ಮೈಸೂರಲ್ಲಿ ಬೀಟ್ ಪೊಲೀಸರಿಂದ ನಾಗರಿಕರಿಗೆ ವಿಸಿಟಿಂಗ್ ಕಾರ್ಡ್ ವಿತರಣೆ
ಮೈಸೂರು

ಮೈಸೂರಲ್ಲಿ ಬೀಟ್ ಪೊಲೀಸರಿಂದ ನಾಗರಿಕರಿಗೆ ವಿಸಿಟಿಂಗ್ ಕಾರ್ಡ್ ವಿತರಣೆ

December 13, 2018

ಮೈಸೂರು: ಜಾರಿಯಲ್ಲಿರುವ ನ್ಯೂ ಬೀಟ್ ಸಿಸ್ಟಂ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಇದೇ ಮೊದಲ ಬಾರಿ ಪೊಲೀಸರಿಗೆ ಒದಗಿಸಿರುವ ವಿಸಿಟಿಂಗ್ ಕಾರ್ಡ್ ಗಳನ್ನು ನಾಗರಿಕರಿಗೆ ವಿತರಿಸಲಾಗು ತ್ತಿದೆ.

ಈ ವಿಸಿಟಿಂಗ್ ಕಾರ್ಡಿನಲ್ಲಿ ಬೀಟ್ ಪೊಲೀಸರ ಹೆಸರು, ಹುದ್ದೆ, ಮೊಬೈಲ್ ನಂಬರ್, ಭಾವಚಿತ್ರ, ಬೀಟ್ ಸಂಖ್ಯೆ, ಪೊಲೀಸ್ ಠಾಣೆ ಹೆಸರು ಹಾಗೂ ಇತರ ಮಾಹಿತಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮುದ್ರಿಸಲಾಗಿದೆ. ಬೀಟ್ ಪೊಲೀಸರು ಈ ಕಾರ್ಡ್ ಅನ್ನು ತಮ್ಮ ವ್ಯಾಪ್ತಿಯ ನಾಗರಿಕರಿಗೆ ವಿತರಿಸುತ್ತಿದ್ದು, ಇದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳು ಹಾಗೂ ಇನ್ನಿತರ ಮಾಹಿತಿಗಳನ್ನು ತಿಳಿಸಲು ಅನುಕೂಲವಾಗುತ್ತದೆ. ಕರ್ನಾಟಕ ರಾಜ್ಯದಲ್ಲಿಯೇ ಇದೊಂದು ವಿನೂತನ ಪ್ರಯೋಗವಾಗಿರುವುದ ರಿಂದ ಮೈಸೂರು ನಗರದ ನಾಗರಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ನಗರ ಪೊಲೀಸ್ ಕಮೀಷ್ನರ್ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.

2017ರ ಏಪ್ರಿಲ್ 1ರಿಂದ ಮೈಸೂರು ನಗರದಲ್ಲಿ ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ಬಂದಿದ್ದು, ಪೊಲೀಸ್ ಠಾಣೆಯ ಭೌಗೋಳಿಕ ಪ್ರದೇಶವನ್ನು ಬೀಟ್‍ಗಳಿಗೆ ವಿಭಜಿಸಿ ಪ್ರತೀ ಬೀಟ್‍ಗೆ ಒಬ್ಬ ಹೆಡ್ ಕಾನ್‍ಸ್ಟೇಬಲ್ ಅಥವಾ ಪೊಲೀಸ್ ಕಾನ್‍ಸ್ಟೇಬಲ್ ಅನ್ನು ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಎಎಸ್‍ಐ ಮತ್ತು ಮೇಲ್ಮಟ್ಟದ ಅಧಿಕಾರಿ ಗಳು ಬೀಟ್ ಪೊಲೀಸರ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳುವರು. ಬೀಟ್ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಗೂ ಭೇಟಿ ನೀಡಿ ಜನರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.

ಪ್ರತೀ ಬೀಟ್‍ನಲ್ಲಿ ಕನಿಷ್ಠ 50 ಮಂದಿಯನ್ನೊಳಗೊಂಡ ಸಮಿತಿ ಮಾಡಿಕೊಂಡು ಪ್ರತೀ ತಿಂಗಳು 2 ಸಭೆಗಳನ್ನು ನಡೆಸಿ ಸಮಸ್ಯೆಗಳ ಬಗ್ಗೆ ಪೊಲೀಸರು ಗಮನ ಹರಿಸಬೇಕಾಗಿದೆ.

Translate »