ಇಂದು `ಮೈಸೂರು ಡರ್ಬಿ’
ಮೈಸೂರು

ಇಂದು `ಮೈಸೂರು ಡರ್ಬಿ’

October 20, 2019

ಮೈಸೂರು,ಅ.19-ಮೈಸೂರಿನ ರೇಸ್ ಪ್ರಿಯರು ಭಾರೀ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ‘ಮೈಸೂರು ಡರ್ಬಿ-2019’ (ಗ್ರೇಡ್-1) ನಾಳೆ (ಭಾನುವಾರ) ಮೈಸೂರು ರೇಸ್‍ಕೋರ್ಸ್‍ನಲ್ಲಿ ನಡೆಯಲಿದೆ. ಈಗಾ ಗಲೇ ಡರ್ಬಿಯಲ್ಲಿ ಭಾಗವಹಿಸಲು ದೇಶದ ವಿವಿಧ ಸ್ಟಡ್ ಫಾರಂಗಳಿಂದ ಬಂದಿರುವ ಅತ್ಯುತ್ತಮ ಕುದುರೆಗಳ ಬಗ್ಗೆ ರೇಸಿಂಗ್ ಉತ್ಸಾಹಿಗಳಲ್ಲಿ ತುಂಬಾ ಕುತೂಹಲ ಉಂಟಾಗಿದೆ.

ಮೈಸೂರು ರೇಸ್ ಕ್ಲಬ್ ಅಧ್ಯಕ್ಷರಾದ ಡಾ.ಎನ್.ನಿತ್ಯಾನಂದರಾವ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಬಾರಿಯ ಮೈಸೂರು ಡರ್ಬಿಯಲ್ಲಿ ಕ್ಯಾಟಲಿಸ್ಟ್ ಪ್ರಾಪರ್ಟೀಸ್ ಮತ್ತು ಎವಿಆರ್ ಗ್ರೂಪ್ ಪ್ರಾಯೋಜಕತ್ವ ಗಿಟ್ಟಿಸುವಲ್ಲಿ ಯಶಸ್ವಿಯಾಗಿವೆ.

ಕಳೆದ ಕೆಲ ದಶಕಗಳಿಂದ ರೇಸಿಂಗ್ ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹಿಯೂ ಆಗಿರುವ ಕ್ಯಾಟಲಿಸ್ಟ್ ಪ್ರಾಪರ್ಟೀಸ್‍ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇ ಶಕ ಅಂಜನ್ ರಂಗರಾಜ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ನಮ್ಮ ಸಂಸ್ಥೆಯು ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವುದರಲ್ಲಿ ತನ್ನನ್ನು ತೊಡಗಿಸಿ ಕೊಂಡಿದೆ. ಇದೇ ಪ್ರಥಮ ಬಾರಿಗೆ ‘ಮೈಸೂರು ಡರ್ಬಿ’ಯ ಪ್ರಾಯೋಜಕತ್ವ ವಹಿಸಿರುವುದಕ್ಕೆ ಅತ್ಯಂತ ಸಂತೋಷ ವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ತಮ್ಮ ಕಂಪನಿ ಸತತ ಎರಡು ವರ್ಷ `ಕ್ಯಾಟಲಿಸ್ಟ್ ಪ್ರಾಪರ್ಟೀಸ್ ಬೆಂಗಳೂರು ಡರ್ಬಿ’ ಹೆಸರಿನಲ್ಲಿ ‘ಬೆಂಗಳೂರು ವಿಂಟರ್ ಡರ್ಬಿ’ ಪ್ರಾಯೋಜಿಸಿರುವುದನ್ನು ಅವರು ಸ್ಮರಿಸಿಕೊಂಡರು. ಬೆಂಗಳೂರು ಮೂಲದ ಎವಿಆರ್ ಗ್ರೂಪ್, ಬಳ್ಳಾರಿ ಟಸ್ಕರ್ಸ್ ಹಾಗೂ ಕರ್ನಾಟಕ ಪ್ರೀಮಿಯರ್ ಲೀಗ್‍ನ ಫ್ರಾಂಚೈಸಿ ಮಾಲೀಕರೂ ಆದ ಅರವಿಂದ ವೆಂಕಟೇಶ್ ರೆಡ್ಡಿ ಸಹ ಪ್ರಾಯೋಜಕರಾಗಿದ್ದು, ಡರ್ಬಿ ಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ.

ಮೈಸೂರು ರೇಸ್ ಕ್ಲಬ್‍ನಲ್ಲಿ ನಾಳೆ ನಡೆ ಯುವ ಮೈಸೂರು ಡರ್ಬಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮಳೆಯಿಂದ ಯಾವುದೇ ಅಡಚಣೆ ಆಗುವುದಿಲ್ಲ ಎಂಬ ಭರವಸೆ ಹೊಂದಿರುವುದಾಗಿ ಡಾ. ನಿತ್ಯಾ ನಂದರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಾಳಿನ ಡರ್ಬಿಯು 2000 ಮೀಟರ್ ಗಳದ್ದಾಗಿದ್ದು, ಮೂರು ವರ್ಷ ಪ್ರಾಯದ ಭಾರತೀಯ ಕುದುರೆಗಳು ಭಾಗವಹಿ ಸುವುದು ಮತ್ತೊಂದು ವಿಶೇಷ.

ಮೈಸೂರು ರೇಸ್ ಕ್ಲಬ್‍ನ ಈ ವರ್ಷದ ಅತ್ಯಂತ ಶ್ರೀಮಂತ ರೇಸ್ ಇದಾಗಿದ್ದು, ಇದರ ಒಟ್ಟು ಬಹುಮಾನಗಳ ಮೊತ್ತ 80 ಲಕ್ಷ ರೂ. ಆಗಿದೆ. ಇದರಲ್ಲಿ ಡರ್ಬಿ ವಿಜೇ ತರು 40 ಲಕ್ಷ ರೂ. ಬಹುಮಾನವನ್ನು ಪಡೆಯಲಿದ್ದಾರೆ ಎಂದು ವಿವರಿಸಿದರು.

ನಾಳೆ ಸಂಜೆ 4 ಗಂಟೆಗೆ ನಡೆಯುವ ಮೈಸೂರು ಡರ್ಬಿಯಲ್ಲಿ 7 ಕುದುರೆಗಳು ಭಾಗವಹಿಸಲಿವೆ. ಅವುಗಳಲ್ಲಿ ಒಂದು ಫಿಲ್ಲಿ (ಅತೀ ಕಿರಿಯ ಹೆಣ್ಣು ಕುದುರೆ) ಮತ್ತು ಉಳಿದವು ಕೋಲ್ಟ್ಸ್. ಅಂದರೆ, 4 ವರ್ಷಕ್ಕಿಂತ ಕಡಿಮೆ ವಯೋಮಾನದ ಕಿರಿಯ ಗಂಡು ಕುದುರೆ ಗಳು). ಇದು ಅತ್ಯಂತ ರೋಚಕ ಸ್ಪರ್ಧೆ ಯಾಗಿದ್ದು, ಎಲ್ಲವೂ ಭಾರತೀಯ ಕುದುರೆ ಗಳೇ ಭಾಗವಹಿಸುತ್ತಿವೆ. 7 ಕುದುರೆಗಳು ಓಡು ತ್ತಿದ್ದರೂ ಎಲ್ಲರ ಕಣ್ಣು `ಕಾಸ್ಮಿಕ್ ರೇ’ ಮೇಲೆ ಇರಲಿದೆ. ಹೆಚ್ಚಿನ ಶ್ರೇಯಾಂಕದ ಮೂರು ವರ್ಷದ ಫಿಲ್ಲಿಯ ಒಡೆಯ ಯುನೈಟೆಡ್ ರೇಸಿಂಗ್ ಮತ್ತು ಬ್ಲಡ್ ಸ್ಟಾಕ್ ಬ್ರೀಡರ್ಸ್ ಲಿಮಿಟೆಡ್ ಮಾಲೀಕರಾಗಿದ್ದು, ಎಸ್.ಎಸ್. ಅಟ್ಟೋಲ್ಲಾಹಿ ತರಬೇತುದಾರ ರಾಗಿದ್ದಾರೆ. ಈ ಕುದುರೆಯ ಜಾಕಿ ಸೂರಜ್ ನರೇಡು. ಎರಡನೇ ನೆಚ್ಚಿನ ಕುದುರೆ ಮೂರು ವರ್ಷದ ಕೋಲ್ಟ್ `ಮಾಲ್ವಾ’. ಇದರ ಮಾಲೀಕರು ಮಾರ್ಟ್‍ಹ್ಯಾಂಡ್ ಸಿಂಗ್ ಮಹೀಂದ್ರ ಮತ್ತು ರಿನಾ ಮಹೀಂದ್ರ. ಈ ಕುದುರೆಗೂ ಎಸ್.ಎಸ್. ಅಟ್ಟೋಲ್ಲಾಹಿ ತರಬೇತಿ ನೀಡಿದ್ದಾರೆ. ಈ ಕುದುರೆಯ ಜಾಕಿ ಸಿ.ಎಸ್. ಜೋದಾ.

ಮೂರು ವರ್ಷದ ಕೋಲ್ಟ್ `ಸ್ಕ್ವೇರ್ ದಿ ಸರ್ಕಲ್’ ಅವಕಾಶವಿದ್ದು, ಇದರ ಮಾಲೀ ಕರು ಜಾಹಿದ್ ಖುರೇಷಿ, ಜಾಮಿನಿ ಜಯ ರತ್ನೆ ಮತ್ತು ಎನ್.ಕೃಷ್ಣಮೂರ್ತಿ. ಈ ಕುದುರೆಗೆ ಮೊಹಮದ್ ಸಜ್ಜಿದ್ ಖುರೇಷಿ ತರಬೇತಿ ನೀಡಿದ್ದು, ಇಮ್ರಾನ್ ಖಾನ್ ಜಾಕಿಯಾಗಿದ್ದಾರೆ. ಇನ್ನಿತರ ಕುದುರೆಗಳು `ಅಲೆಕ್ಸಾಂಡರ್ ಬನ್ರ್ಸ್’, `ಸದರನ್ ರೂಲರ್’, `ಸ್ಟಾರ್ ಕ್ಯಾವರ್ಲಿ’ ಮತ್ತು `ಸ್ಟ್ರೀಮಿಂಗ್ ಗೋಲ್ಡ್’ ಕುದುರೆಗಳು ಡರ್ಬಿಯಲ್ಲಿ ಭಾಗವಹಿಸಲಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಮೈಸೂರು ರೇಸ್ ಕ್ಲಬ್ ಮೊದಲ ಮೂರು ವಿಜೇತ ಕುದುರೆಗಳನ್ನು ಸೂಚಿಸಲು `ಫ್ರೀ ಕಂಟೆಸ್ಟ್ ಆಫ್ ಸ್ಕಿಲ್’ ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ ಮಾರುತಿ ಆಲ್ಟೋ 800, ದ್ವಿತೀಯ ಬಹುಮಾನವಾಗಿ ನಾಲ್ಕು ಬಜಾಜ್ ಸಿಟಿ 100 ಮೋಟಾರ್ ಬೈಕ್ ಮತ್ತು ಸಮಾಧಾನಕರ ಬಹು ಮಾನವಾಗಿ 25 ಟೈಟಾನ್ ಗಿಫ್ಟ್ ವೋಚರ್‍ಗಳನ್ನು ನೀಡಲಾಗುವುದು. ಅಲ್ಲದೇ ಅತ್ಯುತ್ತಮವಾದ ಉಡುಪು ಧರಿಸಿದ ಮಹಿಳೆ ಮತ್ತು ಪುರುಷರಿಗೆ ಪ್ರಶಸ್ತಿ ಪ್ರಕಟಿಸಲಾಗುವುದು ಎಂದು ಡಾ.ನಿತ್ಯಾನಂದರಾವ್ ಹೇಳಿದರು.

Translate »