ಮಂಡ್ಯ: ಜಿಲ್ಲೆಯ ರೈತನೊಬ್ಬ ಡಂಗುರ ಸಾರುವ ರೀತಿಯಲ್ಲಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗಿದೆ.
ಇಂದು ಬೆಳಿಗ್ಗೆ ಸಾಲ ಮನ್ನಾ, ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರೈತರ ಪ್ರತಿಭಟನೆಗೆ ಜಿಲ್ಲೆಯಿಂದ ಸಾವಿರಾರು ರೈತರು ರೈಲಲ್ಲಿ ಬೆಂಗಳೂರಿಗೆ ತೆರಳಿದರು. ಇದಕ್ಕೂ ಮುನ್ನ ರೈತರೊಬ್ಬರು ಡಂಗುರ ಸಾರುವ ಮೂಲಕ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
`ಕೇಳ್ರಪ್ಪೋ ಕೇಳಿ, ಕರ್ನಾಟಕದ ಮಹಾಜನರೇ ಕೇಳಿ, ರೈತರು ಎಂದರೆ ಯಾರು ಗೊತ್ತಾ? ಹರದನಹಳ್ಳಿ ದೇವೇಗೌಡರು, ದೇವೇಗೌಡರ ಮಕ್ಕಳು, ಅವರ ಮೊಮ್ಮಕ್ಕಳು, ಅವರ ಸೊಸೆಯಂದಿರು ಹಾಗೂ ಅವರ ಮರಿ ಮೊಮ್ಮಕ್ಕಳು ಮಾತ್ರ ರೈತರು. ಹಸಿರು ಶಾಲು ಹಾಕಿಕೊಂಡು ಪ್ರತಿಭಟನೆ ಮಾಡುವವರು ರೈತರಲ್ಲ. ಅವರೆಲ್ಲ ಕಳ್ಳರು, ದರೋಡೆಕೋರರು’ ಎಂದು ಸಾರಿದ್ದಾರೆ. `ರೈತರು ಅಂದರೆ ಯಾರು ಗೊತ್ತೆ? ಕುಮಾರಸ್ವಾಮಿ, ಅವರ ಹೆಂಡತಿ ಹಾಗೂ ಮಕ್ಕಳು. ಅಲ್ಲದೇ ದೇವೇಗೌಡರಿಗೆ ಮತ ಹಾಕುವವರು ಮಾತ್ರ ರೈತರು. ಅವರು ಬಂದ ತಕ್ಷಣ ದೂರದಲ್ಲಿ ಚಪ್ಪಲಿ ಬಿಟ್ಟು, ಅವರಿಗೆ ಕೈ ಮುಗಿಯುವವರು ಮಾತ್ರ ರೈತರು? ಎಂದು ಟಾಂಗ್ ಕೊಟ್ಟಿದ್ದಾರೆ.
ರೈತ ನಾಯಕಿ ಜಯಶ್ರೀ ಅವರನ್ನು ನಾಲ್ಕು ವರ್ಷ ಎಲ್ಲಿ ಮಲಗಿದ್ಯಮ್ಮ ಎಂದು ಸಿಎಂ ಪ್ರಶ್ನಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈತ, ಇವರ ಪಾಲಿಗೆ ರೈತರು ಎಂದರೇ, ಸಾಲಮನ್ನಾ ಮಾಡದೇ ಇದ್ದರೂ, ಕಬ್ಬಿಗೆ ಬೆಂಬಲ ಬೆಲೆ ನೀಡದೇ ಇದ್ದರೂ, ಇವರಿಗೆ ಕೈ ಮುಗಿಯುವವರು ಮಾತ್ರ ರೈತರು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.