ಡಾ.ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ, ಭಾರತರತ್ನ ಪುರಸ್ಕಾರಕ್ಕೆ ಆಗ್ರಹ
ಮಂಡ್ಯ: ಜಿಲ್ಲಾದ್ಯಂತ ಮಂಗಳವಾರ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಶಿವೈಕ್ಯ ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿಗಳಿಗೆ ಭಕ್ತಿ, ಭಾವ ಪೂರ್ಣ ಪುಷ್ಪ ನಮನ ಸಲ್ಲಿಸಿದರು.
ಜಿಲ್ಲಾ ಕೇಂದ್ರ ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲೂ ನಡೆದಾಡುವ ದೇವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಬಗ್ಗೆ ವರದಿಯಾಗಿದೆ. ಭಾರತೀನಗರದಲ್ಲಿ ಶ್ರೀಗಳ ಗೌರವಾರ್ಥ ವರ್ತಕರಿಂದ ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಂಡ್ಯ: ಜಿಲ್ಲಾ ಕೇಂದ್ರ ಮಂಡ್ಯದಲ್ಲಿ ರೈತಸಂಘ, ಕರಾದಸಂಸ, ಜಿಲ್ಲಾ ಬಿಜೆಪಿ, ಕಾಯಕಯೋಗಿ ಪ್ರತಿಷ್ಠಾನ, ಪ್ರಗತಿಪರ ಹೋರಾಟಗಾರರು, ವೀರ ಶೈವ ಲಿಂಗಾಯತ ಬಳಗ ಹಾಗೂ ಬಸರಾಳು ಗ್ರಾಮಸ್ಥರು ವಿಭಿನ್ನ, ವಿಶಿಷ್ಟವಾಗಿ ಶ್ರೀಗಳಿಗೆ ನಮನ ಸಲ್ಲಿಸಿದರು. ಜಿಲ್ಲೆಯ ಬಹುತೇಕ ಚಿತ್ರ ಮಂದಿರಗಳ ಮಾಲೀಕರು ಚಿತ್ರ ಪ್ರದರ್ಶನ ಸ್ಥಗಿತ ಗೊಳಿಸಿ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ರೈತ ನಮನ: ನಗರದ ಮೈಸೂರು-ಬೆಂಗಳೂರು ಹೆದ್ದಾರಿಯ ಜೆಸಿ ವೃತ್ತದಲ್ಲಿ ಜಿಲ್ಲಾ ರೈತಸಂಘ ಆಯೋಜಿಸಿದ್ದ ಶಿವೈಕ್ಯ ಡಾ.ಶಿವಕುಮಾರಶ್ರೀಗಳಿಗೆ ಭಕ್ತಿ ಪೂರ್ವಕ ರೈತ ನಮನ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಜಿಲ್ಲಾ ರೈತಸಂಘದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್ ಮಾತನಾಡಿ, 19ನೇ ಶತಮಾನದ ಆರಂಭ ದಲ್ಲಿ ಸಿದ್ಧಗಂಗಾಶ್ರೀ ಮಠದಿಂದ ಶೈಕ್ಷಣಿಕ, ಆರೋಗ್ಯ, ಆಶ್ರಯ ಮತ್ತು ಸಮಾಜಮುಖಿ ಕ್ಷೇತ್ರಗಳಲ್ಲಿನ ಸಾಧನೆ ವಿಶ್ವವಿಖ್ಯಾತಗೊಂಡಿವೆ. ರೈತರು, ಅನಾಥರು ಮತ್ತು ಅಂಗವಿಕಲರ ಸೇವೆಗಾಗಿ ಹಗಲಿರುಳು ಶ್ರಮಿಸಿ ಉನ್ನತ ಶಿಕ್ಷಣ ನೀಡಿದ ಕೀರ್ತಿ ಮರೆಯಾಗದು ಎಂದು ಸ್ಮರಿಸಿದರು.
ಲಕ್ಷಾಂತರ ಭಕ್ತರಿಗೆ ಮತ್ತು ಮಕ್ಕಳಿಗೆ ಅನ್ನ, ವಿದ್ಯೆ ದಾಸೋಹ ನೀಡಿ ಪೋಷಿಸಿದ ಸದ್ಗುರುಗಳ ಮಾನವೀಯತೆ ಎಲ್ಲರಿಗೂ ಮಾದರಿ. ಇಂತಹ ಪುಣ್ಯಪುರುಷರ ತತ್ವಾದರ್ಶಗಳನ್ನು ಮುಂದಿನ ಸ್ವಾಮೀಜಿಗಳು ಮುಂದುವರಿಸಲಿ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ರೈತ ಮುಖಂಡ ರಾದ ಲತಾಶಂಕರ್, ಜಗದೀಶ್, ಹರೀಶ್, ನಾಗಣ್ಣ, ಸಿದ್ದೇಗೌಡ, ಚಂದ್ರ ಮತ್ತಿತರರಿದ್ದರು.
ದಸಂಸ ಶ್ರದ್ಧಾಂಜಲಿ: ನಗರದ ಗಾಂಧಿ ಭವನ ದಲ್ಲಿ ಕರಾದಸಂಸ ವತಿಯಿಂದ ನಡೆದ ದಿ.ಮರಳಗಾಲ ಸಿದ್ದರಾಜುಗೆ ನುಡಿನಮನ ಹಾಗೂ ಶ್ರೀ ಸಿದ್ಧಗಂಗಾ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಮುಖಂಡ ಎಂ.ಬಿ.ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರಾದಸಂಸ ರಾಜ್ಯ ಸಂಚಾಲಕ ಅಂದಾನಿ ಅಧ್ಯಕ್ಷತೆ ವಹಿಸಿ ದ್ದರು. ಮುಖಂಡರಾದ ಗುರುಪ್ರಸಾದ್, ನಾಗ ರಾಜು, ಎಸ್.ಸಿದ್ದಯ್ಯ, ಎಂ.ಕೃಷ್ಣಮೂರ್ತಿ, ಎಂ.ಸಿ.ಶಿವರಾಜು, ರಮೇಶ್, ಅಣ್ಣೂರು ರಾಜಣ್ಣ, ಡಿ.ಕೆ.ಅಂಕಯ್ಯ, ಪ್ರೊ.ಹುಲ್ಕೆರೆ ಮಹದೇವು, ನಂಜುಂಡ ಮೌರ್ಯ ಇತರರಿದ್ದರು.
ಬಿಜೆಪಿ ಪುಷ್ಪನಮನ: ನಗರದ ಬಿಜೆಪಿ ಕಚೇರಿ ಬಳಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮತ್ತು ಸಿದ್ಧ ಗಂಗಾ ಶ್ರೀಮಠದ ಭಕ್ತರು ಆಯೋಜಿಸಿದ್ದ ಲಿಂಗೈಕ್ಯ ರಾದ ಸಿದ್ಧಗಂಗಾಶ್ರೀಗಳಿಗೆ ಸಂತಾಪ ಸೂಚಿಸಿ, ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಬಿಜೆಪಿ ಯುವ ಮುಖಂಡ ಸುರೇಶ್, ಜಿಲ್ಲಾ ಬಿಜೆಪಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಮಾತನಾಡಿ, ಕೇಂದ್ರ ಸರ್ಕಾರ ಕಾಯಕಯೋಗಿ ಸಿದ್ಧಗಂಗಾಶ್ರೀಗಳಿಗೆ ಮರಣೋತ್ತರ ಭಾರತರತ್ನ ಪುರಸ್ಕಾರ ನೀಡಿ ಗೌರವಿಸಿದರೆ, ಆ ಪುರಸ್ಕಾರಕ್ಕೆ ಹೆಚ್ಚು ಮಹತ್ವ ಲಭಿಸುತ್ತದೆ. ಶ್ರೀಮಠದ ಭಕ್ತರ ಭಾವನೆಗಳನೆಗಳನ್ನು ಕೇಂದ್ರ ಸರ್ಕಾರ ಅರ್ಥೈಸಿ ಕೊಂಡು ಶ್ರೇಷ್ಠ ಪುರಸ್ಕಾರ ನೀಡುವುದು ಉತ್ತಮ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರಾದ ಎಂ.ಬಿ.ರಮೇಶ್, ಶಿವಕುಮಾರ್ ಆರಾಧÀ್ಯ, ವರದರಾಜು, ಮಹೇಂದ್ರ, ವಿವೇಕ್, ಹನು ಮಂತು, ಲೋಕೇಶ್ ಮತ್ತಿತರರಿದ್ದರು.
ಶ್ರೀಗಳ ಅಂತಿಮ ನಮನಕ್ಕೆ ಎಲ್‍ಇಡಿ ಸ್ಕ್ರೀನ್ ಅಳವಡಿಕೆ: ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ವೀರಶೈವ ಲಿಂಗಾಯತ ಬಳಗ ಹಾಗೂ ಗ್ರಾಮಸ್ಥರು ಡಾ.ಶ್ರೀಶಿವಕುಮಾರ ಅಂತಿಮ ದರ್ಶನಕ್ಕೆ ಎಲ್‍ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾ ಗಿತ್ತು. ಬಸರಾಳಿನ ಮಂಡ್ಯ ನಾಗಮಂಗಲ ಮುಖ್ಯ ರಸ್ತೆಯ ಬಸ್ ನಿಲ್ದಾಣದಲ್ಲಿ ಶಾಮಿಯಾನ ಹಾಕಿ ಸ್ವಾಮಿಗಳ ಭಾವಚಿತ್ರ ಇಟ್ಟು ತಳಿರು ತೋರಣ ಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಮಳವಳ್ಳಿ: ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳಿಗೆ ತಾಲೂಕಿನಾದ್ಯಂತ ಶ್ರದ್ಧಾಂಜಲಿ ಸಲ್ಲಿಸ ಲಾಯಿತು. ಪಟ್ಟಣದ ಅಂಚೆ ಕಚೇರಿ ಮುಂಭಾಗ ವಿವಿಧ ಸಮುದಾಯಗಳ ಮುಖಂಡರು ಶ್ರೀಗಳಿಗೆ ಶ್ರದ್ದಾಂಜಲಿ ಸಲ್ಲಿಸಿದರು. ಜೆಡಿಎಸ್ ಕಚೇರಿಯಲ್ಲಿ ತಾಲೂಕು ಅಧ್ಯಕ್ಷ ಹಾಗೂ ಜಿಪಂ ಆರೋಗ್ಯ ಹಾಗೂ ಶಿಕ್ಷಣ ಸಮಿತಿ ಅಧ್ಯಕ್ಷ ರವಿ ಅಧ್ಯಕ್ಷತೆಯಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು. ಮಾಜಿ ಪುರಸಭೆ ಅಧ್ಯಕ್ಷ ದೊಡ್ಡಯ್ಯ ಸೇರಿದಂತೆ ಅನೇಕರಿದ್ದರು.