ಮೈಸೂರು, ಆ.25(ಎಂಟಿವೈ)-ಕಾಶ್ಮೀರದಲ್ಲಿ ಹಿಂದೂಗಳಿಗೆ ಪುನರ್‍ವಸತಿ ಕಲ್ಪಿಸಿ ದೇಶಕ್ಕೆ ನುಸುಳಿರುವ ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗರನ್ನು ಹೊರದಬ್ಬುವಂತೆ ಆಗ್ರಹಿಸಿ ಹಿಂದೂ ಜನ ಜಾಗೃತಿ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೈಸೂರಿನ ಅಗ್ರಹಾರ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ ಹಿಂದೂ ಜನ ಜಾಗೃತಿ ಸಮಿತಿಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸವಲತ್ತು ಹಾಗೂ ಆರ್ಟಿಕಲ್-370 ಮತ್ತು 35-ಎ ಅನ್ನು ರದ್ದುಪಡಿಸುವ ಐತಿಹಾಸಿಕ ನಿರ್ಣಯ ಕೈಗೊಂಡಿ ರುವುದನ್ನು ದೇಶವೇ ಸ್ವಾಗತಿಸಿದೆ. ಈ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಹಿಂದೂಗಳ ಪುನರ್‍ವಸತಿಗೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಭಾರತಕ್ಕೆ ರೊಹಿಂಗ್ಯಾ ಮುಸ್ಲೀಮರು ಮತ್ತು ಬಾಂಗ್ಲಾದೇಶಿಗರು ಅಧಿಕ ಸಂಖ್ಯೆಯಲ್ಲಿ ನುಸುಳಿದ್ದು, ಈ ನುಸುಳುಕೋರರಿಂದ ದೇಶದ ನಿವಾಸಿ ಹಿಂದೂಗಳ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನುಸುಳುಕೋರರನ್ನು ದೇಶದಿಂದ ಹೊರ ಹಾಕಬೇಕೆಂದು ಆಗ್ರಹಿಸಿದರು.
ಹಿಂದೂ ಜನ ಜಾಗೃತಿ ಸಮಿತಿಯ ಸಂಚಾಲಕ ಕೆ.ಶಿವರಾಮು ಮಾತನಾಡಿ, ಮೈಸೂರು-ಬೆಂಗಳೂರು ನಡುವೆ ಪ್ರತಿ ನಿತ್ಯ ಸಂಚರಿಸುವ ಟಿಪ್ಪು ಎಕ್ಸ್‍ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಬೇಕು. ಈ ಭಾಗದಲ್ಲಿ ಟಿಪ್ಪು ಸುಲ್ತಾನ್ ಹಿಂದೂಗಳ ಮೇಲೆ ದೌರ್ಜನ್ಯ ಎಸಗಿರುವುದರಿಂದ ಕೂಡಲೇ ಟಿಪ್ಪು ಎಕ್ಸ್‍ಪ್ರೆಸ್‍ಗೆ ಶ್ರೀಕೃಷ್ಣರಾಜ ಒಡೆಯರ್ ಎಕ್ಸ್‍ಪ್ರೆಸ್ ಎಂದು ಮರುನಾಮಕರಣ ಮಾಡಬೇಕು. ರಾಜ್ಯ ಸರ್ಕಾರವೇ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿರುವಾಗ ಈ ರೈಲಿಗೆ ಟಿಪ್ಪುವಿನ ಹೆಸರು ಇಟ್ಟು ಸರ್ಕಾರ ದಾಖಲೆಗಳಲ್ಲಿ ಹೆಸರು ನಮೂದಿಸುವುದು ಸರಿಯಲ್ಲ ಎಂದರು.
ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಚರ್ಚ್‍ವೊಂದಕ್ಕೆ ಸೇರಿದ ಆಸ್ತಿಯನ್ನು ಒಂದು ಸಾವಿರ ಕೋಟಿ ರೂ.ಗೆ ಮಾರಾಟ ಮಾಡಿ ಹಗರಣ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಗರಣದ ಸಮಗ್ರ ತನಿಖೆ ಆಗಬೇಕು. ದೇಶದಲ್ಲಿರುವ ಎಲ್ಲಾ ಚರ್ಚ್‍ಗಳನ್ನೂ ಸರ್ಕಾರೀಕರಣಗೊಳಿಸಬೇಕು. ಇಲ್ಲದಿದ್ದರೆ ಹಿಂದೂ ದೇವಾಲಯಗಳ ಸರ್ಕಾರೀಕರಣವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.