು ಶಂಕಿತ ಆರೋಪಿ ರೂಪೇಶ್‍ನನ್ನು ವಶಕ್ಕೆ ಪಡೆದುಕೊಂಡು 1 ದಿನ ವಿಚಾರಣೆ ಯನ್ನು ಕೂಡ ನಡೆಸಿದ್ದರು.

ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ಪ್ರಕರಣದ ವಿಚಾರಣೆಗಾಗಿ ಇದೀಗ 4ನೇ ಬಾರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾನೆ. ಮಂಗಳವಾರ ಬೆಳಿಗ್ಗೆ ಆರೋಪಿ ರೂಪೇಶ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಳಿಕ ಕೇರಳಕ್ಕೆ ಕರೆದೊಯ್ಯಲಾಗುತ್ತದೆ.

Translate »