ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ
ಕೊಡಗು

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ

December 17, 2019

ವೀರಾಜಪೇಟೆ, ಡಿ.16- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪಟ್ಟಣದಲ್ಲಿ ಸೋಮವಾರ ಸಂವಿಧಾನ ರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಯಿತು.

ಪಟ್ಟಣದ ಗಡಿಯಾರ ಕಂಬದ ಬಳಿಯಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾ ಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪೌರತ್ವ ಮಸೂದೆ ವಿರೋಧಿಸಿ ಸಂವಿಧಾನಿಕ ಮೌಲ್ಯ ಗಳನ್ನು ಎತ್ತಿ ಹಿಡಿಯಬೇಕೆಂದು ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು. ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ದೇಶದಲ್ಲಿ ಯಾವ ರೀತಿಯಲ್ಲಿ ನಾವುಗಳು ಜೀವಿಸಬೇಕು ಎಂಬುದನ್ನು ಸಂವಿಧಾನ ಹೇಳಿಕೊಟ್ಟಿದೆ. ನಾವುಗಳು ವಿಭಿನ್ನತೆಯಲ್ಲಿ ಏಕತೆಯನ್ನು ಕಾಣುತ್ತಿದ್ದೇವೆ. ಜಾತ್ಯಾತೀತವಾಗಿಯೂ ಸರ್ವಧರ್ಮಗಳಿಗೂ ಸಮಾನರಾಗಿ ರುವ ನಮ್ಮನ್ನು ಬಿಜೆಪಿ ಸರ್ಕಾರ ಒಡೆದು ಆಳುವ ನೀತಿಯನ್ನು ಅನುಸರಿಸುವ ಮೂಲಕ ಸ್ವಾರ್ಥಕ್ಕಾಗಿ ತಮಗೆ ಬೇಕಾದ ರೀತಿಯಲ್ಲಿ ಮಸೂದೆ ಮಂಡಿಸಿ ಕಾನೂನು ರೂಪಿಸುತ್ತಿ ರುವುದು ಸರಿಯಲ್ಲ ಎಂದು ದೂರಿದರು.

ಸಿಪಿಎಂ ಪಕ್ಷದ ಜಿಲ್ಲಾ ಸಂಚಾಲಕ ಡಾ.ದುರ್ಗಾಪ್ರಸಾದ್ ಮಾತನಾಡಿ, ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆ ನಮ್ಮ ದೇಶದ ನೈತಿಕ ಸಂವಿಧಾನಿಕ ಸ್ಫೂರ್ತಿ ಮತ್ತು ಜಾತ್ಯಾತೀತ ಪರಂಪರೆ ಗಳಿಗೆ ವಿರುದ್ಧವಾಗಿದೆ. ದೇಶದ ಪೌರತ್ವ ಪ್ರಧಾನದಲ್ಲಿ ಧಾರ್ಮಿಕ ನೆಲೆಯ ತಾರತಮ್ಯ ಸಂವಿಧಾನ 14ರ ಪರಿಚ್ಛೇದ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಗಳ ಉಲ್ಲಂಘನೆಯಾಗಿದೆ. ಒಂದು ವರ್ಗವನ್ನು ಮೀಸಲಾಗಿ ಇಟ್ಟುಕೊಂಡು ಮಸೂದೆ ತಯಾರಿಸಲಾಗಿದೆ. ದೇಶದ ಗಂಭೀರ ಹಾಗೂ ನೈಜ ಸಮಸ್ಯೆಗಳಿಂದ ಜನತೆಯ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ದೂರಿದರು.

ಕಾಂಗ್ರೆಸ್ ಕಿಸಾನ್ ಜಿಲ್ಲಾ ಘಟಕದ ಅಧ್ಯಕ್ಷ ನೆರವಂಡ ಉಮೇಶ್ ಮಾತನಾಡಿದರು. ಪ್ರತಿಭಟನೆಯಲ್ಲಿ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಸಂಚಾಲಕ ಮಹಮ್ಮದ್ ರಫಿ, ಸಹ ಸಂಚಾಲಕ ಎಸ್.ಹೆಚ್.ಮತೀನ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಎಂ.ದಿಲ್ಲು, ನಗರ ಜೆಡಿಎಸ್ ಅಧ್ಯಕ್ಷ ಪಿ.ಎ.ಮಂಜುನಾಥ್, ರಾಜೇಶ್ ನಾಯರ್, ಆರ್.ಕೆ.ಅಬ್ದುಲ್ ಸಲಾಂ, ಪಪಂ ಸದಸ್ಯರಾದ ಸಿ.ಕೆ.ಪೃಥ್ವಿನಾಥ್, ಜಲೀಲ್, ಅಗಸ್ಟಿನ್ ಬೆನ್ನಿ, ರಜನಿಕಾಂತ್, ಮುಖಂಡರಾದ ಕೆ.ಟಿ ಬಷೀರ್, ಕೆ.ವಿ.ಸುನೀಲ್ ಮತ್ತಿತರರು ಪಾಲ್ಗೊಂಡಿದ್ದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಹೇಶ್ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ತಲುಪಿಸಲಾಗುವುದು ಎಂದು ಹೇಳಿದರು.

Translate »