ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಿಗೆ ಪ್ರತಾಪ್ ಸಿಂಹ ಸೂಚನೆ
ಮೈಸೂರು, ಅ.30(ಪಿಎಂ)- ‘ಪ್ರಧಾನ ಮಂತ್ರಿ ಮುದ್ರಾ’ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸಾಲ ಮರುಪಾವತಿ ಸಂಬಂಧ ಜನರಿಗೆ ಸಮಗ್ರ ಮಾಹಿತಿ ನೀಡಲು ಮೇಳದ ಮಾದರಿ ಕಾರ್ಯಕ್ರಮ ರೂಪಿಸುವಂತೆ ಲೀಡ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಿಗೆ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಬ್ಯಾಂಕುಗಳ ಸಮಾಲೋಚನಾ ಮತ್ತು ಪ್ರಗತಿ ಪರಿಶೀಲನಾ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ಸ್ಟ್ಯಾಂಡ್ ಅಪ್ ಯೋಜನೆ ಹಾಗೂ ಸ್ಟಾರ್ಟ್‍ಅಪ್ ಯೋಜನೆಗಳು ಹಾಗೂ ಸಾಲ ಮರುಪಾವತಿಯಲ್ಲಿನ ಒನ್ ಟೈಮ್ ಸೆಟಲ್‍ಮೆಂಟ್ (ಓಟಿಎಸ್-ಒಂದೇ ಕಂತಿನಲ್ಲಿ ಸಾಲ ಮರುಪಾವತಿ) ಕುರಿತಂತೆ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಿ ಎಂದು ಸೂಚನೆ ನೀಡಿದರು.
ಇ
ದಕ್ಕೂ ಮುನ್ನ ಕೇಂದ್ರ ಸರ್ಕಾರದ ಸ್ಟ್ಯಾಂಡ್‍ಅಪ್ ಯೋಜನೆ ಪ್ರಗತಿ ಕುರಿತಂತೆ ಲೀಡ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ವೆಂಕಟಾಚಲಪತಿ ಸಭೆಗೆ ಮಾಹಿತಿ ನೀಡಿದರು. ಇದಕ್ಕೂ ಅತೃಪ್ತಿ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ ಅವರು, ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ ಇಡೀ ಜಿಲ್ಲೆಯಲ್ಲಿ ಕೇವಲ 246 ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಿದ್ದೀರಿ. ಇದು ಅತ್ಯಂತ ಕಡಿಮೆ ಸಂಖ್ಯೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ದೊಡ್ಡ ಪ್ರಮಾಣ ದಲ್ಲಿದೆ. ಈ ವರ್ಗಗಳಿಗೆ ಯೋಜನೆ ತಲುಪಿದರೂ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿ ಗಳಾಗುತ್ತಾರೆ. ಈವರೆಗಿನ ಸಾಲ ವಿತರಣೆಯ ಪ್ರಗತಿ ಏನೇನೂ ಸಾಲದು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ವೆಂಕಟಾಚಲಪತಿ ಹೆಚ್ಚು ಪ್ರಚಾರ ನೀಡುವ ಅಗತ್ಯವಿದೆ ಎಂದು ಸಮಾಜಾಯಿಸಿ ನೀಡಿದರು. ಬಳಿಕ ಸಂಸದರು, ನಾನು ಈ ಬಗ್ಗೆ ಆಗಾಗ್ಗೆ ಪರಿಶೀಲಿಸುತ್ತೇನೆ. ಪರಿಣಾಮಕಾರಿ ಅನುಷ್ಠಾನ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.