ಮೈಸೂರು, ಆ.18(ಆರ್‍ಕೆ)- ಮೈಸೂರಿನ ಗೋಕುಲಂ ಮನೆವೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿ 14,070 ರೂ. ನಗದು ಹಾಗೂ ನಾಲ್ಕು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಎಡತಾಳು ಗ್ರಾಮದ ರಘುನಂದ(35) ಹಾಸನ ಜಿಲ್ಲೆ, ಚೆನ್ನರಾಯ ಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದ ಪ್ರದೀಪ (29) ಹಾಗೂ ಉಡುಪಿ ಜಿಲ್ಲೆ, ಹೇಣಗುಡ್ಡ ಗ್ರಾಮದ ಶ್ವೇತಾ (30) ಬಂಧಿತರು. ಅವರಿಂದ 14,070 ರೂ. ನಗದು ಹಾಗೂ 4 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಈ ಮೊದಲು ಮೈಸೂರಿನ ಲಷ್ಕರ್ ಹಾಗೂ ವಿಜಯ ನಗರ ಠಾಣಾ ವ್ಯಾಪ್ತಿಗಳಲ್ಲಿ ವೇಶ್ಯಾವಾಟಿಕೆ ನಡೆಸಿ ಬಂಧಿತರಾಗಿ ಜಾಮೀನಿನ ಮೇಲೆ ಹೊರ ಬಂದು ಮತ್ತೆ ಅದೇ ವೃತ್ತಿ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಆಗಸ್ಟ್ 16ರಂದು ಗೋಕುಲಂ 3ನೇ ಹಂತ, 3ನೇ ಕ್ರಾಸ್‍ನಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಮಹಿಳೆಯನ್ನು ಕರೆಸಿಕೊಂಡು ಹಣದ ಆಮಿಷ ಒಡ್ಡಿ ವೇಶ್ಯಾವಾಟಿಕೆಗೆ ಬಳಸಿಕೊಳ್ಳು ತ್ತಿದ್ದುದು ಕಂಡು ಬಂದಿತು. ಸಿಸಿಬಿ ಪ್ರಭಾರ ಎಸಿಪಿ ಜಿ.ಎನ್.ಮೋಹನ್ ನೇತೃತ್ವದಲ್ಲಿ ಸಿಸಿಬಿ ಇನ್ಸ್‍ಪೆಕ್ಟರ್ ಸಿ.ಕಿರಣ್‍ಕುಮಾರ್, ವಿವಿಪುರಂ ಠಾಣೆ ಇನ್ಸ್‍ಪೆಕ್ಟರ್ ವಿನಯ್, ಸಿಬ್ಬಂದಿಗಳಾದ ಚಿಕ್ಕಣ್ಣ, ಶಿವರಾಜು, ಗಣೇಶ್, ಯಾಕುಬ್ ಷರೀಫ್, ನಿರಂಜನ್, ಚಾಮುಂಡಮ್ಮ ಹಾಗೂ ಗೌತಮ್ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.