ಕನಗನಮರಡಿ ಗ್ರಾಮದಲ್ಲಿ ಖಾಸಗಿ ಬಸ್ ದುರಂತ ಪ್ರಕರಣ ವದೇಸಮುದ್ರದಲ್ಲಿ ಸಾಮೂಹಿಕ ಅಂತ್ಯಕ್ರಿಯೆ
ಮಂಡ್ಯ

ಕನಗನಮರಡಿ ಗ್ರಾಮದಲ್ಲಿ ಖಾಸಗಿ ಬಸ್ ದುರಂತ ಪ್ರಕರಣ ವದೇಸಮುದ್ರದಲ್ಲಿ ಸಾಮೂಹಿಕ ಅಂತ್ಯಕ್ರಿಯೆ

November 26, 2018

ಚಿಕ್ಕಯ್ಯನಕೊಪ್ಪಲಿನಲ್ಲಿ ಮೂವರು, ಬೇರೆಡೆ 19 ಮಂದಿಯ ಪ್ರತ್ಯೇಕ ಅಂತ್ಯಕ್ರಿಯೆ
ಪಾಂಡವಪುರ: ತಾಲೂಕಿನ ಕನಗನಮರಡಿ ಗ್ರಾಮದ ಸಮೀಪ ಶನಿ ವಾರ ನಡೆದ ಬಸ್ ದುರಂತದಲ್ಲಿ ಮೃತ ಪಟ್ಟ ಒಂದೇ ಗ್ರಾಮದ 8 ಮಂದಿಯ ಸಾಮೂಹಿಕ ಅಂತ್ಯಕ್ರಿಯೆಯನ್ನು ಭಾನು ವಾರ ನಡೆಸಲಾಯಿತು.

ದುರಂತದಲ್ಲಿ ಸಾವನ್ನಪ್ಪಿದ್ದ ವದೇ ಸಮುದ್ರ ಗ್ರಾಮದ ನಿವಾಸಿಗಳಾದ ಚಿಕ್ಕಯ್ಯ (60), ಕರಿಯಪ್ಪ(65), ಪ್ರಶಾಂತ್(15), ರವಿಕುಮಾರ್(12), ಕಮಲಮ್ಮ(55) ರತ್ನಮ್ಮ (60) ಶಶಿಕಲಾ(45), ಪವಿತ್ರ(11) ಅವರು ಗಳ ಮೃತದೇಹವನ್ನು ಗ್ರಾಮದ ಹೊರ ವಲಯದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸ ಲಾಯಿತು. ಇದಕ್ಕೂ ಮೊದಲು ಕುಟುಂಬ ಸ್ಥರು ಪ್ರತ್ಯೇಕವಾಗಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿದ್ದರು. ಆದರೆ, ಗ್ರಾಮಸ್ಥರು ಕುಳಿತು ಚರ್ಚಿಸಿ ಮೃತಪಟ್ಟ ಎಲ್ಲರನ್ನು ಒಂದೇ ಕಡೆ ಅಂತ್ಯಕ್ರಿಯೆ ಮಾಡುವ ತೀರ್ಮಾನ ತೆಗೆದುಕೊಂಡ ಹಿನ್ನೆಲೆಯಲ್ಲಿ ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಬೆಳಿಗ್ಗೆ ಸುಮಾರು 11.20ಕ್ಕೆ ಗ್ರಾಮದ 8 ಮಂದಿಯ ಮೃತ ದೇಹವನ್ನು ಪ್ರತ್ಯೇಕ ಚಿತೆಯಲ್ಲಿಟ್ಟು ಅಗ್ನಿಸ್ಪರ್ಶ ಮಾಡಲಾಯಿತು. ಜಾತಿಭೇದ ಬಿಟ್ಟು ಒಂದೇಕಡೆ ಸಾಮೂಹಿಕ ಅಂತ್ಯಕ್ರಿಯೆ ನಡೆಸಿದ ವದೇಸಮುದ್ರ ಗ್ರಾಮಸ್ಥರ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಕ್ಕಕೊಪ್ಪಲು ಗ್ರಾಮದ ಕೆಂಪಯ್ಯ, ಪಾಪಣ್ಣ ಗೌಡ ಹಾಗೂ ದಿವ್ಯಾ ಅವರ ಅಂತ್ಯಕ್ರಿಯೆ ಯನ್ನು ಪ್ರತ್ಯೇಕವಾಗಿ ಅವರ ಜಮೀನಿನಲ್ಲಿ ನೆರವೇರಿಸಲಾಯಿತು. ಉಳಿದ 19 ಮಂದಿ ಮೃತ ದೇಹಗಳನ್ನು ಆಯಾ ಗ್ರಾಮಗಳಲ್ಲಿ ಶನಿವಾರ ಸಂಜೆಯೇ ಅಂತ್ಯಕ್ರಿಯೆ ನಡೆಸಲಾಯಿತು.

ವದೇ ಸಮುದ್ರದಲ್ಲಿ ಸೂತಕದ ಛಾಯೆ: ದುರಂತದಲ್ಲಿ ಗ್ರಾಮದ ಮೂವರು ಮಹಿಳೆ ಯರು ಇಬ್ಬರು ಪುರುಷರು, ಬಾಲಕಿ ಸೇರಿದಂತೆ ಮೂವರು ಮಕ್ಕಳು ಮೃತಪಟ್ಟಿದ್ದರಿಂದ ಗ್ರಾಮದಲ್ಲಿ ಸೂತಕದ ಛಾಯೆ ಮನೆಮಾಡಿದೆ. ಗ್ರಾಮದಲ್ಲಿ ಎಲ್ಲಿ ನೋಡಿದರೂ ದುಃಖ ಮಡುಗಟ್ಟಿದೆ. ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಇನ್ನು ಶಾಲಾ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಗ್ರಾಮದ ಚಿಕ್ಕೇಗೌಡ ಪುತ್ರ, ಮೃತ ಬಾಲಕ ಪ್ರಶಾಂತ್ ತಮ್ಮ ತಾತ ಕರಿಯಪ್ಪನ ಜೊತೆ ಬಸ್‍ನಲ್ಲಿ ಹೋಗುವ ಆಸೆಯಿಂದ ಶಾಲೆಬಿಟ್ಟ ಬಳಿಕ ಮತ್ತೊಬ್ಬರಿಗೆ ಸೈಕಲ್ ಕೊಟ್ಟು ಬಸ್ ಹತ್ತಿದ್ದಾನೆ. ಆದರೆ, ಬಸ್ ದುರಂತದಲ್ಲಿ ತಾತನ ಜತೆಯಲ್ಲಿಯೇ ಇಹಲೋಕ ತ್ಯಜಿಸಿದ್ದಾನೆ. ತನ್ನ ತಾತನ ಜೊತೆ ಸೈಕಲ್‍ನಲ್ಲಿ ಬಂದಿದ್ದರೆ ಬಾಲಕ ಪ್ರಶಾಂತ್ ಸಾವನ್ನಪ್ಪುತ್ತಿರಲಿಲ್ಲ ಎಂದು ಸಂಬಂಧಿಕರು ಕಂಬನಿ ಮಿಡಿದರು.

ಶನಿವಾರ ಆಗಿದ್ದರಿಂದ ಅರ್ಧ ದಿನದ ಶಾಲೆ ಮುಗಿಸಿಕೊಂಡು ಮಕ್ಕಳು ಈ ಬಸ್‍ಗೆ ಏರುತ್ತಾರೆ ಎನ್ನುವ ಕಾರಣಕ್ಕೆ ಬಸ್ ಚಾಲಕ ಬೇಗನೆ ಬಂದು ಬಿಟ್ಟಿದ್ದಾನೆ. ಒಂದು ವೇಳೆ ಇನ್ನೂ ಅರ್ಧಗಂಟೆ ತಡವಾಗಿ ಬಂದಿದ್ದರೆ ಚಿಕ್ಕಬ್ಯಾಡರಹಳ್ಳಿ ಪ್ರೌಢಶಾಲೆ, ಕನಗನ ಮರಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಇನ್ನಷ್ಟು ಮಕ್ಕಳು ಬಸ್ ಏರುತ್ತಿದ್ದರು. ಆದರೆ ದೇವರು ದೊಡ್ಡವನು. ಅಂದು ಶಾಲೆಯನ್ನು ತಡವಾಗಿ ಬಿಟ್ಟಿದ್ದ ರಿಂದ ಮತ್ತÀಷ್ಟು ಮಕ್ಕಳು ದುರಂತದಿಂದ ಪಾರಾಗಿದ್ದಾರೆ ಎಂದು ಗ್ರಾಮಸ್ಥ ಅಣ್ಣಯ್ಯಪ್ಪ ಆತಂಕ ವ್ಯಕ್ತಪಡಿಸಿದರು.

Translate »