ಮೈಸೂರು, ಫೆ.29- ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯ, ಖಾಸಗಿ ಶಾಲೆಗಳಲ್ಲಿ ಸಿಗದಿದ್ದರೂ ಕೂಡ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದು, ಈ ವ್ಯಾಮೋಹ ಬಿಡಬೇಕು ಎಂದು ವರುಣಾ ಕ್ಷೇತ್ರದ ಶಾಸಕ ಡಾ|| ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.
ಮೈಸೂರು ತಾಲೂಕು ಡಿ. ಸಾಲುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಬಿಸಿಯೂಟ, ಸಮವಸ್ತ್ರ, ಶೂ, ಸೈಕಲ್, ಹಾಲು ಎಲ್ಲವನ್ನು ನೀಡುತ್ತಿದ್ದು, ಮಕ್ಕಳು ಇದರ ಸದುಪಯೋಗ ಮಾಡಿಕೊಂಡು ವಿದ್ಯಾವಂತ ರಾಗಿ ಸಾಮಾಜಿಕ, ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರಿ ಶಾಲೆಗಳಲ್ಲಿಯೂ ನುರಿತ ಶಿಕ್ಷಕರಿದ್ದು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಹೆಚ್ಚಾಗಿ ಹಿಂದುಳಿದ ವರ್ಗಗಳ ಮಕ್ಕಳೇ ವ್ಯಾಸಂಗ ಮಾಡುತ್ತಿದ್ದು, ಶಿಕ್ಷಕರು ಹೆಚ್ಚಿನ ಗಮನಹರಿಸಿ ಉತ್ತಮ ಫಲಿತಾಂಶ ಬರುವಂತೆ ಪ್ರಯತ್ನಿಸಬೇಕು. ತಾ.ಪಂ. ಸದಸ್ಯರಾದ ಸಿ.ಎಂ. ಸಿದ್ದರಾಮೇಗೌಡ ಸತತ ಪ್ರಯತ್ನದಿಂದ ಈ ಶಾಲೆ ಅಭಿವೃದ್ಧಿ ಹೊಂದಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿಪಡಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಜಿ.ಪಂ. ಸದಸ್ಯ ಬೀರಿ ಹುಂಡಿ ಬಸವಣ್ಣ, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಬಿಇಓ ಕೃಷ್ಣ, ತಾಪಂ ಸದಸ್ಯ ಸಿ.ಎಂ.ಸಿದ್ದರಾಮೇಗೌಡ, ಗ್ರಾ.ಪಂ. ಅಧ್ಯಕ್ಷ ಬಸವರಾಜು, ಮಾಜಿ ಅಧ್ಯಕ್ಷ ಮಾಕಿ ಮಹಾದೇವು, ಚಂದ್ರು, ಹುಚ್ಚೇಗೌಡ ಹಾಜರಿದ್ದರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮವೂ ನಡೆಯಿತು.