ಸಕಲೇಶಪುರದಲ್ಲಿ ಡಿಸಿಗೆ ಅಹವಾಲುಗಳ ಸುರಿಮಳೆ
ಹಾಸನ

ಸಕಲೇಶಪುರದಲ್ಲಿ ಡಿಸಿಗೆ ಅಹವಾಲುಗಳ ಸುರಿಮಳೆ

July 5, 2018

ಸಕಲೇಶಪುರ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ದೂರುಗಳ ಮಳೆಯೇ ಸುರಿಯಿತು.ಪಟ್ಟಣ ಪುರಭವನ ಸಭಾಂಗಣದಲ್ಲಿಂದು ಏರ್ಪಡಿಸಿದ್ದ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ತಾಲೂಕಿನ ಜನತೆ ತಮ್ಮ ಸಮಸ್ಯೆಗಳನ್ನು ತೆರೆದಿಟ್ಟರು.

ಸಭೆಯಲ್ಲಿ ನೂರಾರು ರೈತರು ವೈಯಕ್ತಿಕ ಹಾಗೂ ಗ್ರಾಮದ ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡರು. ಅಹವಾಲು ಆಲಿಸಿದ ಜಿಲ್ಲಾಧಿಕಾರಿ, ಎಲ್ಲಾ ಅರ್ಜಿಗಳನ್ನು ಕಾಲ ಮಿತಿಯೊಳಗೆ ವಿಲೇವಾರಿ ಮಾಡು ವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.

ಸಭೆಯಲ್ಲಿ ಭೂಮಿ ಸಂಬಂಧಿಸಿದ ವಿಷಯಗಳ ಕುರಿತು ಹೆಚ್ಚಿನ ದೂರು ಸಲ್ಲಿಕೆಯಾದವು. ಸರ್ಕಾರಿ ಜಮೀನು ಒತ್ತುವರಿ ತೆರವು, ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ದುರಸ್ತಿ, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ, ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಹತ್ತಾರು ಮನವಿಗಳು ಜಿಲ್ಲಾಧಿಕಾರಿಗೆ ಸಲ್ಲಿಕೆಯಾದವು.

ಹೇಮಾವತಿ ಜಲಾಶಯ ಯೋಜನೆ ಭೂಸಂತ್ರಸ್ತರಿಗೆ ಭೂಮಿ ಮಂಜೂರು ಹಾಗೂ ಎತ್ತಿನಹೊಳೆ ಯೋಜನೆಯಲ್ಲಿ ಜಮೀನು ಕಳೆದುಕೊಂಡವೆರು ಪರಿಹಾರಕ್ಕೆ ಆಗ್ರಹಿಸಿದರು. ತಕ್ಷಣ ಜಿಲ್ಲಾಧಿಕಾರಿ ಸರ್ವೇ ಕಾರ್ಯ ಆರಂಭಿಸಿ ರೈತರಿಗೆ ಅನುಕೂಲವಾಗುವಂತೆ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಕಲೇಶಪುರ ಪಟ್ಟಣದೊಳಗೆ ರಸ್ತೆ ತುಂಬಾ ಕಿರಿದಾಗಿದ್ದು, ನಿರಂತರ ಅಪಘಾತ ಸಂಭವಿಸುತ್ತಿವೆ. ಪಾರ್ಕಿಂಗ್ ಸಮಸ್ಯೆ ಹೆಚ್ಚಿದ್ದು, ರಸ್ತೆ ವಿಸ್ತರಣೆ ಮಾಡಿ ಎಂದು ಒತ್ತಾಯಿಸಿದ ನಾಗರಿಕರು, ಪಟ್ಟಣದಲ್ಲಿ ಗ್ರಂಥಾಲಯ ಶಿಥಿಲ ವಾಗಿದ್ದು, ಬಳಕೆಗೆ ಯೋಗ್ಯವಿಲ್ಲ. ಬದಲಿ ಕಟ್ಟಡ ನಿರ್ಮಿಸುವಂತೆ ಬೇಡಿಕೆ ಇಟ್ಟರು.

ಪಟ್ಟಣದಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ. ಹೇಮಾವತಿ ನದಿಗೆ ಕಸ ಸುರಿಯಲಾಗುತ್ತಿದ್ದು, ಇದರ ಬಗ್ಗೆ ಕ್ರಮ ವಹಿಸಿ. ನಗರದ ತ್ಯಾಜ್ಯ ನೀರು ಹೇಮಾವತಿ ನದಿಗೆ ಹರಿಬಿಡಲಾಗುತ್ತಿದ್ದು, ಅದೇ ನೀರು ಸಕಲೇಶಪುರ, ಹಾಸನ ಭಾಗಕ್ಕೆ ಕುಡಿಯಲು ಪೂರೈಸಲಾಗುತ್ತಿದೆ. ಈ ಕುರಿತು ಗಮನ ಹರಿಸಿ ಎಂದು ಜನತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ವೃದ್ಧಾಪ್ಯ ವೇತನ ಕೊಡಿಸಿ, ಒಂಟಿ ಮನೆಯ ಜನರು ಭಯದಿಂದ ಬದುಕುತ್ತಿದ್ದು, ಬಂದೂಕು ಪರವಾನಗಿ ಕೊಡಿಸಿ, ಹೆಚ್‍ಆರ್‍ಪಿ ಸರ್ಟಿಫಿಕೇಟ್ ನೀಡುವ ಸಂದರ್ಭದಲ್ಲಿ ನಕಲಿ ನಿರಾಶ್ರಿತರು ಅನುಕೂಲ ಪಡೆಯುತ್ತಿದ್ದು, ಅರ್ಹರಿಗೆ ಸೌಲಭ್ಯ ದೊರೆತಿಲ್ಲ. ಇದನ್ನು ಪರಿಶೀಲಿಸಿ ಭೂ ಮಂಜೂರಾತಿ ನೀಡಬೇಕು ಹಾಗೂ ಸರ್ಕಾರಿ ಕೆರೆ ಒತ್ತುವರಿ ತೆರವು ಮಾಡಿಸು ವಂತೆ ಅರ್ಜಿಗಳು ಸಲ್ಲಿಕೆಯಾದವು.

ಸಕಲೇಶಪುರದಲ್ಲಿ ಒಂದೊಂದು ಕಚೇರಿ ಒಂದೊಂದು ದಿಕ್ಕಿನಲ್ಲಿದ್ದು, ಭೌಗೋಳಿಕವಾಗಿ ಬಹಳ ಕಷ್ಟದ ಸ್ಥಳವಾಗಿದೆ. ಹಿಂದೆ ಸಕಲೇಶಪುರದಲ್ಲೇ ಬಂದೂಕು ಪರವಾನಗಿ ನವೀಕರಿಸಲಾಗುತ್ತಿತ್ತು, ಈಗಲೂ ಅದೇ ಸೌಲಭ್ಯ ಒದಗಿಸಿದರೆ ಅನುಕೂಲ. ಆರ್‍ಟಿಸಿ ಗ್ರಾಮ ಮಟ್ಟದಲ್ಲೇ ಸಿಗುವಂತೆ ಮಾಡಿ, ಕಾಫಿ, ಏಲಕ್ಕಿಯಂತಹ ಖಾಯಂ ಬೆಳೆ ಬೆಳೆಯುತ್ತಿದ್ದರೂ ಆರ್‍ಟಿಸಿಯಲ್ಲಿ ಬೆಳೆ ಕಾಲಂನಲ್ಲಿ ನಮೂದಾಗುತ್ತಿಲ್ಲ, ಈ ಸಮಸ್ಯೆ ಬಗೆಹರಿಸಿ ಎಂದು ಬೆಳೆಗಾರರು ಮನವಿ ಸಲ್ಲಿಸಿದರು.

ಸಾರ್ವಜನಿಕರಿಂದ ಅಹವಾಲು ಆಲಿಸಿದ ಜಿಲ್ಲಾಧಿಕಾರಿ, ಮಲೆನಾಡು ತಾಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿ ಸಿದರು. ಎಸಿ ಲಕ್ಷ್ಮೀಕಾಂತ ರೆಡ್ಡಿ, ತಹಶೀ ಲ್ದಾರ್ ನಾಗಭೂಷಣ್, ಡಿವೈಎಸ್‍ಪಿ ಜಗ ದೀಶ್, ತಾಪಂ ಇಓ ಪುನೀತ್ ಇತರರಿದ್ದರು.

Translate »