ನೀರನ್ನು ಸಂರಕ್ಷಿಸಿ, ಮಿತವಾಗಿ ಬಳಸುವಂತೆ ಮನವೊಲಿಸಿ
ಮೈಸೂರು

ನೀರನ್ನು ಸಂರಕ್ಷಿಸಿ, ಮಿತವಾಗಿ ಬಳಸುವಂತೆ ಮನವೊಲಿಸಿ

March 24, 2019

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಜಿ.ಹೆಚ್.ಯೋಗೇಶ್ ಸಲಹೆ
ಮೈಸೂರು: ಕೃಷಿ ಮತ್ತು ಜೀವನಕ್ಕೆ ಅತ್ಯಮೂಲ್ಯವಾದ ನೀರನ್ನು ಸಂರಕ್ಷಿಸಿ, ಮಿತವಾಗಿ ಬಳಸಲು ಕೃಷಿ ಕ್ಷೇತ್ರದಲ್ಲಿರುವ ಅಧಿಕಾರಿಗಳು ಮತ್ತು ಪರಿಕರ ಮಾರಾಟ ಗಾರರು, ರೈತರು ಹಾಗೂ ಸಾರ್ವಜನಿಕರ ಮನವೊಲಿಸಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಜಿ.ಹೆಚ್.ಯೋಗೇಶ್ ತಿಳಿಸಿದರು.

ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ನೀರಿನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಮತ್ತು ಜೀವ ಸಂಕುಲಗಳ ಅಭಿವೃದ್ಧಿಗೆ ನೀರು ಅತ್ಯಮೂಲ್ಯವಾಗಿದೆ. ಮಳೆ ನೀರನ್ನು ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಸಂರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಜೊತೆಗೆ ನೀರಿನ ಮೂಲಗಳನ್ನು ಸಂರಕ್ಷಣೆ ಮತ್ತು ಅಭಿವೃದ್ಧಿ ಪಡಿಸಲು ಶ್ರಮಿಸಬೇಕು. ಅಲ್ಲದೆ ಮನೆಗಳಲ್ಲಿ, ಕಚೇರಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಮಿತಬಳಕೆ ಮತ್ತು ನೀರಿನ ಮಾಲಿನ್ಯ ತಡೆಗಟ್ಟುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಅಧಿಕಾರಿಗಳು ಮತ್ತು ಕೃಷಿ ಪರಿಕರ ಮಾರಾಟಗಾರರು ಕೈಜೋಡಿಸಬೇಕೆಂದು ಕರೆ ನೀಡಿದರು. ಮಳೆ ನೀರಿನ ಸಂಗ್ರಹಣೆ ಮತ್ತು ಸಂರಕ್ಷಣೆಗೆ ಕೃಷಿ ಇಲಾಖೆಯಡಿ ದೊರೆಯುವ ಸಹಾಯಧನದ ವಿವರಗಳನ್ನು ರೈತರಿಗೆ ತಿಳಿಸಿಕೊಡಬೇಕೆಂದರು.

ಇಲಾಖೆಯ ಅಧಿಕಾರಿ ಕರಿಬಸವಯ್ಯ ಮಾತನಾಡಿ, ನೀರನ್ನು ಮಿತವಾಗಿ ಬಳಸಲು ಸಜ್ಜಾಗುವಂತೆ ಅಧಿಕಾರಿಗಳು ಮತ್ತು ಕೃಷಿ ಪರಿಕರ ಮಾರಾಟಗಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕೂ ಅಧಿಕ ಕೃಷಿ ಅಧಿಕಾರಿಗಳು, ಕೃಷಿ ಪರಿಕರ ಮಾರಾಟಗಾರರು, ಸಾವಯವ ಕೃಷಿ ಸಂಶೋಧನಾ ಕೇಂದ್ರದ ಡಾ. ಪ್ರಕಾಶ್, ಡಾ.ಸಿ.ಗೋವಿಂದರಾಜ್, ಡಾ. ಜಗದೀಶ್ ಮತ್ತು ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಜಯಕುಮಾರಿ ಮತ್ತಿತರರು ಭಾಗವಹಿಸಿದ್ದರು.

Translate »