ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್‍ರಿಂದ ಹಳೆ ಖಾಸಗಿ  ಬಸ್ ನಿಲ್ದಾಣದ ಜಾಗದಲ್ಲಿ ಉದ್ಯಾನ, ಆಕರ್ಷಕ ಕಾರಂಜಿ ನಿರ್ಮಿಸುವ ಪ್ರಸ್ತಾಪ
ಕೊಡಗು

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್‍ರಿಂದ ಹಳೆ ಖಾಸಗಿ ಬಸ್ ನಿಲ್ದಾಣದ ಜಾಗದಲ್ಲಿ ಉದ್ಯಾನ, ಆಕರ್ಷಕ ಕಾರಂಜಿ ನಿರ್ಮಿಸುವ ಪ್ರಸ್ತಾಪ

November 11, 2018

ಕೆಬಿಜಿ ಅವರ ‘ಛೂಮಂತ್ರ’ದಲ್ಲಿ ಪ್ರಸ್ತಾಪಿತ ಅಂಶಗಳ ಗಂಭೀರ ಪರಿಗಣನೆ

ಮಡಿಕೇರಿ:  ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣ ಸ್ಥಳದಲ್ಲಿ ವಾಣಿಜ್ಯ ಸಂಕಿರ್ಣ ನಿರ್ಮಿಸುವ ಬದಲು ಪ್ರವಾಸೋದ್ಯಮ ಸ್ನೇಹಿ ಉದ್ಯಾನವನ ಹಾಗೂ ಆಕರ್ಷಕ ಕಾರಂಜಿ ನಿರ್ಮಿಸುವ ಕುರಿತು ಪ್ರವಾಸೋದ್ಯಮ ಸಚಿ ವರೂ ಆದ ಕೊಡಗು ಜಿಲ್ಲಾ ಉಸ್ತು ವಾರಿ ಸಚಿವ ಸಾ.ರಾ.ಮಹೇಶ್ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಜಿಲ್ಲಾಧಿಕಾರಿಗಳು, ನಗರಸಭೆ ಆಯು ಕ್ತರು ಹಾಗೂ ಅಧ್ಯಕ್ಷರನ್ನೊಳಗೊಂಡ ಸಭೆಯಲ್ಲಿ ಸಚಿವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಮಡಿಕೇರಿ ನಗರದ ಹಳೆ ಬಸ್ ನಿಲ್ದಾಣ ಸ್ಥಳದಲ್ಲಿ ವಾಣಿಜ್ಯ ಸಂಕಿರ್ಣ ನಿರ್ಮಿಸುವುದು ಸೂಕ್ತವಲ್ಲ. ಈಗಾಗಲೇ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಪಾರ್ಕಿಂಗ್ ಸಮಸ್ಯೆಯೂ ಕಾಡುತ್ತಿದೆ. ಹೀಗಿರುವಾಗ ಕಿಷ್ಕಿಂಧೆಯಂತಿ ರುವ ಹಳೆ ಖಾಸಗಿ ಬಸ್ ನಿಲ್ದಾಣ ಸ್ಥಳದ ವಾಣಿಜ್ಯ ಸಂಕಿರ್ಣ ನಿರ್ಮಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದ ಸಚಿವರು, ಒಂದು ವೇಳೆ ವಾಣಿಜ್ಯ ಸಂಕಿರ್ಣ ನಿರ್ಮಾ ಣವಾಗಿದ್ದೇ ಆದಲ್ಲಿ ಆ ವೃತ್ತದಲ್ಲಿ ವಾಹನ ಸಂಚಾರಕ್ಕೆ ಭಾರೀ ತೊಂದರೆ ಉಂಟಾ ಗಲಿದೆ ಎಂಬುದನ್ನು ಕೂಡ ಸಚಿವರು ಉಲ್ಲೇಖಿಸಿದ್ದಾರೆ. ಅಲ್ಲದೆ, ಆ ಸ್ಥಳದಲ್ಲಿ ಸುಂದರವಾದ ಕಾರಂಜಿ ಹಾಗೂ ಉದ್ಯಾ ನವನ ನಿರ್ಮಾಣಕ್ಕೆ ನೀಲನಕ್ಷೆ ತಯಾ ರಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಿನ್ನೆಲೆ: 1936ರಲ್ಲಿ ಬ್ರಿಟಿಷರ ಆಳ್ವಿಕೆ ಯಲ್ಲಿ ಹಳೆ ಖಾಸಗಿ ಬಸ್ ನಿಲ್ದಾಣ ಕಟ್ಟಡ ನಿರ್ಮಾಣವಾಗಿತ್ತು. ಇತ್ತೀಚೆಗೆ ಸಂಭವಿಸಿದ ಭೂಕುಸಿತ ಸಂದರ್ಭದಲ್ಲಿ ಈ ಕಟ್ಟಡವು ಸಹ ಭಾಗಶಃ ಕುಸಿದ ಹಿನ್ನೆಲೆಯಲ್ಲಿ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಲಾಗಿದ್ದು, ಇದೀಗ ತಳಪಾಯವನ್ನು ತೆರವುಗೊಳಿಸುವ ಕಾಮಗಾರಿ ನಡೆಯುತ್ತಿದೆ. ಈ ಕಟ್ಟಡ ಕೆಡವುವ ಮುನ್ನವೇ ನಗರಸಭೆ, ವಾಣಿಜ್ಯ ಸಂಕಿರ್ಣ ನಿರ್ಮಿಸಲು ನೀಲ ನಕ್ಷೆಯನ್ನು ಸಿದ್ಧಪಡಿಸಿ ಯೋಜನೆ ರೂಪಿ ಸಿತ್ತು. ಆದರೆ, ಈ ಸ್ಥಳದಲ್ಲಿ ವಾಣಿಜ್ಯ ಸಂಕಿರ್ಣ ನಿರ್ಮಾಣಕ್ಕೆ ಭಾರೀ ವಿರೋ ಧಗಳು ವ್ಯಕ್ತವಾಗಿದ್ದವು. ಮಡಿಕೇರಿ ಪುರ ಸಭೆಯ ಮಾಜಿ ಅಧ್ಯಕ್ಷರೂ ಆದ ಹಾಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಕೂಡ ವಾಣಿಜ್ಯ ಸಂಕಿರ್ಣ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಈ ಸ್ಥಳವನ್ನು ಖಾಲಿ ಬಿಡುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದರು.

‘ಮೈಸೂರು ಮಿತ್ರ’ನ ನ.1ರ ಸಂಚಿಕೆ ಯಲ್ಲಿ ಕೊಡಗಿನವರೇ ಆದ ‘ಮೈಸೂರು ಮಿತ್ರ’ ಹಾಗೂ ‘ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಅವರು ತಮ್ಮ ‘ಛೂಮಂತ್ರ’ ಅಂಕಣದ ‘ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕಿರ್ಣ ಬೇಡ-ಅಲ್ಲಿ ಬೇಕು ಸಾರ್ವಜನಿಕ ಚೌಕ’ ಶೀರ್ಷಿಕೆಯಡಿ ಲೇಖನದಲ್ಲಿ ಗಮನ ಸೆಳೆದಿದ್ದರು. ಈ ಸ್ಥಳದಲ್ಲಿ ವಾಣಿಜ್ಯ ಸಂಕಿರ್ಣ ನಿರ್ಮಾಣವಾದರೆ ಉಂಟಾಗಬಹು ದಾದ ಪ್ರತಿಕೂಲ ಪರಿಣಾಮವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು, ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಕೆ.ಬಿ.ಗಣಪತಿ ಅವರ ‘ಛೂಮಂತ್ರ’ ಅಂಕಣದಲ್ಲಿ ಉಲ್ಲೇಖವಾಗಿದ್ದ ವಿವರಗಳನ್ನು ಕೂಡ ಪ್ರಸ್ತಾಪಿಸಿ, ಈ ಸ್ಥಳದಲ್ಲಿ ವಾಣಿಜ್ಯ ಸಂಕಿರ್ಣ ನಿರ್ಮಿಸುವುದು ಸೂಕ್ತವಲ್ಲ ಎಂದು ಅಧಿಕಾರಿಗಳಿಗೆ ತಿಳಿ ಹೇಳಿದ್ದಾರೆ.

Translate »