ಪ್ರಧಾನಿ ನರೇಂದ್ರ ಮೋದಿ ಭಾಷಣ ಅತ್ಯಂತ ಪ್ರಭಾವಶಾಲಿ
ಮೈಸೂರು

ಪ್ರಧಾನಿ ನರೇಂದ್ರ ಮೋದಿ ಭಾಷಣ ಅತ್ಯಂತ ಪ್ರಭಾವಶಾಲಿ

January 14, 2020

ಮೈಸೂರು, ಜ.13(ಪಿಎಂ)- ಪ್ರಭಾವಶಾಲಿ ಭಾಷಣ ಮಾಡುವುದು ಒಂದು ಕಲೆ. ಪ್ರಸ್ತುತ ಪ್ರಧಾನಿ ನರೇಂದ್ರಯವರು ಅತ್ಯಂತ ಪ್ರಭಾವಶಾಲಿ ಭಾಷಣ ಮಾಡುವ ಕಲೆ ಕರಗತ ಮಾಡಿಕೊಂಡಿದ್ದು, ಆ ಮೂಲಕ ಭಾರತದ ಒಬ್ಬ ರಾಷ್ಟ್ರ ರಾಜಕಾರಣಿ ಜಗತ್ತಿನಾದ್ಯಂತ ಗಮನ ಸೆಳೆದಿದ್ದಾರೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ ಅಭಿಪ್ರಾಯಪಟ್ಟರು.

ಮೈಸೂರಿನ ಬಾಸುದೇವ ಸೋಮಾನಿ ಕಾಲೇಜಿನ ಸಭಾಂಗಣದಲ್ಲಿ ಮೈಸೂರು ವಿವಿ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ (ಎನ್‍ಎಸ್‍ಎಸ್) ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನದ (ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ) ಅಂಗವಾಗಿ ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಗೆ `ನನ್ನ ಭಾರತ-2035 ನಿರೀಕ್ಷೆಗಳು’ ಬಗ್ಗೆ ಸೋಮವಾರ ಹಮ್ಮಿ ಕೊಂಡಿದ್ದ ಅಂತರ ಕಾಲೇಜು ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಅಮೆರಿಕದ ಹೂಸ್ಟನ್‍ನಲ್ಲಿ ಮೋದಿಯವರು ಮಾಡಿದ ಭಾಷಣ ಅತ್ಯಂತ ಆಕರ್ಷಣೆ ಹೊಂದಿದ್ದ ಹಿನ್ನೆಲೆ ಯಲ್ಲಿ ಅಂದು ಆ ಸಭಾಂಗಣದಲ್ಲಿದ್ದ 50 ಸಾವಿರಕ್ಕೂ ಹೆಚ್ಚು ಸಭಿಕರು ಅಭಿಮಾನದ ಕರತಾಡನ ನೀಡಿ ದರು. ಇತ್ತೀಚೆಗೆ ಕರ್ನಾಟಕಕ್ಕೂ ಭೇಟಿ ನೀಡಿದ್ದ ಅವರು ಕನ್ನಡದಲ್ಲೇ ಒಂದೆರಡು ವಾಕ್ಯ ಹೇಳಿ ಚಪ್ಪಾಳೆ ಗಿಟ್ಟಿಸಿ ದರು. ಚಂದ್ರಯಾನ-2 ಹಿನ್ನಡೆ ಅನುಭವಿಸಿದ್ದ ವೇಳೆ ಯಲ್ಲಿ ವಿಜ್ಞಾನಿಗಳಿಗೆ ಮೋದಿ ಆತ್ಮಸ್ಥೈರ್ಯ ತುಂಬಿ ಉತ್ತೇ ಜನ ನೀಡಿದರು. ಹೀಗೆ ಅವರ ಭಾಷಣ ಕಲೆಯಿಂದ ಜಗತ್ತಿನಾದ್ಯಂತ ಮಾನ್ಯತೆ ಪಡೆದಿದ್ದಾರೆ. ನಾನು ಯಾವುದೇ ಪಕ್ಷದ ಪರವಾಗಿ ಮಾತನಾಡಲು ಈ ವಿಷಯ ಪ್ರಸ್ತಾ ಪಿಸಿಲ್ಲ. ಭಾಷಣ ಸ್ಪರ್ಧೆಯಾದ ಹಿನ್ನೆಲೆಯಲ್ಲಿ ಈ ವಿಚಾರ ಪ್ರಸ್ತಾಪಿಸಬೇಕಾಯಿತು ಎಂದು ಸ್ಪಷ್ಟಪಡಿಸಿದರು.

ನಮ್ಮ ರಾಷ್ಟ್ರಕ್ಕೆ ಕೀರ್ತಿ ತಂದುಕೊಟ್ಟ ಸ್ವಾಮಿ ವಿವೇಕಾ ನಂದರು ಅಮೆರಿಕದ ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಐತಿಹಾಸಿಕ. ಜಗತ್ತಿನ ಶ್ರೇಷ್ಠ ಭಾಷಣ ಕುರಿತಂತೆ ಹೊರಬಂದಿರುವ ಪುಸ್ತಕ ದಲ್ಲಿ ವಿವೇಕಾನಂದರ ಈ ಭಾಷಣಕ್ಕೆ ವಿಶಿಷ್ಟ ಸ್ಥಾನ ಸಿಕ್ಕಿದೆ. ಜೊತೆಗೆ ಅಮೆರಿಕದ ಜಾನ್ ಎಫ್.ಕೆನಡಿ, ಅಬ್ರಹಾಂ ಲಿಂಕನ್ ಸಹ ಜಗತ್ಪ್ರಸಿದ್ಧ ಭಾಷಣಕಾರರಾಗಿ ದ್ದಾರೆ. ಅಬ್ರಹಾಂ ಲಿಂಕನ್ ಒಮ್ಮೆ ಯೋಧರ ಸ್ಮಾರಕದ ಉದ್ಘಾಟನೆಗೆ ತೆರಳುವಾಗ ಮಾರ್ಗಮಧ್ಯೆಯೇ ತಮ್ಮ ಸಿಗರೇಟ್ ಪೊಟ್ಟಣದ ಮೇಲೆ ಭಾಷಣದ ಟಿಪ್ಪಣಿ ಬರೆದುಕೊಂಡು ಹೋಗಿ ಅದ್ಭುತ ಭಾಷಣ ಮಾಡಿದ್ದರು. ಮಹಾತ್ಮ ಗಾಂಧಿಯವರು ನಿಧನ ಹೊಂದಿದ ವೇಳೆ ಮಾಜಿ ಪ್ರಧಾನಿ ನೆಹರು ಮಾಡಿದ ಭಾಷಣವೂ ಪ್ರಸಿದ್ಧ ವಾಗಿದೆ. ಸಾಂದರ್ಭಿಕ ಅಂಶಗಳನ್ನು ಪರಿಗಣಿಸಿ ಗಾಂಧಿ ಯವರ ವ್ಯಕ್ತಿತ್ವ ಕಟ್ಟಿಕೊಟ್ಟ ಪರಿಣಾಮಕಾರಿ ಭಾಷಣ ವನ್ನು ಅಂದು ನೆಹರು ಮಾಡಿದ್ದರು ಎಂದರು.

ಪ್ರಸ್ತುತ ಪ್ರಜಾಪ್ರಭುತ್ವದ ಆಶಯ ಉಳಿಸುವ ಮಹ ತ್ವದ ಹೊಣೆ ಯುವ ಸಮುದಾಯದ ಮೇಲಿದ್ದು, ಸತ್ಯ, ಧರ್ಮ ಹಾಗೂ ಅಹಿಂಸೆ ಎಂಬ ಮೌಲ್ಯಗಳನ್ನು ಅಳವಡಿಸಿಕೊಂಡರೆ ಪರಿವರ್ತನೆ ಸಾಧ್ಯವಾಗಲಿದೆ. ನಾನು ಹಿಂದೊಮ್ಮೆ ಕ್ಯಾಲಿಫೆÇೀರ್ನಿಯಾಗೆ ಹೋಗಿ ದ್ದಾಗ ಅಲ್ಲಿನ ರಸ್ತೆ ಬದಿಯಲ್ಲಿದ್ದ ಮರದಿಂದ ಹಣ್ಣು ಬಿದ್ದಿದ್ದನ್ನು ನೋಡಿದೆ. ಅಲ್ಲಿನ ಹುಡುಗರು ಯಾರೊಬ್ಬರು ಹಣ್ಣುಗಳನ್ನು ತೆಗೆದುಕೊಳ್ಳದೇ ಮುಂದೆ ಹೋಗುತ್ತಿದ್ದರು. ನನಗೆ ಅಚ್ಚರಿ ಉಂಟಾಗಿ ಏಕೆ ಈಗೇಂದು ಇಬ್ಬರು ಹುಡು ಗರನ್ನು ಕೇಳಿದಾಗ, `ಹಣ್ಣುಗಳು ನಮಗೆ ಸೇರಿದ್ದಲ್ಲ. ಅವುಗಳನ್ನು ತೆಗೆದುಕೊಂಡರೆ ಕಳ್ಳತನ ಮಾಡಿದಂತೆ’ ಎಂದು ಪ್ರತಿಕ್ರಿಯಿಸಿದರು ಎಂದು ತಿಳಿಸಿದರು.

ಮತ್ತೊಂದು ಸಂಗತಿಯೆಂದರೆ, ಅಲ್ಲಿನ ಪ್ರಾಧ್ಯಾಪಕ ರೊಬ್ಬರು ಒಂದು ಶರ್ಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಆ ಶರ್ಟ್ ಅಳತೆ ಉದ್ದವಿದ್ದ ಹಿನ್ನೆಲೆ ಯಲ್ಲಿ ಬದಲಾಯಿಸಲು ಕೊಂಡು ತಂದಿದ್ದ ಮಳಿಗೆಗೆ ಹೋಗಿದ್ದೆ. ಶರ್ಟ್ ಖರೀದಿಸಿದ ದಿನ ಅದಕ್ಕೆ ರಿಯಾ ಯಿತಿ ಇದ್ದಿತು. ಆದರೆ ನಾವು ಬದಲಿಸುವ ದಿನ ರಿಯಾಯಿತಿ ಇರಲಿಲ್ಲ. ಹೀಗಾಗಿ ಆ ಶರ್ಟ್‍ನ ನೈಜ ಬೆಲೆಯ (ಖರೀದಿಸಿದ್ದ ಮೊತ್ತಕ್ಕಿಂತ ಹೆಚ್ಚು) ಮತ್ತೊಂದು ಶರ್ಟ್ ನೀಡಿದರು. ಈ ರೀತಿಯ ಪ್ರಾಮಾಣಿಕತೆ ನಮ್ಮಲ್ಲಿ ಮೂಡಬೇಕು. ಆದರೆ ನಮ್ಮಲ್ಲಿ ವ್ಯಾಪಾರ ಎಂದರೆ ಬಹುತೇಕ `ದ್ರೋಹ ಚಿಂತನಂ’ ಎನ್ನು ವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಪರ್ಧೆ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಡಾ.ಟಿ.ರಮೇಶ್, ಜಿಲ್ಲೆಯ ವಿವಿಧ ಕಾಲೇಜುಗಳಿಂದ 20 ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಇಬ್ಬರು ಮುಂದಿನ ದಿನಗಳಲ್ಲಿ ಮೈಸೂರು ವಿವಿ ಮಟ್ಟ ದಲ್ಲಿ ನಡೆಯುವ ಭಾಷಣ ಸ್ಪರ್ಧೆಗೆ ಆಯ್ಕೆಯಾಗ ಲಿದ್ದಾರೆ. ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲೂ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಇಂದು ನಡೆದಿದೆ. ಈ ಜಿಲ್ಲೆಗಳಿಂದಲೂ ತಲಾ ಇಬ್ಬರು ಆಯ್ಕೆಯಾಗಿ ವಿವಿ ಮಟ್ಟದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಮೈಸೂರು ವಿವಿ ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಮಹದೇವಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಬಿ.ಸದಾಶಿವ ಭಟ್ ಮತ್ತಿತರರು ಹಾಜರಿದ್ದರು.

Translate »