ಮೈಸೂರು,ಅ.30(ಎಂಟಿವೈ)- ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್ (ಹೆಜ್ಜಾರ್ಲೆ) ಮೃತಪಟ್ಟ ಪ್ರಕರಣದ ಪ್ರಾಥಮಿಕ ವರದಿಯಲ್ಲಿ ಜಂತುಹುಳದ ಮಿತಿ ಮೀರಿದ ಬಾಧೆ ಪಕ್ಷಿಗಳ ಸಾವಿಗೆ ಕಾರಣ ಎಂದು ದೃಢವಾಗಿದ್ದು, ಜನರಲ್ಲಿ ಮೂಡಿದ್ದ ಹಕ್ಕಿಜ್ವರ ಭೀತಿ ನಿವಾರಣೆಯಾದಂತಾಗಿದೆ.
ವಾಯುವಿಹಾರಿಗಳಿಗೆ ಸ್ವರ್ಗ ಎನಿಸಿರುವ ಕುಕ್ಕರಹಳ್ಳಿ ಕೆರೆಯಲ್ಲಿ ಅ.25 ಮತ್ತು ಅ.28 ರಂದು ಎರಡು ಪೆಲಿಕಾನ್ ಮೃತಪಟ್ಟಿತ್ತು. ಮೂರು ದಿನದ ಅಂತರದಲ್ಲೇ ಎರಡು ಪೆಲಿ ಕಾನ್ ಸಾವಿಗೀಡಾಗಿದ್ದರಿಂದ ಪಕ್ಷಿ ಪ್ರಿಯರಲ್ಲಿ ಆತಂಕ ಮನೆ ಮಾಡಿತ್ತು. ಅಲ್ಲದೆ ಪೆಲಿಕಾನ್ ಸಾವಿಗೆ ಹಕ್ಕಿಜ್ವರ ಕಾರಣವಿರಬಹುದು ಎಂಬ ಅನುಮಾನ ಮೂಡಿತ್ತು.
ಪಕ್ಷಿಗಳ ಸಾವಿಗೆ ಕಾರಣ ಪತ್ತೆ ಹಚ್ಚುವಂತೆ ಪೆಲಿಕಾನ್ ಕಳೆಬರವನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಅರಣ್ಯ ಇಲಾಖೆ ಕೆರೆ, ಪಕ್ಷಿಧಾಮ, ಕೊಕ್ಕರೆ ಬೆಳ್ಳೂರು ಸೇರಿದಂತೆ ವಿವಿ ಧೆಡೆ ಕಟ್ಟೆಚ್ಚರ ವಹಿಸಿತ್ತು. ಈ ನಡುವೆ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಯಲ್ಲಿ ಎರಡೂ ಪೆಲಿಕಾನ್‍ಗಳ ಸಾವಿಗೆ ಜಂತುಹುಳದ ಸಮಸ್ಯೆ ಕಾರಣ ಎಂದು ದೃಢ ಪಟ್ಟಿದೆ. ಪಕ್ಷಿಯ ಹೊಟ್ಟೆಯಲ್ಲಿ ಜಂತುಹುಳಗಳೇ ತುಂಬಿರುವುದು ಪತ್ತೆಯಾಗಿವೆ. ಹಕ್ಕಿಜ್ವರ ಸೋಂಕು ಕಂಡು ಬಂದಿಲ್ಲದಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೆ ಮನೆಮಾಡಿದ್ದ ಹಕ್ಕಿಜ್ವರದ ಆತಂಕ ದೂರಾದಂತಾಗಿದೆ.
ಆತಂಕ ಬೇಡ: ಈ ಕುರಿತಂತೆ ವನ್ಯಜೀವಿ ವಿಭಾಗದ ಡಿಸಿಎಫ್ ಅಲೆಗ್ಸಾಂಡರ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಪೆಲಿಕಾನ್ ಸಾವಿನ ಹಿನ್ನೆಲೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಪ್ರಾಥಮಿಕ ವರದಿಯಲ್ಲಿ ಪೆಲಿಕಾನ್ ಸಾವಿಗೆ ಜಂತುಹುಳದ ಸಮಸ್ಯೆ ಕಾರಣ ಎಂದು ದೃಢಪಟ್ಟಿದೆ. ಇದರಿಂದ ಜನರು ಹಕ್ಕಿ ಜ್ವರದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ವದಂತಿಗೆ ಕಿವಿಗೊಡದೆ ಕೆರೆಗಳ ಬಳಿ ಪಕ್ಷಿಗಳು ಅನಾರೋಗ್ಯದಿಂದ ಬಳಲು ತ್ತಿರುವುದು ಕಂಡು ಬಂದರೆ ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ತರಬೇಕು. ಸದ್ಯಕ್ಕೆ ಮೈಸೂರು ಜಿಲ್ಲೆಯಲ್ಲಿ ಹಕ್ಕಿಜ್ವರದ ಸೋಂಕಾಗಲಿ, ಆತಂಕವಾಗಲಿ ಇಲ್ಲ. ಇಲಾಖೆ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಲು ಟೊಂಕಕಟ್ಟಿ ಶ್ರಮಿಸುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.