ಮೈಸೂರು: ಮೈಸೂರು ನಗರದ ಹೊರವಲಯದ ಆ ಬಡಾವಣೆಯ ತ್ಯಾಜ್ಯ ನಿರ್ವಹಣೆ ಹೊಣೆ ಅಲ್ಲಿನ ನಾಗರಿಕರದ್ದೇ! ಅವರ ಪರಿಶ್ರಮದಿಂದ ಇಡೀ ಬಡಾವಣೆ ಸ್ವಚ್ಛತೆಗೆ ಹೆಸರಾಗಿದ್ದು, ಹಾಗೆ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ಯನ್ನು ಸ್ವತಃ ಅಲ್ಲಿನ ನಿವಾಸಿಗಳೇ ನಿಭಾಯಿಸುವ ಬಡಾವಣೆಯೇ ಮೈಸೂರು ಹೊರವಲಯದ ಸರ್ದಾರ್ ವಲ್ಲಭ ಭಾಯ್ ಪಟೇಲ್ ನಗರ.
ಹೌದು, ಈ ಬಡಾವಣೆ ನಿರ್ವಹಣೆಯನ್ನು ಯಾವ ಸ್ಥಳೀಯ ಸಂಸ್ಥೆಯೂ ವಹಿಸಿಕೊಂಡಿಲ್ಲ. ಹೀಗಾಗಿ ಇಲ್ಲಿ ಯಾವ ಪೌರಕಾರ್ಮಿಕರು ಸ್ವಚ್ಛತೆಗೆ ಬರುವುದಿಲ್ಲ. ಹಾಗೆಂದ ಮಾತ್ರಕ್ಕೆ ಶುಚಿತ್ವ ಇಲ್ಲವೆಂದಲ್ಲ. ಇಲ್ಲಿನ ಸ್ವಚ್ಛತೆ ಕಾಪಾಡಲು ಸಮಾನ ಮನಸ್ಕರ ವೇದಿಕೆ ಮೂಲಕ ಬಡಾವಣೆ ನಿವಾಸಿಗಳೇ ಸಂಘಟಿತರಾಗಿದ್ದಾರೆ.
ಕಸ ವಿಲೇವಾರಿಗೆ ವಾಹನವೊಂದರ ವ್ಯವಸ್ಥೆಯ ಜೊತೆಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಿಕೊಂಡು ತಮ್ಮ ಬಡಾವಣೆಯ ತ್ಯಾಜ್ಯ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ತಿಂಗಳಿಗೊಮ್ಮೆ ನಿವಾಸಿಗಳೇ ಸ್ವಚ್ಛತೆ ಕೆಲಸದಲ್ಲಿ ತೊಡಗಿ ಕೊಳ್ಳುವುದು ಇಲ್ಲಿನ ಮತ್ತೊಂದು ವಿಶೇಷ.
ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘ ನಿರ್ಮಿಸಿರುವ ಈ ಬಡಾವಣೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ನಿವೇಶನಗಳಿವೆ. ಇದೀಗ 900ಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿವೆ. ಬಡಾವಣೆ ಅಭಿವೃದ್ಧಿಗೊಂಡ ಆರಂಭದಲ್ಲಿ ಮನೆಗಳ ಸಂಖ್ಯೆ ವಿರಳವಾಗಿದ್ದ ಹಿನ್ನೆಲೆಯಲ್ಲಿ ಕಸದ ಸಮಸ್ಯೆ ಗಂಭೀರ ಸ್ವರೂಪ ಪಡೆದಿರಲಿಲ್ಲ. ಆದರೆ ಮನೆಗಳ ಸಂಖ್ಯೆ ಹೆಚ್ಚಾದಂತೆ ಎಲ್ಲೆಂದರಲ್ಲಿ ಕಸದ ರಾಶಿ ಕಣ್ಣಿಗೆ ರಾಚು ವಂತಾಯಿತು.
ತ್ಯಾಜ್ಯ ನಿರ್ವಹಣೆಯ ಅನಿವಾರ್ಯತೆ ಎದುರಾದ ಹಿನ್ನೆಲೆಯಲ್ಲಿ ಬಡಾವಣೆಯಲ್ಲಿ ಉದಯಿಸಿದ್ದ ಸಮಾನ ಮನಸ್ಕರ ವೇದಿಕೆಯ ಮೂಲಕ ಸಂಘಟಿತರಾದ ಸ್ಥಳೀಯ ನಿವಾಸಿಗಳು ಹೊಸ ವ್ಯವಸ್ಥೆಗೆ ನಾಂದಿ ಹಾಡಿದರು. ಕಸ ವಿಲೇವಾರಿಗೆ ಗೂಡ್ಸ್ ಆಟೋರಿಕ್ಷಾ ವ್ಯವಸ್ಥೆ ಮಾಡಿದ್ದಲ್ಲದೆ, ಪ್ರತ್ಯೇಕ ಸಿಬ್ಬಂದಿ ನಿಯೋಜನೆಯ ವ್ಯವಸ್ಥೆಯಡಿ ಬಡಾವಣೆಯ ಸ್ವಚ್ಛತೆಗೆ ಪೂರಕ ವಾತಾವರಣ ನಿರ್ಮಿಸಿದರು.
ಕಸ ವಿಲೇವಾರಿ ವ್ಯವಸ್ಥೆ ನಿರ್ವಹಣೆಗೆ ಅಗತ್ಯವಿರುವ ಹಣ ಹೊಂದಿಸಲು ಪ್ರತಿ ಮನೆಗೂ ಇಂತಿಷ್ಟು ಎಂದು ಕಸ ಸಂಗ್ರಹ ಶುಲ್ಕ ಕೂಡ ವಿಧಿಸುತ್ತಿದ್ದು, ಇದಕ್ಕೆ ಬಡಾ ವಣೆ ನಿವಾಸಿಗಳು ಸಮ್ಮತಿಸಿದ್ದಾರೆ.
ಹೀಗೆ ಬಡಾವಣೆಯಲ್ಲಿ ಎರಡು ವರ್ಷಗಳ ಹಿಂದೆ ಆರಂಭಗೊಂಡ ಕಸ ವಿಲೇವಾರಿ ವ್ಯವಸ್ಥೆಯು ಸಮಾನ ಮನಸ್ಕರ ವೇದಿಕೆಯ ರೂವಾರಿಗಳು ಲೀಲಾ ಶಿವ ಕುಮಾರ್, ಮನುಕುಮಾರ್, ಥಾಮಸ್, ಮೋಹನ್‍ರಾವ್ ಮತ್ತು ಮೋಹನ್ ರಾಜ್.
ಪ್ಲಾಸ್ಟಿಕ್ ಮುಕ್ತಗೊಳಿಸುವ ಪಣ: ಬಡಾವಣೆಯ ಮನೆಗಳಲ್ಲಿ ಸಮಾರಂಭಗಳು ಹಾಗೂ ಔತಣಕೂಟಗಳ ಹಮ್ಮಿಕೊಂಡಲ್ಲಿ ಅದರಿಂದ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರ ಹಕ್ಕೆ ಹೆಚ್ಚುವರಿ ಶುಲ್ಕ ಪಡೆದು ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ತಿಂಗಳು ನಡೆಯುವ ಸ್ವಚ್ಛತಾ ಕಾರ್ಯದ ವೇಳೆ ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಆದ್ಯತೆ ನೀಡಲಾಗುತ್ತದೆ. ಆ ಮೂಲಕ ಪ್ಲಾಸ್ಟಿಕ್ ಮುಕ್ತಗೊಳಿಸುವಲ್ಲಿ ನಿರತರಾಗಿದ್ದಾರೆ.
ವಾಟ್ಸಾಪ್ ಗ್ರೂಪ್: ತ್ಯಾಜ್ಯ ನಿರ್ವಹಣೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ವಾಟ್ಸಾಪ್ ಗ್ರೂಪ್ ರಚಿಸಿಕೊಂಡಿದ್ದು, ಆ ಮೂಲಕ ಶೀಘ್ರ ಸಂವಹನ ಸಾಧಿಸಿ ಬಡಾವಣೆಯ ಕುಂದು-ಕೊರತೆ ನಿವಾರಿಸುವ ವಿನೂತನ ವ್ಯವಸ್ಥೆಗೂ ಈ ಬಡಾವಣೆ ಮಾದರಿ ಯಾಗಿದೆ.