ಚೆಲುವನಿಗೆ 7.30ಕ್ಕೆ ಪೂಜಾ ಕೈಂಕರ್ಯ ಆರಂಭ
ಮಂಡ್ಯ

ಚೆಲುವನಿಗೆ 7.30ಕ್ಕೆ ಪೂಜಾ ಕೈಂಕರ್ಯ ಆರಂಭ

June 25, 2018

ಮೇಲುಕೋಟೆ: ದೇವಾಲ ಯದ ಕಾರ್ಯ ನಿರ್ವಾಹಕ ಅಧಿಕಾರಿಗಳ ಕಟ್ಟುನಿಟ್ಟಿನ ಆದೇಶದ ಫಲವಾಗಿ ಶ್ರೀಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 7.30ಕ್ಕೆ ಪೂಜಾ ಕೈಂಕರ್ಯಗಳು ಆರಂಭವಾಗುತ್ತಿದೆ.

ಹಲವು ವರ್ಷಗಳಿಂದ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 9.30ರಿಂದ ಪೂಜಾ ಕೈಂಕರ್ಯಗಳು ಆರಂಭವಾಗುತ್ತಿತ್ತು. ಆದರೆ ದೇವಾಲಯದ ಮುಂಭಾಗದ ಸೂಚನಾ ಫಲಕದಲ್ಲಿ ಮಾತ್ರ 7.30ಕ್ಕೆ ಆರಂಭ ಎಂದು ಹಾಕಲಾಗಿತ್ತು. ಇದರಿಂದ ಚೆಲುವ ನಾರಾಯಣ ಸ್ವಾಮಿ ದರ್ಶನಕ್ಕೆ ಭಕ್ತಾದಿಗಳು ಬಹುಬೇಗ ಬಂದರೂ ದೇವರ ದರ್ಶನ ತಡವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಭಕ್ತಾದಿ ಗಳು ಹಾಗೂ ಸ್ಥಳೀಯ ನಾಗರಿಕರು ದೇವಾಲಯದಲ್ಲಿ ಬೇಗ ಪೂಜಾ ಕಾರ್ಯ ಆರಂಭಿಸುವಂತೆ ಒತ್ತಾಯಿಸಿದ್ದರಿಂದ ದೇವಾಲಯಕ್ಕೆ ದಿಢೀರ್ ಭೇಟಿ ನೀಡಿದ ಕಾರ್ಯ ನಿರ್ವಾಹಕ ಅಧಿಕಾರಿ ನಂಜೇಗೌ ಡರಿಗೂ ವಾಸ್ತವ ಚಿತ್ರಣ ಎದುರಾಗಿ ಭಕ್ತರ ಅಸಮಾಧಾನ ಎದುರಿಸುವಂತಾಗಿತ್ತು.

ಈ ಸಂಬಂಧ ತಕ್ಷಣ ಕ್ರಮ ಕೈಗೊಂಡು ಜೂ.2 ರಂದೇ ಕಟ್ಟುನಿಟ್ಟಿನ ಆದೇಶ ನೀಡಿದ ಕಾರ್ಯ ನಿರ್ವಾಹಕ ಅಧಿಕಾರಿ ನಂಜೇಗೌಡ, ಅರ್ಚಕರು, ಪರಿಚಾರಕರು, ಅಡಿಗೆಮನೆ ಸಿಬ್ಬಂದಿ, ಕಾವಲುಗಾರರು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ದೇವಾಲಯಕ್ಕೆ ಬೆಳಿಗ್ಗೆ ಬೇಗ ಆಗಮಿಸಿ ಸೂಚನಾ ಫಲಕದಲ್ಲಿನ ವೇಳಾಪಟ್ಟಿಯಂತೆ ಸ್ವಾಮಿಯ ಪೂಜಾ ಕಾರ್ಯಕ್ರಮಕ್ಕೆ ಅಭಿಷೇಕ ತೀರ್ಥ ತಂದು 7.30ಕ್ಕೆ ಪೂಜೆ ಆರಂಭಿಸಬೇಕು. ಬೆಳಿಗ್ಗೆ 8 ಗಂಟೆ ವೇಳೆಗೆ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿ ದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ ಪರಿಣಾಮ ದೇವಾ ಲಯದಲ್ಲಿ ಚೆಲುವನಾರಾಯಣ ಸ್ವಾಮಿಗೆ 7.30ಕ್ಕೆ ಪೂಜಾ ಕೈಂಕರ್ಯ ಆರಂಭ ವಾಗುತ್ತಿದೆ. ಈ ವ್ಯವಸ್ಥೆ ಲೋಪವಾಗ ದಂತೆ ಮುಂದುವರೆಯಬೇಕಿದೆ.

ನಿಗದಿತ ಸಮಯಕ್ಕೆ ಉತ್ಸವಗಳು: ಈ ಹಿಂದೆ ಸಂಜೆ 5ಗಂಟೆಗೆ ನಡೆಯುತ್ತಿದ್ದ ಪಂಚಪರ್ವ ಹಾಗೂ ಇತರ ಚೆಲುವನಾರಾಯಣ ಸ್ವಾಮಿ ಉತ್ಸವಗಳು, ವಾಹನೋತ್ಸ ವಗಳು ಸಮಯ ಮೀರಿ, ಕೆಲವೊಮ್ಮೆ ರಾತ್ರಿ 7 ಗಂಟೆ ನಂತರವೂ ನಡೆಯುತ್ತಿತ್ತು. ಇದರಿಂದ ದೂರದ ಊರುಗಳಿಗೆ ತೆರಳಬೇಕಾದ ಸೇವಾರ್ಥದಾರರಿಗೆ ತೊಂದರೆಯಾಗಿತ್ತು. ಈ ಬಗ್ಗೆಯೂ ಗಮನ ಹರಿಸಿರುವ ಕಾರ್ಯ ನಿರ್ವಾಹಕ ಅಧಿಕಾರಿಗಳು ಪಂಚಪರ್ವ ಉತ್ಸವ ಮತ್ತು ಸೇವಾರ್ಥ ಉತ್ಸವ ಹಾಗೂ ವಾಹನೋತ್ಸವಗಳನ್ನು ಸಂಜೆ 5 ರಿಂದ 6 ಗಂಟೆಯೊಳಗೆ ನಡೆಸಲು ಮೌಖಿಕ ಆದೇಶ ನೀಡಿದ್ದಾರೆ.

Translate »