ಸಾಧಕ ಮಹಿಳೆಯರ ರೇಖಾಚಿತ್ರ ಪ್ರದರ್ಶನ
ಮೈಸೂರು

ಸಾಧಕ ಮಹಿಳೆಯರ ರೇಖಾಚಿತ್ರ ಪ್ರದರ್ಶನ

March 25, 2019

ಮೈಸೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗ ವಾಗಿ ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರ ರೇಖಾಚಿತ್ರಗಳು ಭಾನುವಾರ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಅನಾವರಣಗೊಂಡು ಗಮನ ಸೆಳೆದವು.

ಇಂದು ಬೆಳಿಗ್ಗೆ 10.30ರಿಂದ ಸಂಜೆ 7ರವರೆಗೆ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನದಲ್ಲಿ ಯು.ಜಿ.ಮೋಹನ್ ಕುಮಾರ್ ಆರಾಧ್ಯ ರಚನೆಯ ಒಟ್ಟು 62 ಸಾಧಕ ಮಹಿಳೆಯರ ರೇಖಾಚಿತ್ರಗಳು ಅವರ ಸಾರ್ಥಕತೆಯನ್ನು ಕಣ್ಮುಂದೆ ತಂದವು.

ಕ್ರೀಡೆ, ವಿಜ್ಞಾನ, ಸಮಾಜ ಸುಧಾರಣೆ, ಭಾರತದ ಸ್ವಾತಂತ್ರ್ಯ ಹೋರಾಟ ಸೇರಿದಂತೆ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿ ಸಾಧನೆಯ ಹಾದಿ ಕ್ರಮಿಸಿದ ವೀರ ವನಿತೆಯರ ಭಾವ ಚಿತ್ರಗಳನ್ನು ರೇಖಾಚಿತ್ರದ ವಿಧಾನದಲ್ಲಿ ಕಲಾವಿದರು ಅರಳಿಸಿದ್ದರು. 2019ನೇ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದ ಸಾಲುಮರದ ತಿಮ್ಮಕ್ಕ ಅವರಿಗೆ ಈ ಚಿತ್ರಕಲಾ ಪ್ರದರ್ಶನ ಅರ್ಪಿಸಲಾಗಿದೆ ಎಂದು ಕಲಾವಿದ ಮೋಹನ್‍ಕುಮಾರ್ ಆರಾಧ್ಯ ತಿಳಿಸಿದರು. ಸಾಲುಮರದ ತಿಮ್ಮಕ್ಕ ಅವರ ರೇಖಾಚಿತ್ರದಿಂದ ಆರಂಭಗೊಂಡಿದ್ದ ಚಿತ್ರ ಪ್ರದರ್ಶನದಲ್ಲಿ ದೇಶ-ವಿದೇಶಗಳಲ್ಲಿ ವಿವಿಧ ಕಾಲಘಟ್ಟದಲ್ಲಿ ನಾನಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ಮಹಿಳಾ ಸಾಧಕರ ಚಿತ್ರಗಳು ಅನಾವರಣಗೊಂಡಿದ್ದವು. ಗಂಗೂ ಬಾಯಿ ಹಾನಗಲ್, ಮದರ್ ಥೆರೆಸಾ, ಝನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ವಿಶ್ವದ ನಾನಾ ಭಾಗದ ಸಾಧಕಿಯರ ರೇಖಾಚಿತ್ರಗಳು ಮೂಡಿದ್ದವು. ಕೀರ್ತಿ ಮಹಿಳಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಮಂಜುಳಾ ರಮೇಶ್ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಶಾರದವಾಣಿ ಮಹಿಳಾ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ಎ.ಎಸ್.ವಾಣಿ ಸುಬ್ಬಯ್ಯ, ಆಕಾಶವಾಣಿ ಕಲಾವಿದೆ ವಸಂತಾ ವೆಂಕಟೇಶ್ ಮತ್ತಿತರರು ಹಾಜರಿದ್ದರು.

Translate »