ಕೊಳಚೆ ನಿವಾಸಿಗಳಿಗೆ ಮನೆ, ಇಡಬ್ಲ್ಯೂಎಸ್ ಮನೆಗಳಿಗೆ ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಕೊಳಚೆ ನಿವಾಸಿಗಳಿಗೆ ಮನೆ, ಇಡಬ್ಲ್ಯೂಎಸ್ ಮನೆಗಳಿಗೆ ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

October 20, 2019

ಮೈಸೂರು, ಅ.19(ಪಿಎಂ)- ಮೈಸೂರು ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆ ಮಂಜೂರು ಮಾಡಬೇಕು ಹಾಗೂ ರಾಮಕೃಷ್ಣನಗರ `ಹೆಚ್’ ಬ್ಲಾಕ್‍ನ ಇಡಬ್ಲ್ಯೂಎಸ್ (ಆರ್ಥಿಕ ವಾಗಿ ಹಿಂದುಳಿದ ವರ್ಗ) ಮನೆಗಳಿಗೆ ಮೂಲ ಸೌಲಭ್ಯ ಕಲ್ಪಿಸ ಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಮೈಸೂರು ನಗರದ ಕೊಳಚೆ ನಿವಾಸಿಗಳಿಗೆ ಮನೆಗಳನ್ನು ಮಂಜೂರು ಮಾಡಬೇಕು. ಜೊತೆಗೆ ಹಕ್ಕು ಪತ್ರಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ರಾಮಕೃಷ್ಣನಗರ `ಹೆಚ್’ ಬ್ಲಾಕ್‍ನ ಇಡಬ್ಲ್ಯೂಎಸ್ ಮನೆಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲವಾಗಿವೆ. ಇಲ್ಲಿ ವಾಸಿಸುವ ಬಡ ಫಲಾನುಭವಿಗಳಿಗೆ ಶೌಚ ಗೃಹ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಸೇರಿದಂತೆ ಅಗತ್ಯ ಇನ್ನಿತರ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಮಾತನಾ ಡಿದ ವೇದಿಕೆ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ಧಶೆಟ್ಟಿ, ವಸತಿರಹಿತರಿರುವ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆಗಳನ್ನು ಮಂಜೂರು ಮಾಡಿ ಹಕ್ಕು ಪತ್ರ ನೀಡಬೇಕು. 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ತರಬೇಕೆಂಬ ರಾಜ್ಯ ಸರ್ಕಾರದ ಉದ್ದೇಶ ಸೂಕ್ತವಲ್ಲ. ಇದರಿಂದ ಗ್ರಾಮೀಣ ಮಕ್ಕಳ ಮುಂದಿನ ಶಿಕ್ಷಣಕ್ಕೆ ಪೆಟ್ಟು ಬೀಳಲಿದೆ. ಈ ಹಿನ್ನೆಲೆಯಲ್ಲಿ ಇದನ್ನು ಕೈಬಿಡಬೇಕು. ಯಾವುದೇ ಕಾರಣಕ್ಕೂ ಮೈಸೂರು ಜಿಲ್ಲೆಯನ್ನು ವಿಭಜಿಸಿ ಹುಣಸೂರನ್ನು ಮತ್ತೊಂದು ಜಿಲ್ಲೆಯಾಗಿ ಮಾಡಕೂಡದು ಎಂದು ಆಗ್ರಹಿಸಿದರು. ರಾಮಕೃಷ್ಣ ನಗರ `ಹೆಚ್’ ನಿವಾಸಿಗಳಾದ ಲಕ್ಷ್ಮೀ, ಪುಷ್ಪಾ, ಶೋಭಾ, ಪ್ರಿಯಾಂಕ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »