ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರುದ್ಧ ಘೋಷಣೆ
ಮೈಸೂರು

ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರುದ್ಧ ಘೋಷಣೆ

January 9, 2019

ಮೈಸೂರು-ಭಾರತ್ ಬಂದ್ ಹಿನ್ನೆಲೆಯಲ್ಲಿ ಮೈಸೂರಿನ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಆಶ್ರಯದಲ್ಲಿ ನೂರಾರು ಅಂಚೆ ನೌಕರರು ಮೈಸೂರಿನ ನೆಹರು ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅಖಿಲ ಭಾರತ ಅಂಚೆ ನೌಕರರ ಸಂಘ (ಎನ್‍ಎಫ್‍ಪಿಇ), ರಾಷ್ಟ್ರೀಯ ಅಂಚೆ ನೌಕರರ ಸಂಘ (ಎಫ್‍ಎನ್‍ಪಿಓ) ಒಳಗೊಂಡಂತೆ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಕಾರ್ಯಕರ್ತರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಯುವ ನೌಕರರಿಗೆ ಮರಣ ಶಾಸನವಾದ ಹೊಸ ಪಿಂಚಣಿ ನೀತಿಯನ್ನು (ಎನ್‍ಪಿಎಸ್) ತೆಗೆದು ಹಾಕಿ, ಹಳೇ ಪಿಂಚಣಿ ನೀತಿ ಜಾರಿಗೊಳಿಸಬೇಕು. ಕನಿಷ್ಠ 50 ರಷ್ಟು ಪಿಂಚಣಿ ಖಚಿತಪಡಿಸಬೇಕು. ಕಮಲೇಶ್‍ಚಂದ್ರ ವರದಿ ಜಾರಿಗೊಳಿಸಬೇಕು. ಖಾಲಿ ಹುದ್ದೆಗಳ ಭರ್ತಿ ಮಾಡಬೇಕು. ಅಂಚೆ ಇಲಾಖೆಯ ಖಾಸಗೀಕರಣ ಮಾಡುವ ಮತ್ತು ಹೊರಗುತ್ತಿಗೆ ಪದ್ಧತಿಯನ್ನು ನಿಲ್ಲಿಸಬೇಕು. ಏಕಪಕ್ಷೀಯವಾಗಿ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮಾಡುವುದನ್ನು ನಿಲ್ಲಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಸುಂದರಯ್ಯ, ಅಧ್ಯಕ್ಷ ಸಿ.ಆರ್.ದೀನಬಂಧು, ಕಾರ್ಯದರ್ಶಿ ಎನ್.ವನಜಾಕ್ಷ, ಎನ್.ಕೃಷ್ಣ, ಬಸವರಾಜು ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »