ವಿದ್ಯುತ್ ಸ್ಪರ್ಶ: ಮೂವರು ಕಾರ್ಮಿಕರ ದಾರುಣ ಸಾವು
ಮೈಸೂರು

ವಿದ್ಯುತ್ ಸ್ಪರ್ಶ: ಮೂವರು ಕಾರ್ಮಿಕರ ದಾರುಣ ಸಾವು

May 20, 2019

ಮಡಿಕೇರಿ: ಕಾಫಿ ತೋಟದಲ್ಲಿ ಮರ ಕಪಾತು ನಿರ್ವಹಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಓರ್ವ ಮಹಿಳೆ ಸೇರಿ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿ, ಮತ್ತೋರ್ವ ಕಾರ್ಮಿಕ ಮಹಿಳೆ ಗಂಭೀರವಾಗಿ ಗಾಯಗೊಂಡ ದುರಂತ ನಾಪೋಕ್ಲು ಸಮೀಪದ ದೊಡ್ಡ ಪುಲಿ ಕೋಟು ಗ್ರಾಮದಲ್ಲಿ ಭಾನುವಾರ ನಡೆದಿದೆ.

ಬಲ್ಲಮಾವಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡ ಪುಲಿಕೋಟು ಗ್ರಾಮದ ಮಾದೇಯಂಡ ಕುಂಞ್ಞಪ್ಪ ಎಂಬುವರ ಕಾಫಿತೋಟದಲ್ಲಿ ಮರ ಕಪಾತು ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕೂಲಿ ಕಾರ್ಮಿಕರಾದ ದಾಯನ ತಮ್ಮಯ್ಯ (45), ಅನಿಲ್ (44) ಹಾಗೂ ಅನಿಲ್ ಅವರ ಪತ್ನಿ ಕವಿತಾ (36) ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದ್ದು, ಗಂಭೀರವಾಗಿ ಗಾಯಗೊಂಡ ಮತ್ತೋರ್ವ ಕಾರ್ಮಿಕ ಮಹಿಳೆ ಸುನಿತಾ (32) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಚೇರಂಬಾಣೆಯ ನಿವಾಸಿ ದಾಯನ ತಮ್ಮಯ್ಯ ಹಾಗೂ ಮೂಲತಃ ಕಾಸರಗೋಡಿನ ನಿವಾಸಿ ಗಳಾದ ಅನಿಲ್-ಕವಿತಾ ದಂಪತಿ ಮತ್ತು ಸುನೀತಾ ಎಂಬ ಮತ್ತೋರ್ವ ಮಹಿಳೆ ಸ್ಥಳೀಯರಾದ ಮಾದೆಯಂಡ ಕುಂಞ್ಞಪ್ಪ ಎಂಬುವರ ತೋಟದಲ್ಲಿ ಭಾನುವಾರ ಮರ ಕಪಾತು ಕೆಲಸ ನಿರ್ವಹಿಸುತ್ತಿದ್ದರು. ಬೆಳಿಗ್ಗೆ ಸುಮಾರು 11.30 ಗಂಟೆ ವೇಳೆಯಲ್ಲಿ ಮರವನ್ನೇರಲು ಬಳಸಲಾಗಿದ್ದ 36 ಅಡಿ ಎತ್ತರದ ಅಲ್ಯುಮೀನಿಯಂ ಏಣಿ ಅಲ್ಲೇ ಪಕ್ಕದಲ್ಲೇ ಹಾದುಹೋಗಿದ್ದ 11 ಕೆ.ವಿ. ವಿದ್ಯುತ್ ತಂತಿಗೆ ಸ್ಪರ್ಶಿಸಿದೆ.

ಇದನ್ನು ಗಮನಿಸದೆ ಕಾರ್ಮಿಕ ತಮ್ಮಯ್ಯ ಅವರು ಏಣಿಯನ್ನು ಮುಟ್ಟಿದಾಗ ವಿದ್ಯುತ್ ಹರಿದು ತಮ್ಮಯ್ಯ ಕೆಳಗೆ ಬಿದ್ದಿದ್ದಾರೆ. ತಮ್ಮಯ್ಯ ಅವರನ್ನು ರಕ್ಷಿಸಲು ತೆರಳಿದ ಅನಿಲ್ ಅವರಿಗೂ ಈ ಸಂದರ್ಭ ವಿದ್ಯುತ್ ಸ್ಪರ್ಶ ವಾಗಿದೆ. ಇದೇ ವೇಳೆ ಪತಿಯನ್ನು ರಕ್ಷಿಸಲು ತೆರಳಿದ ಅವರ ಪತ್ನಿ ಕವಿತಾ ಸಹ ವಿದ್ಯುತ್ ಸ್ಪರ್ಶಗೊಂಡು ಒಟ್ಟಾರೆ ಮೂವರು ಸ್ಥಳದಲ್ಲೇ ದಾರುಣ ವಾಗಿ ಸಾವನ್ನಪ್ಪಿದ್ದಾರೆ. ಕವಿತಾ ಅವರ ಕಿರುಚಾಟವನ್ನು ಕೇಳಿ ಅಲ್ಲಿಗೆ ಧಾವಿಸಿದ ಮತ್ತೋರ್ವ ಕಾರ್ಮಿಕ ಮಹಿಳೆ ಸುನಿತಾ ಅವರಿಗೂ ವಿದ್ಯುತ್ ಸ್ಪರ್ಶವಾಗಿ ಗಂಭೀರ ಗಾಯ ವಾಗಿದೆ. ಮೃತ ತಮ್ಮಯ್ಯ ಅವರು ಬಲ್ಲಮಾವಟಿಯ ಕರವಂಡ ಸುರೇಶ್ ಎಂಬುವರ ಲೈನ್‍ಮನೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ವಾಸವಿದ್ದು, ಅನಿಲ್-ಕವಿತಾ ಮತ್ತು ಸುನೀತಾ ಇದೇ ತೋಟದ ಲೈನ್‍ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ತಮ್ಮಯ್ಯ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳು, ಅನಿಲ್ ಹಾಗೂ ಕವಿತಾ ದಂಪತಿಯೂ ಚಿಕ್ಕ ವಯಸ್ಸಿನ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಘಟನಾ ಸ್ಥಳದಲ್ಲಿ ಮೃತರ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ಕೂಲಿ ಆಸೆಗೆ ಬಂದು ಸಾವಿನ ಮನೆ ಕದತಟ್ಟಿದ ತಮ್ಮಯ್ಯ ಹಾಗೂ ಪುಟ್ಟ ಮಕ್ಕಳನ್ನು ಅಗಲಿದ ಅನಿಲ್ ದಂಪತಿ ಸಾವಿಗೆ ನೆರೆದಿದ್ದ ಗ್ರಾಮಸ್ಥರು ಕಂಬನಿ ಮಿಡಿದರು. ಘಟನಾ ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ರೇಣುಕಾ ಪ್ರಸಾದ್, ಸಿಬ್ಬಂದಿಗಳಾದ ನವೀನ್, ಹರೀಶ್, ಮಾಚಯ್ಯ, ಸಮ್ಮದ್ ಹಾಗೂ ಚೆಸ್ಕಾಂನ ಕಿರಿಯ ಅಭಿಯಂತರ ಹೆಚ್.ಆರ್.ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ದಾರುಣ ಘಟನೆ ಕುರಿತು ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Translate »