ಮೈಸೂರು, ಸೆ.19(ಎಸ್‍ಬಿಡಿ)-ನಾಡಹಬ್ಬ ದಸರಾ ಮಹೋ ತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ದಸರಾ ಉದ್ಘಾಟಕರಾದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರನ್ನು ಗುರುವಾರ ಅಧಿಕೃತವಾಗಿ ಆಹ್ವಾನಿಸಲಾಯಿತು.
ವಸತಿ ಸಚಿವರೂ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಅರಮನೆಗೆ ತೆರಳಿ ಪ್ರಮೋದಾದೇವಿ ಒಡೆಯರ್ ಅವರನ್ನು ಹಾಗೂ ಮೈಸೂರಿನ ಕುವೆಂಪುನಗರದ ನಿವಾಸದಲ್ಲಿ ಎಸ್.ಎಲ್.ಭೈರಪ್ಪ ಅವರನ್ನು ಭೇಟಿ ಮಾಡಿ, ಫಲ ತಾಂಬೂಲ ನೀಡಿ, ಅಭಿನಂದಿಸುವ ಮೂಲಕ ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರದ ಪರವಾಗಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿರ್ದೇಶನದ ಮೇರೆಗೆ, ನಾಡಹಬ್ಬಕ್ಕೆ ಪ್ರಮೋದಾ ದೇವಿ ಒಡೆಯರ್ ಹಾಗೂ ಎಸ್.ಎಲ್. ಭೈರಪ್ಪ ಅವರನ್ನು ಅತ್ಯಂತ ಗೌರವಯುತ ವಾಗಿ ಆಹ್ವಾನಿಸಲಾಗಿದ್ದು, ಇವರೂ ನಾಡಹಬ್ಬದಲ್ಲಿ ಭಾಗವಹಿಸಲು ಸಂತೋಷ ದಿಂದ ಒಪ್ಪಿದ್ದಾರೆ. ರಾಜಮಹಾರಾಜರು ರಾಜ್ಯಕ್ಕೆ ವಿಶೇಷವಾಗಿ ಮೈಸೂರು ಪ್ರಾಂತ್ಯಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಐತಿಹಾಸಿಕ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ದಸರಾ ಮಹತ್ವದ್ದಾಗಿದೆ. ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಅವರನ್ನು ಆಹ್ವಾನಿಸಿದ್ದು ಸಂತೋಷ ತಂದಿದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಾಡಿನ ಹೆಮ್ಮೆ ಎಸ್.ಎಲ್.ಭೈರಪ್ಪನವರು ದಸರಾ ಉದ್ಘಾಟಿಸಲಿದ್ದಾರೆ. ಅವರ ಅಮೃತ ಹಸ್ತದಿಂದ ಸೆ.29ರಂದು ತಾಯಿ ಚಾಮುಂಡೇಶ್ವರಿ ಸನ್ನಿದಿಯಲ್ಲಿ ರಾಜ್ಯದ ಮಹಾಜನತೆ ಪ್ರತೀಕರಾಗಿ ದಸರಾ ಉದ್ಘಾಟಿಸಲಿದ್ದಾರೆ ಎಂದು ನುಡಿದರು.
ಸಹಕಾರವಿದೆ: ಆಹ್ವಾನ ಸ್ವೀಕರಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಮೋದಾ ದೇವಿ ಒಡೆಯರ್, ಪ್ರತೀ ವರ್ಷದಂತೆ ಸರ್ಕಾರದ ಪರವಾಗಿ ಸಾಂಪ್ರದಾಯಕವಾಗಿ ನೀಡಿರುವ ಆಹ್ವಾನವನ್ನು ಸ್ವೀಕರಿಸಿದ್ದೇನೆ. ನಮ್ಮ ಕಡೆಯಿಂದ ಎಲ್ಲಾ ಸಹಕಾರ ನೀಡುತ್ತೇವೆ. ಹಾಗೆಯೇ ಸರ್ಕಾರದ ಕಡೆಯಿಂದಲೂ ನಮಗೆ ಸಹಕಾರ ಬೇಕೆಂದು ಕೇಳಿದ್ದೇವೆ. ಸಾಂಪ್ರದಾಯಿಕ ವಿಜಯದಶಮಿಗೆ ಸಿದ್ಧತೆ ನಡೆಯುತ್ತಿದೆ. ಜಯಚಾಮರಾಜ ಒಡೆಯರ್ ಅವರ ಜನ್ಮ ಶತಾಬ್ಧಿ ಸಂದರ್ಭದಲ್ಲಿ ಅವರಿಗೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸುವುದಾಗಿ ಸಚಿವರೇ ಹೇಳಿದ್ದಾರೆ. ಹಾಗಾಗಿ ಈ ಬಗ್ಗೆ ನಾನು ಸಲಹೆ ನೀಡುವ ಅಗತ್ಯವಿಲ್ಲ. ಈ ಬಾರಿ ಜಂಬೂ ಸವಾರಿಯಂದು ಪುಷ್ಪಾರ್ಚನೆ ಕಾರ್ಯದಲ್ಲಿ ಯದುವೀರ್ ಭಾಗಿಯಾಗಲಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ನಿಜ ಪ್ರೀತಿಯಿಂದ ಆಹ್ವಾನಿಸಿದ್ದಾರೆ: ದಸರಾ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿ ರುವುದಕ್ಕೆ ಸಂತೋಷವಾಗಿದೆ. ಒಂದಷ್ಟು ಬದಲಾವಣೆಯೊಂದಿಗೆ ದಸರಾ ಪರಂಪರೆ ಮುಂದುವರೆಯುತ್ತಿದೆ. ಇತ್ತೀಚೆಗೆ ವಿದ್ಯುತ್ ದೀಪಾಲಂಕಾರ ಮೆರಗು ನೀಡಿದಂತಿದೆ. ದಸರಾ ನೋಡಲು ಬರುವವರೂ ಹೆಚ್ಚಾಗಿದ್ದಾರೆ. ಪ್ರೀತಿಗೆ ಯಾರಾದರೂ ತಲೆ ಬಾಗಲೇಬೇಕು. ಅಂತೆಯೇ ನಿಜವಾದ ಪ್ರೀತಿಯಿಂದ ಸರ್ಕಾರ ಆಹ್ವಾನಿಸಿರುವು ದರಿಂದ ಇಂಗ್ಲೆಂಡ್ ಪ್ರವಾಸವನ್ನು ಮುಂದೂಡಿ, ಒಪ್ಪಿಕೊಂಡಿದ್ದೇನೆ. ಆದರೆ ಈಗಿನ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಅಹಂಕಾರ ಕಾಣಿಸುತ್ತಿಲ್ಲ. ಸಾಹಿತಿಗಳನ್ನು ನಿಜವಾಗಿ ಪ್ರೀತಿಸುವ ವಿದ್ಯಾವಂತರು ಈ ಸರ್ಕಾರದಲ್ಲಿ ಇದ್ದಾರೆ. ಹಾಗೆಂದ ಮಾತ್ರಕ್ಕೆ ಸರ್ಕಾರವನ್ನು ಹೊಗಳುತ್ತಿದ್ದೇನೆ ಎಂದಲ್ಲ. ದಿವಾನ್ ವಿಶ್ವೇಶ್ವರಯ್ಯನವರಿಗೆ `ಭಾರತ ರತ್ನ’ ನೀಡುವ ಸಂದರ್ಭದಲ್ಲಿ ಅಂದಿನ ಪ್ರಧಾನಿ ನೆಹರೂ ಅವರು ವೈಯಕ್ತಿಕವಾಗಿ ಪತ್ರ ಬರೆದು ತಿಳಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ವಿಶ್ವೇಶ್ವರಯ್ಯನವರು `ಅಭಿನಂದನೆಗಳು. ಆದರೆ ಈ ಪ್ರಶಸ್ತಿ ನೀಡಿದ್ದರಿಂದ ಎಲ್ಲಾ ವಿಷಯಗಳಲ್ಲೂ ಬೆಂಬಲ ನೀಡುತ್ತೇನೆಂದು ತಿಳಿದುಕೊಳ್ಳಬೇಡಿ’ ಎಂದು ಹೇಳಿದ್ದರಂತೆ ಎಂದು ಸ್ಮರಿಸಿಕೊಂಡರು.
ಸಂಸದ ಪ್ರತಾಪ್ ಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪರಿಮಳ ಶ್ಯಾಂ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಹೆಚ್ಚುವರಿ ಆಯುಕ್ತ ಶಶಿಕುಮಾರ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಪಾಲಿಕೆ ಸದಸ್ಯರಾದ ಪ್ರೇಮಾ ಶಂಕರೇಗೌಡ, ಭಾಗ್ಯ ಮಾದೇಶ್, ಸಾಹಿತಿ ಪ್ರಧಾನ ಗುರುದತ್ ಇನ್ನಿತರ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.