ನಂಜನಗೂಡಿನಲ್ಲಿ ಕಾರ್ಮಿಕ ಕಲ್ಯಾಣ ಸಚಿವ ವೆಂಕಟರಮಣಪ್ಪರಿಂದ 9.5 ಕೋಟಿ ವೆಚ್ಚದ ಇಎಸ್‍ಐ ಆಸ್ಪತ್ರೆ, ಡಯಾಗ್ನೋಸ್ಟಿಕ್ ಕೇಂದ್ರ ಲೋಕಾರ್ಪಣೆ
ಮೈಸೂರು

ನಂಜನಗೂಡಿನಲ್ಲಿ ಕಾರ್ಮಿಕ ಕಲ್ಯಾಣ ಸಚಿವ ವೆಂಕಟರಮಣಪ್ಪರಿಂದ 9.5 ಕೋಟಿ ವೆಚ್ಚದ ಇಎಸ್‍ಐ ಆಸ್ಪತ್ರೆ, ಡಯಾಗ್ನೋಸ್ಟಿಕ್ ಕೇಂದ್ರ ಲೋಕಾರ್ಪಣೆ

March 6, 2019

ನಂಜನಗೂಡು: ಸಂಸದ ಆರ್.ಧ್ರುವನಾರಾಯಣ್ ಪರಿಶ್ರಮದ ಫಲವಾಗಿ ನಂಜನಗೂಡಿನಲ್ಲಿಂದು ಅತ್ಯಾಧುನಿಕ ಇಎಸ್‍ಐ ಆಸ್ಪತ್ರೆಯನ್ನು ಕಾರ್ಮಿಕರಿಗೆ ಲೋಕಾರ್ಪಣೆಗೊಳಿಸಲಾಗಿದೆ. ಇದರ ಸದುಪಯೋಗವನ್ನು ಈ ಭಾಗದ ಕಾರ್ಮಿಕರು ಪಡೆಯಬೇಕೆಂದು ರಾಜ್ಯ ಕಾರ್ಮಿಕ ಕಲ್ಯಾಣ ಸಚಿವ ವೆಂಕಟರಮಣಪ್ಪ ಸಲಹೆ ನೀಡಿದರು.

ನಂಜನಗೂಡಿನಲ್ಲಿಂದು 9 ಕೋಟಿ 50 ಲಕ್ಷ ವೆಚ್ಚದಲ್ಲಿ ಕಾರ್ಮಿಕ ರಾಜ್ಯ ವಿಮಾ ನಿಗಮದಿಂದ ನಿರ್ಮಾಣವಾಗಿರುವ ಇಎಸ್‍ಐ ಚಿಕಿತ್ಸಾಲಯಾ ಮತ್ತು ಡಯಾಗ್ನೋಸ್ಟಿಕ್ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಮೈಸೂರಿನಲ್ಲಿ ಸುಮಾರು 25 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿದೆ. ಅದರಂತೆಯೇ ಈ ಭಾಗದ ಕಾರ್ಮಿಕರ ಹಿತ ರಕ್ಷಣೆ ಗಮನದಲ್ಲಿಟ್ಟುಕೊಂಡು ಆಸ್ಪತ್ರೆ ತೆರೆಯಲಾಗಿದೆ. ಕಲ್ಬುರ್ಗಿಯಲ್ಲಿ ಸುಮಾರು 1, 240 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ನಾನು ಸಚಿವನಾದ ಮೇಲೆ ಕಾರ್ಮಿಕರ ಹಿತ ರಕ್ಷಣೆಗಾಗಿ ಹಲವು ಜನಪರ ಯೋಜನೆಗಳನ್ನು ಕೈಗೊಂಡಿದ್ದು, ಆಸಂಘಟಿತ ಹಾಗೂ ಅತ್ಯಂತ ಕಡಿಮೆ ಜನ ಸಂಖೆಯುಳ್ಳ ಕುಂಬಾರ, ಕಂಬಾರ, ಮಡಿವಾಳ, ಇಂತಹ ಹಲವು ಸಮಾಜಗಳನ್ನು ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ತಂದಿದ್ದೇನೆ ಹಾಗೂ ಕಾರ್ಮಿಕರ ಮಕ್ಕಳ ವಿದ್ಯಾಬ್ಯಾಸ, ಕಲ್ಯಾಣ ಕಾರ್ಯಕ್ರಮಗಳಿಗೆ ಇಲಾಖೆಯಿಂದ ನೀಡುತ್ತಿದ್ದ ಅನುದಾನವನ್ನು ದುಪಟ್ಟು ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಮಿಕರಿಗೆ ವಸತಿ ನಿರ್ಮಾಣಕ್ಕಾಗಿ 5 ಲಕ್ಷದ ವರೆಗೆ ಸಹಾಯ ಧನ ನೀಡಲಾಗುವುದು. ಈಗ ಆಸ್ಪತ್ರೆಗೆ ಕೇಂದ್ರ ಸರ್ಕಾರ ಸಹಯೋಗದೊಂದಿಗೆ ತಜ್ಞ ವೈದ್ಯರು, ಯಂತ್ರೋಪಕರಣಗಳನ್ನು ಶೀಘ್ರದಲ್ಲೇ ಅಳವಡಿಲಾಗುವುದು. ಕಾರ್ಮಿಕ ಇಲಾಖೆಯಯಿಂದ ನಿರುದ್ಯೋಗಿ ಯುವ ಜನತೆಗೆ ಕೌಶಲ್ಯ ತರಬೇತಿ ನೀಡುತ್ತಿದ್ದು, ಅವರಿಗೆ ಪ್ರತಿದಿನ 249 ರೂ. ಗೌರವಧನ ನೀಡಲಾಗುತ್ತದೆ. ನಂತರ ಅವರಿಗೆ ಉಚಿತ ಕಿಟ್ ನೀಡಲಾಗುವುದು. ಒಟ್ಟಾರೆ ಕಾರ್ಮಿಕರ ಹಿತ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಂಸದ ಧ್ರುವನಾರಾಯಣ್ ಮಾತನಾಡಿ, ಕೇಂದ್ರದ ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಕೇಂದ್ರ ಸರ್ಕಾರದ ಕಾರ್ಮಿಕ ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು 9.50 ಕೋಟಿ ಅನುದಾನವನ್ನು ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರಲ್ಲದೆ, ಇಎಸ್‍ಐ ಆಸ್ಪತ್ರೆ ಲೋಕಾರ್ಪಣೆಯಿಂದ ಈ ಭಾಗದ ಕಾರ್ಮಿಕರಿಗೆ ಅನುಕೂಲವಾಗಲಿದೆ. ಈಗಾಗಲೇ ಯಂತ್ರೋಪಕರಣ ಹಾಗೂ ತಜ್ಞವೈದ್ಯರನ್ನು ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ರಾಜ್ಯದಲ್ಲಿ ಇರುವಷ್ಟು ವೈದ್ಯಕೀಯ ಕಾಲೇಜುಗಳು ಬೇರೆಲ್ಲೂ ಇಲ್ಲ. ಆದರೂ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವೈದ್ಯರು ಲಭ್ಯವಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ವೈದ್ಯರಲ್ಲಿ ಸೇವಾ ಮನೋಭಾವ ಕಡಿಮೆಯಾಗಿದೆ ಎಂದು ಇದೇ ವೇಳೆ ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಪರಿಮಳಾ ಶಾಮ್, ಉಪಾಧ್ಯೆಕ್ಷೆ ಗೌರಮ್ಮ
ಸೋಮಶೇಖರ್, ನಗರಸಭಾ ಅಧ್ಯಕ್ಷೆ ಪುಷ್ಪಲತಾ ಕಮಲೇಶ್, ಉಪಾಧ್ಯಕ್ಷ ಪ್ರದೀಪ್, ಜಿಪಂ ಸದಸ್ಯೆ ಪುಷ್ಪಾ ನಾಗೇಶ್, ತಾಪಂ ಉಪಾಧ್ಯಕ್ಷ ಗೋವಿಂದರಾಜು, ನಗರಸಭಾ ಸದಸ್ಯರಾದ ಮಂಜು, ಚಂದ್ರಶೇಖರ್, ಮಾಜಿ ಪುರಸಭಾ ಅಧ್ಯಕ್ಷರಾದ ಶ್ರೀಧರ್, ಶ್ರೀನಿವಾಸ್, ವಕೀಲರಾದ ರಾಚಪ್ಪ, ನಾಗರಾಜಯ್ಯ, ಮುಖಂಡರಾದ ನಾಗೇಶ್ ರಾಜು , ಕುರಹಟ್ಟಿ ಮಹೇಶ್, ಗುರುಸ್ವಾಮಿ, ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್, ಇಎಸ್‍ಐ ನಿರ್ದೇಶಕ ಡಾ.ಡಿ.ಎಸ್.ಕುಮಾರ್, ಉಪಪ್ರಾದೇಶಿಕ ಕಚೇರಿ ನಿರ್ದೇಶಕ ಟಿ.ರೇಣುಕಾ ಪ್ರಸಾದ್ ಉಪಸ್ಥಿತರಿದ್ದರು.

ಶಾಸಕರಿಂದ ಕಾರ್ಯಕ್ರಮ ಬಹಿಷ್ಕಾರ
ನಂಜನಗೂಡು: ನಗರದಲ್ಲಿಂದು ನಡೆದ ಇಎಸ್‍ಐ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಬಿ.ಹರ್ಷವರ್ಧನ್ ಹಾಗೂ ಅವರ ಬೆಂಬಲಿಗರು ಬಹಿಷ್ಕರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ಹೊರನಡೆದ ಘಟನೆ ನಡೆಯಿತು.
ಮಾಜಿ ಸಚಿವ ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಅವರ ಹೆಸರು ನಾಮಫಲಕದಲ್ಲಿ ಅಳವಡಿಸಿಲ್ಲವೆಂದು ದೂರಿದ ಅವರು, ಅಂದಿನ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಶಾಸಕ ವಿ.ಶ್ರೀನಿವಾಸ್ ಪ್ರಸಾದ್ ಅವರು ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಇಂದು ನಡೆದ ಕಾರ್ಯಕ್ರಮದಲ್ಲಿ ಅವರ ಹೆಸರಾಗಲಿ, ಸ್ವಾಗತ ಫಲಕದಲ್ಲಿ ಶಾಸಕರ ಭಾವಚಿತ್ರ ಇಲ್ಲವೆಂದು ಬೇಸರಗೊಂಡರಲ್ಲದೆ, ಕಾರ್ಯಕ್ರಮ ಏಕಪಕ್ಷೀಯವಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದರು.

ಸಚಿವರು, ಕಾರ್ಮಿಕರ ನಡುವೆ ಚಕಮಕಿ
ನಂಜನಗೂಡು: ನಗರದ ಇಎಸ್‍ಐ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಸಚಿವ ವೆಂಕಟರಮಣಪ್ಪ ಹಾಗೂ ಕಾರ್ಮಿಕ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

ವರ್ಷದ ಹಿಂದೆ ಮೈಸೂರಿನಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೊಂಡಿರುವ ಇಎಸ್‍ಐ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಹಾಗೂ ಯಂತ್ರೋಪಕರಣಗಳ ತೊಂದರೆ ಇದ್ದು, ಇನ್ನೂ ಕೂಡ ಅದ್ದನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಈ ಕುರಿತು ತಾವು ಸ್ಪಷ್ಟಿಕರಣ ನೀಡಬೇಕು ಎಂದು ಏರುಧ್ವನಿಯಲ್ಲಿ ಕಾರ್ಮಿಕ ಮುಖಂಡರು ಸಚಿವರನ್ನು ಪ್ರಶ್ನಿಸಿದರು. ಇದಕ್ಕೆ ಸಚಿವರು ಕೂಡ ತಾಳ್ಮೆ ಕಳೆದುಕೊಂಡು ಇಂತಹ ಗದ್ದಲಗಳಿಗೆ ತಾವು ಎಂದು ತಲೆಬಾಗುವುದಿಲ್ಲ. ಏನಿದ್ದರೂ ಸಲಹೆ ನೀಡಿ. ಚರ್ಚೆ ಮಾಡಿ. ತಾಳ್ಮೆಯಿಂದ ವರ್ತಿಸಿ ಎಂದರು. ಇಲ್ಲಿ ಅನುದಾನ ತಂದು ಆಸ್ಪತ್ರೆ ನಿರ್ಮಾಣ ಮಾಡಲು ಸಂಸದ ಧ್ರುವನಾರಾಯಣ್ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ನಾವು ಕೂಡ ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಪತ್ರ ವ್ಯವಾಹಾರ ಮಾಡಿದ್ದೇವೆ ಎಂದು ಸಮಜಾಹಿಸಿ ನೀಡಿದರು.

Translate »