ಮೈಸೂರಿನ ಪ್ರವಾಸಿ ತಾಣಗಳಿಗೆ ಆನ್‍ಲೈನ್ ಟಿಕೆಟ್ ಜಾರಿಗೆ ಚಿಂತನೆ
ಮೈಸೂರು

ಮೈಸೂರಿನ ಪ್ರವಾಸಿ ತಾಣಗಳಿಗೆ ಆನ್‍ಲೈನ್ ಟಿಕೆಟ್ ಜಾರಿಗೆ ಚಿಂತನೆ

February 20, 2020

ಮೈಸೂರು, ಫೆ.19- ಮೈಸೂರು ನಗರವು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ನಗರದ ವಿವಿಧ ಪ್ರವಾಸಿ ತಾಣಗಳಿಗೆ ದೇಶ, ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆಯು ಬುಕ್ ಮೈ ಶೋ ಆಪ್ ಸಹಯೋಗದಲ್ಲಿ ಸಿಟಿ ಪಾಸ್ ಹಾಗೂ ಸಿಂಗಲ್ ಟಿಕೆಟಿಂಗ್ ಸಿಸ್ಟಮ್ ಜಾರಿ ಮಾಡಲು ಉದ್ದೇಶಿಸಿ ಕರ್ನಾಟಕ ರಾಜ್ಯ ಪ್ರವಾ ಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಲಾಯಿತು.

ನಗರದ ಹೋಟೆಲ್ ಮಯೂರದಲ್ಲಿ ನಡೆದ ಸಭೆಯಲ್ಲಿ ವ್ಯವ ಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಮಾತನಾಡಿ, ಆನ್‍ಲೈನ್ ಟಿಕೆಟ್ ಜಾರಿ ಮಾಡುವುದರಿಂದ ಪ್ರವಾಸಿಗರಿಗೆ ಹೆಚ್ಚಿನ ಮಟ್ಟದಲ್ಲಿ ಅನುಕೂಲವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗ ಮಿಸುತ್ತಾರೆ. ಈ ನಿಟ್ಟಿನಲ್ಲಿ ನಗರದ ಅನೇಕ ಪ್ರವಾಸಿತಾಣಗಳಿಗೆ ಆನ್‍ಲೈನ್ ಟಿಕೆಟ್ ಸೇವೆಯನ್ನು ಜಾರಿ ಮಾಡಲು ಚಿಂತಿಸಲಾಗಿದೆ ಎಂದರು. ಮೈಸೂರಿನ ಪ್ರಮುಖ ಪ್ರವಾಸಿತಾಣಗಳಾದ ಚಾಮುಂಡಿ ಬೆಟ್ಟ, ಸೆಂಟ್‍ಫಿಲೋಮಿನಾ ಚರ್ಚ್, ಅರಮನೆ, ಸ್ಯಾಂಡ್ ಮ್ಯೂಸಿಯಂ, ವ್ಯಾಕ್ಸ್ ಮ್ಯೂಸಿಯಂ, ರೈಲ್ವೆ ಮ್ಯೂಸಿಯಂ, ಲಲಿತ ಮಹಲ್ ಪ್ಯಾಲೆಸ್, ಮೃಗಾಲಯ, ಕಾರಂಜಿ ಕೆರೆ ಮುಂತಾದ ಸ್ಥಳಗಳಲ್ಲಿ ಆನ್‍ಲೈನ್ ಮಾದರಿಯಲ್ಲಿ ಟಿಕೆಟ್ ವ್ಯವಸ್ಥೆ ಕಲ್ಪಿಸಿ, ಸ್ಥಳಗಳನ್ನು ವೀಕ್ಷಿಸಲು ಸುಲಭವಾಗುವಂತೆ ಮಾಡಬೇಕು ಎಂದು ಮಾಹಿತಿ ನೀಡಿದರು.

ನಾಡಹಬ್ಬ ಮೈಸೂರು ದಸರಾದಲ್ಲಿ ಪ್ರವಾಸಿಗರು ನಗರದಲ್ಲಿ ರುವ ಎಲ್ಲಾ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಸಾಧ್ಯವಾಗುವು ದಿಲ್ಲ. ಅಲ್ಲದೆ, ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ಮೈದಾನದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೋಡಲು ಕೂಡಾ ವಿದೇಶಿಗರಿಗೆ ಟಿಕೆಟ್ ದೊರೆಯುವುದಿಲ್ಲ. ಈ ನಿಟ್ಟಿನಲ್ಲಿ ವಿದೇಶಿ ಪ್ರವಾಸಿಗರಿಗಾಗಿಯೇ ಸ್ವಲ್ಪ ಟಿಕೆಟ್ ಮೀಸಲಿ ಡಬೇಕು ಎಂದು ಹೇಳಿದರು. ದಸರಾ ಹಬ್ಬಕ್ಕೆ ಈಗಿನಿಂದಲೇ ಸಭೆ ಸೇರಿ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಂಡು, ದಸರಾ ಸಮೀಪದಲ್ಲಿ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರವಾಸೋದ್ಯಮ ಸಚಿವರು ಸೂಚಿಸಿದ್ದಾರೆ. ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಪೂರಕವಾಗುವಂತೆ ಎಲ್ಲಾ ಸೌಲಭ್ಯವನ್ನು ಒದಗಿಸ ಬೇಕು ಎಂದರು. ಮುಂಬರುವ ಅಂತಾರಾಷ್ಟ್ರೀಯ ಯೋಗ ದಿನಾ ಚರಣೆಯಲ್ಲಿ ಹೆಚ್ಚಿನ ಯೋಗಪಟುಗಳೊಂದಿಗೆ ಆಚರಿಸುಲು ಪೂರ್ವ ಸಿದ್ಧತೆ ಮಾಡಲಾಗಿದ್ದು, ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕು ಎಂದರು. ಆಯುಷ್ ಜಿಲ್ಲಾ ಅಧಿಕಾರಿ ಡಾ.ಬಿ.ಎಸ್. ಸೀತಾಲಕ್ಷ್ಮೀ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ಧನ, ಜಿಎಸ್‍ಎಸ್ ಫೌಂಡೇಷನ್‍ನ ಶ್ರೀಹರಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಯೋಗ ಫೆಡರೇಷನ್ ಆಫ್ ಮೈಸೂರಿನ ಎಸ್.ಶಶಿಕುಮಾರ್, ಎಚ್.ಕೆ.ಗೀತಾಕುಮಾರ್, ಮಹಾನಗರ ಪಾಲಿಕೆ ಅಭಿವೃದ್ಧಿ ಅಧಿಕಾರಿ ಎನ್.ಸುನೀಲ್, ಬುಕ್ ಮೈ ಶೋ ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »