ಮೈಸೂರು: ಮೈಸೂರಿನ ಭಾರತೀಯ ವಿದ್ಯಾ ಭವನ(ಬಿವಿಬಿ)ದ 16ನೇ ವಾರ್ಷಿಕೋತ್ಸವ ಸಮಾರಂಭ, ಸಾಂಸ್ಕೃತಿಕ ಸಂಭ್ರಮದೊಂದಿಗೆ ಸಾತ್ವಿಕ ಸಂದೇಶ ಸಾರುವ ಮೂಲಕ ಅರ್ಥ ಪೂರ್ಣವಾಗಿ ನೆರವೇರಿತು.
ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಸೋಮವಾರ `ತತ್ವಾದಾರ’ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ಬಿವಿಬಿ ವಾರ್ಷಿಕೋತ್ಸವಕ್ಕೆ ಉನ್ನತ ಶಿಕ್ಷಣ ಸಚಿ ವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಹಣ, ಆಸ್ತಿ ಉಳ್ಳವರು ಶ್ರೀಮಂತರಲ್ಲ. ವಿದ್ಯಾ ವಂತ ಮಕ್ಕಳನ್ನು ಹೊಂದಿರುವ ಪೋಷ ಕರೇ ನಿಜವಾದ ಶ್ರೀಮಂತರು. ವಿದ್ಯಾವಂತ ಮಕ್ಕಳೇ ದೇಶದ ಸಂಪತ್ತು. ಇಂದಿನ ಮಕ್ಕಳು ಭವಿಷ್ಯದಲ್ಲಿ ರಾಜಕೀಯ, ಕ್ರೀಡೆ, ಸಾಹಿತ್ಯ, ಸಂಗೀತ, ಕಲೆ ಸೇರಿದಂತೆ ಎಲ್ಲಾ ಕ್ಷೇತ್ರ ಗಳಲ್ಲೂ ಪ್ರಜ್ವಲಿಸುತ್ತಾರೆ. ಹಾಗಾಗಿ ಪೋಷಕರು ಕೂಲಿ ಮಾಡಿಯಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಾರೆ. ದೇವರು ಗುಡಿಯಲ್ಲಿಲ್ಲ. ನಿಮ್ಮ ಭವಿಷ್ಯಕ್ಕಾಗಿ ಕಷ್ಟಪಡುವ ಪೋಷಕರು ಹಾಗೂ ಗುರು ಗಳನ್ನೇ ದೇವರಂತೆ ಕಾಣಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಭಾರತೀಯ ವಿದ್ಯಾ ಭವನದಲ್ಲಿರುವ ಮಕ್ಕಳೆಲ್ಲಾ ಶ್ರೀಮಂತ ಕುಟುಂಬದವರಲ್ಲ. ಇಲ್ಲಿ ಬಡ ಕುಟುಂಬದಿಂದ ಬಂದವರು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕೃತಿಯ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ. ಬಿವಿಬಿಯ ಪ್ರಾಂಶುಪಾಲರಾದ ವಿಜಯಾ ನರಸಿಂಹಂ ಅವರು ಉತ್ತಮ ಶಿಕ್ಷಕಿ ಹಾಗೂ ಉತ್ತಮ ಪ್ರಾಂಶುಪಾಲರೆಂಬ ಪ್ರಶಸ್ತಿಗಳಿಗೆ ಪಾತ್ರರಾಗಿರುವುದು ಶ್ಲಾಘನೀಯ. ರಾಷ್ಟ್ರದ ಭವಿಷ್ಯದ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಬಿವಿಬಿ ಶಿಕ್ಷಣ ಸಂಸ್ಥೆ, ಬದ್ಧತೆಯುಳ್ಳ ಆಡಳಿತ ಮಂಡಳಿಯನ್ನು ಹೊಂದಿದೆ. ಈ ಸಾರ್ಥಕ ಸೇವೆ ಹೀಗೆಯೇ ಮುಂದುವರಿಯಲಿ. ಈ ಸುಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಉನ್ನತಿಗೆ ಪ್ರಮುಖ ಕಾರಣರಾದ ಮತ್ತೂರು ಕೃಷ್ಣಮೂರ್ತಿ ಯವರನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು.
ಸರ್ಕಾರಿ ಶಾಲಾ-ಕಾಲೇಜುಗಳಿಗೆ ಎಲ್ಲಾ ರೀತಿಯ ಸೌಲಭ್ಯವಿದೆ. ಶಿಕ್ಷಕರು, ಉಪನ್ಯಾ ಸಕರಿಗೆ ಉತ್ತಮ ವೇತನವೂ ದೊರೆಯುತ್ತಿದೆ. ಅವರೆಲ್ಲಾ ಬಿವಿಬಿಯಂತಹ ಮಾದರಿ ಶಿಕ್ಷಣ ಸಂಸ್ಥೆಗಳಿಗೆ ಬಂದು ನೋಡಬೇಕು. ಎಲ್ಲಾ ಮಕ್ಕಳೂ ಜ್ಞಾನವಂತರಾಗಲು ಸರ್ಕಾರಿ ಶಾಲೆಗಳಲ್ಲೂ ಈ ರೀತಿಯ ಶಿಕ್ಷಣ ಕಲ್ಪಿತ ವಾಗಬೇಕು. ಗುರುವಿನ ಮಹತ್ವವನ್ನು ತಿಳಿದು ಮಕ್ಕಳ ಭವಿಷ್ಯ ರೂಪಿಸಬೇಕೆಂದು ಸಲಹೆ ನೀಡಿದ ಜಿಟಿಡಿ, ಸಾಂಸ್ಕೃತಿಕ ಕಾರ್ಯ ಕ್ರಮ ನೀಡಲು ಸಿದ್ಧವಾಗಿರುವ ಮಕ್ಕಳನ್ನು ನೋಡಿದರೆ ಇಲ್ಲಿ ಕೈಲಾಸ ಸೃಷ್ಟಿಯಾದಂತೆ ಕಾಣುತ್ತದೆ. ಝಾನ್ಸಿರಾಣಿ ಲಕ್ಷ್ಮೀಬಾಯಿ, ಭಗವಾನ್ ಬುದ್ಧರಂತಹ ಮಹಾನ್ ಶಕ್ತಿಗಳು ಪರಕಾಯ ಪ್ರವೇಶ ಮಾಡಿರುವಂತೆ ಮಕ್ಕಳು ಅಭಿನಯಿಸಿದರು. ಎಲ್ಲರೂ ಸಾಧಕರಾಗಿ ಬೆಳೆದು ದೇಶಕ್ಕೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು.
ಪ್ರತಿಭಾ ಪುರಸ್ಕಾರ: 2017-18ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕ ಗಳಿಸಿರುವ ಡಿ.ಎ.ಶ್ರೇಯಶ್, 619 ಅಂಕ ಗಳಿಸಿರುವ ಪಿ.ಅರ್ಚನಾರಾಜ್, 617 ಅಂಕ ಗಳಿಸಿರುವ ಎನ್.ಎಂ.ಜೀವನ್, ಇಂಗ್ಲಿಷ್‍ನಲ್ಲಿ ಶೇ.100ರಷ್ಟು ಅಂಕ ಗಳಿಸಿರುವ ಡಿ.ಎಸ್.ಸಾಯ್‍ಪ್ರಜ್ವಲ್, ಜೆ.ನಿಶಾ, ವಿ.ಶಮಿತಾ, ಕನ್ನಡದಲ್ಲಿ ಶೇ.100ರಷ್ಟು ಅಂಕ ಗಳಿಸಿ ರುವ ಎಂ.ದೀಪಕ್, ಜಿ.ಕಾರ್ತಿಕ್, ಡಿ.ನಿಧಿ, ಕೆ.ಎನ್.ಶಶಾಂಕ್, ವಿ.ಸುನಿಲ್, ಎಂ.ಶ್ರೇಯಾಂಕ, ಎಸ್.ಎನ್.ವಿಲಾಸ್ ಪಟೇಲ್, ಸಂಸ್ಕೃತದಲ್ಲಿ ಶೇ.100ರಷ್ಟು ಅಂಕ ಗಳಿಸಿದ ಎ.ಜೆ. ಹೆಬ್ಬಾರ್, ಎಂ.ಛಾಯಾಶ್ರೀ, ಹಿಂದಿಯಲ್ಲಿ ಶೇ.100ರಷ್ಟು ಅಂಕ ಗಳಿಸಿದ ಎ.ಕೆ.ಡಯಾನ, ಸಮಾಜ ವಿಜ್ಞಾನದಲ್ಲಿ ಶೇ.100 ಅಂಕ ಪಡೆದ ಅಖಿಲೇಷ್ ಎಸ್.ಗೌಡ, ಎಸ್.ಹರ್ಷಿತ್ ಸೇರಿದಂತೆ ಎಲ್‍ಕೆಜಿಯಿಂದ 10ನೇ ತರಗತಿ ವರೆಗಿನ ಟಾಪರ್ಸ್‍ಗಳು, ಉತ್ತಮ ಕ್ರೀಡಾ ಪಟುಗಳಿಗೆ ಸಚಿವ ಜಿಟಿಡಿ ಹಾಗೂ ಗಣ್ಯರು ಪ್ರಶಸ್ತಿ ನೀಡಿ ಪುರಸ್ಕರಿಸಿದರು. ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕಿ ಹಾಗೂ ಉತ್ತಮ ಪ್ರಾಂಶುಪಾಲರು ಪ್ರಶಸ್ತಿಗಳಿಗೆ ಭಾಜನ ರಾಗಿರುವ ಶ್ರೀಮತಿ ವಿಜಯಾ ನರಸಿಂಹಂ ಅವರನ್ನು ಅಭಿನಂದಿಸಲಾಯಿತು.
ಬೆಂಗಳೂರು ಬಿವಿಬಿ ಅಧ್ಯಕ್ಷ ಎನ್. ರಾಮಾನುಜ, ಮೈಸೂರು ಬಿವಿಬಿ ಅಧ್ಯಕ್ಷ ಪ್ರೊ. ಎ.ವಿ.ನರಸಿಂಹ ಮೂರ್ತಿ, ಗೌರವ ಕಾರ್ಯ ದರ್ಶಿ ಪಿ.ಎಸ್.ಗಣಪತಿ, ಗೌರವ ಖಜಾಂಚಿ ಡಾ.ಎ.ಟಿ.ಭಾಷ್ಯಂ ಮತ್ತಿತರರು ಉಪಸ್ಥಿತ ರಿದ್ದರು. ಸಚಿವ ಜಿ.ಟಿ.ದೇವೇಗೌಡ ಅವರು ವೇದಿಕೆಗೆ ಆಗಮಿಸುವ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಸಿದ್ಧರಾಗಿ ಕುಳಿತಿದ್ದ ಮಕ್ಕಳ ಬಳಿಗೆ ತೆರಳಿ, ಮಾತನಾಡಿಸಿದರು. ಆ ವೇಳೆ ಮಕ್ಕಳು ಹಸ್ತಲಾಘವ ಮಾಡಿ, ಹೂ ನೀಡಿ ಸಂತಸ ವ್ಯಕ್ತಪಡಿಸಿದರು.
`ತತ್ವಾದಾರ’ದಲ್ಲಿ ಸಂಭ್ರಮದೊಂದಿಗೆ ಮಕ್ಕಳ ಸಂದೇಶ
ಪ್ರತಿವರ್ಷ ಉತ್ತಮ ಸಂದೇಶದೊಂದಿಗೆ ಬಿವಿಬಿ ವಾರ್ಷಿಕೋತ್ಸವ ನಡೆದು ಬಂದಿದೆ. ಹಾಗೆಯೇ ಈ ಬಾರಿ `ತತ್ವಾದಾರ’ ಸಮ್ಮಿಳಿತ ವಾರ್ಷಿಕೋತ್ಸವ ನೆರ ವೇರಿತು. ವಿಘ್ನವಿನಾಶಕ ಗಣಪತಿಯನ್ನು ಸ್ಮರಿಸುವ ಗೀತೆಗೆ ಭರತನಾಟ್ಯ ಪ್ರದರ್ಶಿ ಸುವ ಮೂಲಕ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ನೆರೆದಿದ್ದವರನ್ನು ಸಾಂಸ್ಕøತಿಕ ಲೋಕಕ್ಕೆ ಸ್ವಾಗತಿಸಿದರು. ಬಳಿಕ ಅಭಯಾರಣ್ಯದಲ್ಲಿ ಸ್ವಚ್ಛಂದವಾಗಿದ್ದ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಸಿಂಹವನ್ನು, ಒಂದು ಪುಟ್ಟ ಮೊಲ ತನ್ನ ಬುದ್ಧಿವಂತಿಕೆಯಿಂದ ಬಾವಿಗೆ ಬೀಳುವಂತೆ ಮಾಡುತ್ತದೆ. ಈ `ಮೊಲ ಮತ್ತು ಸಿಂಹ’ದ ಕತೆಯನ್ನು ಪುಟ್ಟ ಮಕ್ಕಳು ವೇದಿಕೆಯಲ್ಲಿ ಕಣ್ಣಿಗೆ ಕಟ್ಟಿದರು. ಶ್ವೇತ ವಸ್ತ್ರಧಾರಿಗಳಾಗಿ ವೇದಿಕೆಗೆ ಬಂದ ವಿದ್ಯಾರ್ಥಿಗಳು, ಭಗವಾನ್ ಬುದ್ಧನಿಗೆ ಅಂಗೂಲಿ ಮಾಲ ಶರಣಾಗುವ ಪ್ರಸಂಗವನ್ನು ಮನಮುಟ್ಟುವಂತೆ ಪ್ರದರ್ಶಿಸಿ, ಶಾಂತಿಯ ಮಹತ್ವ ಸಾರಿದರು. ಹೀಗೆಯೇ ಜ್ಞಾನ, ಧೈರ್ಯ, ಬಾಂಧವ್ಯ, ವಚನ, ಶಾಂತಿ, ಸಮಾನತೆ, ಸತ್ಯ, ತ್ಯಾಗ ಸಂದೇಶ ಸಾರುವ, ಕಿಂದರಿ ಜೋಗಿಯ ಆಶಯ, ಮೀರಾಬಾಯಿಯ ಆದರ್ಶ, ಭಕ್ತ ಪ್ರಹ್ಲಾದನ ಶ್ರೇಷ್ಠ ಭಕ್ತಿ, ಹನುಮಂತನ ಸ್ವಾಮಿ ನಿಷ್ಠೆಯನ್ನು ಬಿಂಬಿಸುವ ನೃತ್ಯಗಳನ್ನು ವಿದ್ಯಾರ್ಥಿಗಳು ಮನೋಜ್ಞವಾಗಿ ಪ್ರಸ್ತುತ ಪಡಿಸಿ, ನೆರೆದಿದ್ದ ಸಾವಿರಾರು ಮಂದಿಯ ಮೆಚ್ಚುಗೆಗೆ ಪಾತ್ರರಾದರು.