ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ಬಂಡಿ ಉತ್ಸವ
ಮೈಸೂರು

ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ಬಂಡಿ ಉತ್ಸವ

January 23, 2019

ಮೂಗೂರು: ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಬಂಡಿ ಉತ್ಸವ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಬಂಡಿ ಉತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆಯಿಂದಲೇ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಆರಂಭವಾಯಿತು. ಬೆಳಿಗ್ಗೆ 10.35ರ ವೇಳೆಗೆ ಶ್ರೀ ತ್ರಿಪುರ ಸುಂದರಿ ಅಮ್ಮನವರ ಉತ್ಸವ ಮೂರ್ತಿಯನ್ನು ದೇವಾಲಯ ಸುತ್ತ ಪ್ರದಕ್ಷಿಣೆ ಹಾಕಿ ನಂತರ ರುದ್ರಾಕ್ಷಿ ಮಂಟಪದೊಂದಿಗೆ ಬಂಡಿ ಬೀದಿಗೆ ಮೆರವಣಿಗೆ ಮೂಲಕ ತರಲಾಯಿತು.

ಈ ವೇಳೆ ಹರಕೆ ಹೊತ್ತ ಭಕ್ತರು ಮೊದಲ ಬಂಡಿಗೆ ಈಡುಗಾಯಿ ಅರ್ಪಿಸಿ ಭಕ್ತಿ ಪರಕಾಷ್ಟೆ ಮೆರೆದರು. ನಂತರ ಗ್ರಾಮಸ್ಥರ ಸಮ್ಮುಖದಲ್ಲಿ ಮಹಾಮಂಗಳಾರತಿ ನೆರವೇರಿಸಿದ ಬಳಿಕ ಮೊದಲ ಬಂಡಿ ಓಟಕ್ಕೆ ಚಾಲನೆ ದೊರೆಯಿತು.

ರೈತರ ಉತ್ಸುಕತೆ: ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ನೂರಾರು ರೈತರು ತಮ್ಮ ರಾಸುಗಳನ್ನು ಸಿಂಗರಿಸಿ ಬಂಡಿಗೆ ಕಟ್ಟಿ ಉತ್ಸುಕತೆಯಿಂದಲೇ ಬಂಡಿ ಓಡಿಸಿದರು. ಈ ರೋಚಕ ಓಟದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಹಸ್ತ್ರಾರು ಮಂದಿ ಬಂಡಿ ಬೀದಿಯ ಎರಡು ಬದಿಯಲ್ಲಿ ಜಮಾಯಿಸಿದ್ದರು. ಬಂಡಿ ಸಾಗುವ ವೇಳೆ ಭಕ್ತರು ಹರ್ಷೊದ್ಘಾರದಿಂದ ತ್ರಿಪುರಸುಂದರಿ ಅಮ್ಮನವರಿಗೆ ಜೈಕಾರ ಹಾಕಿದರು. ಮೂಗೂರು ಬಂಡಿ ಎಂದೇ ಖ್ಯಾತಿ ಪಡೆದ ಈ ಹಬ್ಬಕ್ಕೆ ರೈತರು ರಾಜ್ಯದ ನಾನಕಡೆಯಿಂದ ಲಕ್ಷಾಂತರ ರೂ. ಬೆಲೆ ಬಾಳುವ ಎತ್ತುಗಳನ್ನು ಖರೀದಿಸಿ ತಂದು ಬಂಡಿಗೆ ಕಟ್ಟಿ ಓಡಿಸುವುದು ಈ ಜಾತ್ರೆಯ ಮತ್ತೊಂದು ವಿಶೇಷ.

ಭಾರೀ ಜನಸ್ತೋಮ: ಬಂಡಿ ಉತ್ಸವ ಹಿನೆÀ್ನಲೆಯಲ್ಲಿ ನೆಂಟರು ಹಾಗೂ ಬಂಧು-ಬಳಗದವರಿಂದ ಇಡೀ ಗ್ರಾಮದ ರಸ್ತೆಗಳೆಲ್ಲವೂ ತುಂಬಿ ತುಳುಕಿದ್ದು, ದೇವಾಲಯದ ಆವರಣದಲ್ಲಿ ಭಾರೀ ಜನಸ್ತೋಮವೇ ಸೇರಿತ್ತು.

ತಳಿರು-ತೋರಣಗಳಿಂದ ಸಿಂಗಾರ: ಗ್ರಾಮದ ಪ್ರಮುಖ ಬೀದಿಗಳು ಹಸಿರು ತಳಿರು-ತೋರಣಗಳಿಂದ ಸಿಂಗರಿಸಿದ್ದು, ಗ್ರಾಮದ ಬಸ್ ನಿಲ್ದಾಣದಿಂದ ದೇವಾಲಯದವರೆಗೆ ಮಾಡಿರುವ ವಿದ್ಯುತ್ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿದೆ.

ನಾಲ್ಕು ದಿನ ಅನ್ನಸಂತರ್ಪಣೆ: ಬಂಡಿ ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಬ್ಯಾಡರಹಳ್ಳಿ ಗ್ರಾಮಸ್ಥರಿಂದ ಜಾತ್ರೆಗೆ ಬರುವ ಭಕ್ತಾದಿಗಳಿಗೆ ನಾಲ್ಕು ದಿನಗಳ ಕಾಲ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ದೇವಾಲಯದ ಆವರಣದಲ್ಲಿ ನಿತ್ಯ ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ಮೂಗೂರು ಗ್ರಾಮದಲ್ಲಿ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಬಂಡಿ ಉತ್ಸವ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು.

Translate »