ಬೆಂಗಳೂರು,ಮಾ.6(ಕೆಎಂಶಿ)-ಮಂಡ್ಯ ಜಿಲ್ಲೆಯ ಮೈಶುಗರ್, ಪಾಂಡವಪುರ ಹಾಗೂ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿ ಯವರಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಜೂನ್ ತಿಂಗಳಿನಿಂದ ಕಬ್ಬು ಅರೆ ಯಲು ಸೂಚನೆ ಕೊಡಲಾಗಿದೆ ಎಂದು ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್ ವಿಧಾನ ಪರಿಷತ್‍ನಲ್ಲಿ ತಿಳಿಸಿದರು.
ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಜೆಡಿಎಸ್‍ನ ಶ್ರೀಕಂಠೇಗೌಡ ಅವರು ಮಾತನಾಡು ತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಶಿವರಾಂ ಹೆಬ್ಬಾರ್, ಶ್ರೀರಾಮ, ಪಾಂಡವಪುರ, ಮೈಶುಗರ್ ಸಕ್ಕರೆ ಕಾರ್ಖಾನೆಗಳನ್ನು 40 ವರ್ಷಗಳ ಅವಧಿಗೆ ಖಾಸಗಿ ಯವರಿಗೆ ನೀಡಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಲಾಗಿದ್ದು, 10-15 ದಿನದೊಳಗೆ ಆದೇಶ ಹೊರಬೀಳಲಿದೆ ಎಂದರು.
ಈ ಮೂರು ಸಕ್ಕರೆ ಕಾರ್ಖಾನೆಗಳನ್ನು ಪುನಶ್ಚೇತನ ಗೊಳಿಸಲು 110 ಕೋಟಿ ಹಣವನ್ನು ಕೊಡಲಾಗಿದೆ. ಆದರೂ ಪ್ರತಿವರ್ಷ ಸಮಸ್ಯೆ ಪರಿಹಾರವಾಗದೆ ಸಮಸ್ಯೆಗಳು ಎದುರಾಗುತ್ತಲೇ ಇವೆ ಎಂದು ವಿಷಾದಿಸಿ ದರು. ರೈತರಿಗೆ ಶಾಶ್ವತ ಪರಿಹಾರ ಒದಗಿಸಲು ಮತ್ತು ನಿಗದಿತ ಸಮಯದಲ್ಲಿ ಕಬ್ಬು ಅರೆಯಲು ಸಹಾಯವಾಗುವಂತೆ ಈ ಮೂರೂ ಕಾರ್ಖಾನೆಗಳನ್ನೂ ಖಾಸಗಿ ಯವರಿಗೆ ನೀಡಲಾಗುವುದು. ಈಗಾಗಲೇ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು, ರೈತ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.
ಈ ಕಾರ್ಖಾನೆಗಳಿಗೆ ನೀಡಿರುವ ಹಣದಲ್ಲಿ ಕನಿಷ್ಟ ಪಕ್ಷ ಹೊಸ ಕಾರ್ಖಾನೆಯನ್ನೇ ತೆರೆಯಬಹುದಿತ್ತು. ನಾನು ಯಾವುದೇ ಸರ್ಕಾರಗಳನ್ನೂ ಟೀಕೆ ಮಾಡಲು ಹೋಗು ವುದಿಲ್ಲ. ನಮಗೆ ರೈತರ ಹಿತದೃಷ್ಟಿ ಮುಖ್ಯ. ಸದ್ಯ ರೈತರು ಬೆಳೆದ ಕಬ್ಬು ಕಟಾವು ಆಗುತ್ತದೆಯೋ ಇಲ್ಲವೋ ಎಂಬ ಚಿಂತೆಯಲ್ಲಿದ್ದಾರೆ. ಇನ್ನು ಮುಂದೆ ಇಂತಹ ಸಮಸ್ಯೆ ಉದ್ಭವವಾಗುವುದಿಲ್ಲ ಎಂದು ಹೇಳಿದರು. ಈ ವೇಳೆ ಶ್ರೀಕಂಠೇಗೌಡ ಅವರು ಶ್ರೀರಾಮ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ನೀಡಲು ತಮ್ಮದೇನೂ ಅಭ್ಯಂತರವಿಲ್ಲ. ಆದರೆ, ಸರ್ಕಾರಿ ಒಡೆತನದ ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಬಾರದು. ರಾಜ್ಯದಲ್ಲೇ ಇದು ಏಕೈಕ ಸರ್ಕಾರಿ ಒಡೆತನದ ಕಾರ್ಖಾನೆಯಾಗಿದೆ. ಹಿಂದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಈ ಕಾರ್ಖಾನೆಯ ಪುನಶ್ಚೇತನಕ್ಕೆ ಆರ್ಥಿಕ ನೆರವು ನೀಡಲು ತೀರ್ಮಾನಿಸಿದ್ದರು.
ಸರ್ಕಾರ ಬದಲಾದ ಪರಿಣಾಮ ಆ ತೀರ್ಮಾನ ಹಾಗೆಯೇ ಉಳಿದಿದೆ. ನೀವು ಮೈ ಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ಒಪ್ಪಿಸಲು ಮುಂದಾದರೆ ರೈತರು, ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತವೆ. ಕಾರ್ಖಾನೆಯನ್ನು ಪುನಶ್ಚೇತನಗೊಳಿ ಸಬೇಕೇ ಹೊರತು ಖಾಸಗೀಕರಣ ಬೇಡವೆಂದು ಆಗ್ರಹಿಸಿದರು. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ತೆಗೆದುಕೊಂಡ ತೀರ್ಮಾನದಂತೆ ನೀವು ಕ್ರಮ ಕೈಗೊಳ್ಳಬೇಕು. ಈ ಕಾರ್ಖಾನೆಯಲ್ಲಿ ರೈತರು ಕೂಡ ಷೇರುದಾರರಾಗಿದ್ದಾರೆ ಎಂದು ಸರ್ಕಾರದ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಹೆಬ್ಬಾರ್ ನಾವು ಅನೇಕರ ಜತೆ ಮಾತುಕತೆ ನಡೆಸಿಯೇ ಈ ತೀರ್ಮಾನಕ್ಕೆ ಬಂದಿದ್ದೇವೆ. 175 ಮಂದಿ ಕಾರ್ಮಿಕರು ಸ್ವಯಂ ನಿವೃತ್ತಿ ಪಡೆದಿದ್ದಾರೆ. 76 ಮಂದಿಗೆ ಬಾಕಿ ಹಣ ಕೊಡಬೇಕಿದೆ. 30 ಕೋಟಿ ಹಣ ನೀಡಲು ಸರ್ಕಾರ ಸಮ್ಮತಿಸಿದೆ. ರೈತರಿಗೆ ಸುಖ ಮತ್ತು ನೆಮ್ಮದಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸದನಕ್ಕೆ ತಿಳಿಸಿದರು.