ಸೋಮವಾರಪೇಟೆಯಲ್ಲಿ ವಿವಿಧ ಧರ್ಮಗುರುಗಳ ನುಡಿನಮನ
ಕೊಡಗು

ಸೋಮವಾರಪೇಟೆಯಲ್ಲಿ ವಿವಿಧ ಧರ್ಮಗುರುಗಳ ನುಡಿನಮನ

January 23, 2019

ಸೋಮವಾರಪೇಟೆ: ಮಹಾ ಯೋಗಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗೆ ಪಟ್ಟಣದಲ್ಲಿ ವಿವಿಧ ಧರ್ಮ ಗುರುಗಳ ಸಮ್ಮುಖದಲ್ಲಿ ಜೇಸಿ ವೇದಿಕೆ ಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

ಬೆಳಿಗ್ಗೆಯಿಂದಲೇ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಮಹಿಳೆಯರಿಂದ ಭಜನೆ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿತ್ತು. ಪಟ್ಟಣದ ವರ್ತಕರು ಸಂಜೆ 3ಗಂಟೆಯಿಂದ 5ಗಂಟೆ ಯವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸಲ್ಲಿಸಿದರು.

ಸಂಜೆ 4 ಗಂಟೆಗೆ ಜೇಸಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಗುರು ಗಳಾದ ಅಬ್ದುಲ್ ಅಝೀಜ್, ಟೆನ್ನಿ ಕುರಿ ಯನ್ ಅವರುಗಳು ಮಾತನಾಡಿ, ಬಡ ವರ ಏಳಿಗೆಗಾಗಿ ತನ್ನ ಜೀವನವನ್ನೇ ಮುಡಿ ಪಾಗಿಟ್ಟಿದ್ದ ಮಹಾಯೋಗಿಗಳು ಹಾಗೂ ನಡೆದಾಡುವ ದೇವರೆಂದು ಕರೆಸಿಕೊಂ ಡಿದ್ದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ಬಡವರ ಆಶಾಕಿರಣ, ನಡೆದಾಡುವ ದೇವರು ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಕೊಡ ಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಒತ್ತಾ ಯಿಸಿದರು, ಈ ಬಗ್ಗೆ ಪಕ್ಷದ ನಾಯಕರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಕಾಯಕ ಯೋಗಿಯ ಜೀವನ ಮೌಲ್ಯ ಗಳನ್ನು ಅವಲೋಕಿಸಿದಾಗ ಕಣ್ಣಿಗೆ ಕಾಣುವ ನಿಜವಾದ ದೇವರು ಎಂದು ಹೇಳಿದರು.

ಮಕ್ಕಳ ಪ್ರಗತಿಯಲ್ಲಿ ದೇಶದ ಪ್ರಗತಿ ಅಡಗಿದೆ ಎಂದು ತಿಳಿದ ಸ್ವಾಮೀಜಿಯ ವರು, ಭಿಕ್ಷೆ ಬೇಡಿ ಬಡ ಮಕ್ಕಳಿಗೆ ಅನ್ನ ಹಾಕಿ ಸಲಹಿ, ವಿದ್ಯಾರ್ಜನೆ ಮಾಡಿಸಿದ್ದಾರೆ ಎಂದು ನಿವೃತ್ತ ಪ್ರೊ.ಧರ್ಮಪ್ಪ ಹೇಳಿದರು.

ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಎಸ್.ಮಹೇಶ್, ಕಸಾಪ ಮಾಜಿ ಅಧ್ಯಕ್ಷ ಜವರಪ್ಪ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ಸ್ವಾಮೀಜಿಗಳ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ವಿವಿಧೆಡೆ ಶ್ರದ್ಧಾಂಜಲಿ: ಕೂಗೆಕೋಡಿ ಗ್ರಾಮಸ್ಥರು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಶ್ರದ್ಧಾಂಜಲಿ ಸಭೆಯನ್ನು ಗ್ರಾಮ ದಲ್ಲಿ ಆಯೋಜಿಸಿದ್ದರು. ಗ್ರಾಮದ ಪ್ರಮು ಖರು ಸಭೆಯಲ್ಲಿ ಭಾಗವಹಿಸಿ, ಸ್ವಾಮೀಜಿಯ ವರ ಸಮಾಜಸೇವೆಯನ್ನು ಕೊಂಡಾಡಿದರು. ಪಟ್ಟಣದ ಬಸವೇಶ್ವರ ದೇವಾಲಯ ಹಾಗೂ ರಾಮಮಂದಿರದಲ್ಲಿ ಭಕ್ತಾದಿಗಳ ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.

Translate »