ಕ್ರೀಡೆ, ಹವ್ಯಾಸಗಳಿಂದ ಒತ್ತಡ ನಿವಾರಣೆ: ಡಿಸಿ ಕಿವಿಮಾತು
ಮೈಸೂರು

ಕ್ರೀಡೆ, ಹವ್ಯಾಸಗಳಿಂದ ಒತ್ತಡ ನಿವಾರಣೆ: ಡಿಸಿ ಕಿವಿಮಾತು

December 13, 2018

ಮೈಸೂರು:  ವಿಶ್ವದ ಇತರೆ ರಾಷ್ಟ್ರ ಗಳಿಗೆ ಹೋಲಿಸಿದರೆ ಭಾರತ ದೇಶದ ಪೊಲೀಸರು ಸದಾ ಹೆಚ್ಚು ಒತ್ತಡದಲ್ಲಿ ಸೇವೆ ಸಲ್ಲಿಸುತ್ತಾರೆಂದು ವರದಿ ಯೊಂದರಲ್ಲಿ ಉಲ್ಲೇಖವಾಗಿದ್ದು, ಕ್ರೀಡೆ ಸೇರಿದಂತೆ ವಿವಿಧ ಹವ್ಯಾಸಗಳನ್ನು ರೂಢಿಸಿಕೊಂಡು ಒತ್ತಡ ನಿವಾರಣೆ ಮಾಡಿ ಕೊಳ್ಳುವತ್ತ ಮುಂದಾಗಬೇಕೆಂದು ಮೈಸೂರು ಜಿಲ್ಲಾ ಧಿಕಾರಿ ಅಭಿರಾಮ್ ಜಿ.ಶಂಕರ್ ಸಲಹೆ ನೀಡಿದ್ದಾರೆ.

ಮೈಸೂರಿನ ಜ್ಯೋತಿನಗರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಇಂದು ಬೆಳಿಗ್ಗೆ ನಡೆದ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟವನ್ನು ಬೆಲೂನು ಹಾರಿ ಬಿಡುವ ಮೂಲಕ ಉದ್ಘಾಟಿಸಿ, ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ವಿವಿಧ ವಿಭಾಗಗಳ ಏಳು ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸರ ಸ್ಥಿತಿಗತಿ ಕುರಿತು ಸಂಸ್ಥೆಯೊಂದು ಅಧ್ಯಯನ ನಡೆಸಿ ವರದಿ ನೀಡಿದೆ. ಈ ವರದಿಯಲ್ಲಿ ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತ ದೇಶದ ಪೊಲೀ ಸರು ಹೆಚ್ಚಿನ ಪ್ರಮಾಣದ ಒತ್ತಡದ ನಡುವೆ ಕೆಲಸ ಮಾಡುತ್ತಿರುವುದನ್ನು ಉಲ್ಲೇಖಿಸಲಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಿರುವ ಭಾರತದಲ್ಲಿ ಪೊಲೀಸರು ಹೆಚ್ಚು ಬಲ(ಶಸ್ತ್ರಾಸ್ತ್ರ) ಪ್ರಯೋಗಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ಶಾಂತಿ ಹಾಗೂ ಸಮಾಧಾನದಿಂದ ವರ್ತಿಸ ಬೇಕಾದ ಅನಿವಾರ್ಯತೆ ಪೊಲೀಸರದ್ದಾಗಿದೆ. ಈ ಕಾರಣದಿಂದಾಗಿಯೇ ಭಾರತೀಯ ಪೊಲೀಸರಿಗೆ ಒತ್ತಡ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಪೊಲೀಸರು ಆರೋಗ್ಯವಂತರಾಗಬೇಕಾದರೆ ಮಾನ ಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಒತ್ತಡ ನಿವಾರಿಸಿಕೊಳ್ಳಲು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊ ಳ್ಳಬೇಕು. ಉತ್ತಮ ಹವ್ಯಾಸವನ್ನು ರೂಢಿಸಿಕೊಂಡಾಗ ಮಾತ್ರ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳಿದ ಅವರು, ಬಿಡುವು ಇಲ್ಲದೆ ಕೆಲಸ ಮಾಡುವ ಏಕೈಕ ಇಲಾಖೆ ಪೊಲೀಸ್ ಇಲಾಖೆಯಾಗಿದೆ. ಕೆಲವು ಸಂದರ್ಭಗಳಲ್ಲಿ ವಾರದ ಎಲ್ಲಾ ದಿನಗಳಲ್ಲಿಯೂ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ವಿಷಾದಿಸಿದರು.

ಹಗಲು-ರಾತ್ರಿ ಎನ್ನದೇ, ಮಳೆ-ಬಿಸಿಲು ಎನ್ನದೇ ಸೇವೆಗೆ ಹಾಜರಾಗುವ ಪೊಲೀಸರು ವರ್ಷಕ್ಕೆ 3 ದಿನ ಮಾತ್ರ ಹಬ್ಬದ ವಾತಾವರಣದಲ್ಲಿ ಮಿಂದೆದ್ದು ಸಂಭ್ರಮಿಸುತ್ತಾರೆ. ವಾರ್ಷಿಕ ಕ್ರೀಡಾಕೂಟ, ಜನವರಿ 1 ಹಾಗೂ ಆಯುಧ ಪೂಜೆಯ ದಿನದಲ್ಲಿ ಪೊಲೀಸÀರು ಸಂಭ್ರಮದಿಂದ ದಿನ ದೂಡುತ್ತಾರೆ. ಅದರಲ್ಲಿಯೂ ಮೈಸೂರಿನ ಪೊಲೀಸÀರಿಗೆ ದಸರಾ ಮಹೋತ್ಸವದ ಬಂದೋಬಸ್ತ್‍ನಲ್ಲಿ ಪಾಲ್ಗೊಳ್ಳ ಬೇಕಾಗಿರುವುದರಿಂದ ಆಯುಧಪೂಜೆಯ ದಿನದಲ್ಲಿಯೂ ಸಂಭ್ರಮಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ವಿಷಾ ಧಿಸಿದರಲ್ಲದೆ, ಸದಾ ಕ್ರೀಡಾಸ್ಫೂರ್ತಿ ನಿಮ್ಮದಾಗಿರಬೇಕು. ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಎಲ್ಲಾ ಪೊಲೀಸರು ಕ್ರೀಡಾ ಮನೋಭಾವದಿಂದ ಹಾಗೂ ಸಂತೋಷದಿಂದ ಭಾಗವಹಿಸಿ, ವರ್ಷವಿಡೀ ಸವಿನೆನಪನ್ನು ಅನುಭವಿಸು ವಂತೆ ಸಲಹೆ ನೀಡಿದರು.

ಇಂದು ಆರಂಭವಾದ ಕ್ರೀಡಾಕೂಟ ಡಿ.14ರವರೆಗೆ ನಡೆಯಲಿದೆ. ಪುರುಷರು, ಮಹಿಳೆಯರು ಹಾಗೂ ಅಧಿಕಾರಿ ಗಳ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ಜರುಗಲಿದೆ. 100 ಮೀ, 400 ಮೀ, 800 ಮೀ, 1500 ಮೀ ಓಟ, ಎತ್ತರ ಜಿಗಿತ, ಉದ್ದ ಜಿಗಿತ, ಜಾವೆಲಿನ್ ಎಸೆತ, ಗುಂಡು ಎಸೆತ, ಶಟಲ್ ಬ್ಯಾಡ್ಮಿಂಟನ್, ವಾಲಿಬಾಲ್, ಹಗ್ಗ ಜಗ್ಗಾಟ ಸೇರಿದಂತೆ ಇನ್ನಿತರ ಸ್ಪರ್ಧೆ ಆಯೋಜಿಸಲಾಗಿದೆ.
ಇಂದು ನಡೆದ 800 ಮೀಟರ್ ಪುರುಷರ ವಿಭಾಗದ ಓಟದ ಸ್ಪರ್ಧೆಯಲ್ಲಿ ಡಿಎಆರ್ ವಿಭಾಗದ ರಘುನಂದನ್ ಪ್ರಥಮ, ಹುಣಸೂರು ಉಪವಿಭಾಗದ ಜಿ.ಎಸ್.ರಘು ದ್ವಿತೀಯ, ಮೈಸೂರು ದಕ್ಷಿಣ ವಿಭಾಗದ ಆರ್.ಕೆ. ರಾಜೇಂದ್ರ ತೃತೀಯ ಬಹುಮಾನ ಪಡೆದರು. ಮಹಿಳಾ ವಿಭಾಗದ 100 ಮೀಟರ್ ಓಟದಲ್ಲಿ ಮೈಸೂರು ದಕ್ಷಿಣ ವಿಭಾಗದ ಆಶಾ ಪ್ರಥಮ, ಕೆ.ಆರ್.ವಿನಯಶ್ರೀ ದ್ವಿತೀಯ, ನಂಜನಗೂಡು ಉಪ ವಿಭಾಗದ ಕವಿತಾ ತೃತೀಯ ಬಹುಮಾನ ಪಡೆದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರಿಂದ ಬಹುಮಾನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಡಿಸಿಎಫ್ ಸಿದ್ರಾಮಪ್ಪ ಚಳ್ಕಾಪುರೆ, ಎಎಸ್ಪಿ ಪಿ.ವಿ.ಸ್ನೇಹ, ಅರುಣಾಂಶುಗಿರಿ, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಧರಣಿದೇವಿ ಮಾಲಗತ್ತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »