ವ್ಯವಸ್ಥಿತವಾಗಿ ಪಡಿತರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ
ಕೊಡಗು

ವ್ಯವಸ್ಥಿತವಾಗಿ ಪಡಿತರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

December 24, 2019

ಸೋಮವಾರಪೇಟೆ, ಡಿ.23- ಪಡಿತರ ಪಡೆಯಲು ಕೈಬೆರಳಿನ ಗುರುತು ಪಡೆಯಲಾಗುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸಿ ಎಲ್ಲಾ ಪಡಿತರದಾರರಿಗೂ ವ್ಯವಸ್ಥಿತವಾಗಿ ಪಡಿತರ ನೀಡಬೇಕು ಎಂದು ಆಗ್ರಹಿಸಿ ಗರ್ವಾಲೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಬೆರಳಿನ ಗುರುತು ನೀಡಬೇಕಾಗಿದ್ದು, ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂಟರ್‍ನೆಟ್ ಸೌಲಭ್ಯದ ಸಮಸ್ಯೆಯಿಂದ ಅದು ಸಾಧ್ಯವಾಗುತ್ತಿಲ್ಲ. ಇದರಿಂದ ನಿಗದಿತ ಸಮಯದಲ್ಲಿ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಕೂಡಲೇ ಗುರುತು ನೀಡುವ ವ್ಯವಸ್ಥೆ ರದ್ಧುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ದಿನಕ್ಕೆ ಕೇವಲ 5 ರಿಂದ 6 ಮಂದಿ ಬೆರಳಿನ ಗುರುತು ನೀಡಿದ ತಕ್ಷಣ ಸರ್ವರ್ ಸಮಸ್ಯೆ ಉಂಟಾಗುತ್ತಿದೆÉ. ಇದರಿಂದ ಒಮ್ಮೆ ಪಡಿತರ ಪಡೆಯಲು ವಾರಗಳ ಕಾಲ ಕೆಲಸ ಕಾರ್ಯ ಬಿಟ್ಟು ನ್ಯಾಯಬೆಲೆ ಅಂಗಡಿಯ ಬಳಿಗೆ ಬಂದು ಹೋಗಬೇಕಿದೆ ಎಂದು ದೂರಿದರು. ಮಾದಾಪುರ ಮತ್ತು ಸೋಮವಾರಪೇಟೆಯಲ್ಲಿ ಗುರುತು ನೀಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಮಾದಾಪುರದಲ್ಲಿ 4 ರಿಂದ 5 ದಿನಗಳಿಂದ ಪ್ರಯತ್ನಿಸಿದರೂ ಸರ್ವರ್ ಸಮಸ್ಯೆಯಿಂದ ಗುರುತು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರಾದ ಪ್ರದೀಪ್ ಹೇಳಿದರು.

ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಗೋವಿಂದ ರಾಜ್ ಮಾತನಾಡಿ, ಸಮಸ್ಯೆಯ ಬಗ್ಗೆ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗುವುದು. ಒಮ್ಮೆ ಕುಟುಂಬದ ಎಲ್ಲ್ಲಾ ಪಡಿತರದಾರರು ಕಂಪ್ಯೂಟರ್‍ನಲ್ಲಿ ತಮ್ಮ ಹೆಬ್ಬೆಟ್ಟಿನ ಗುರುತು ನೀಡಿದ ನಂತರ, ಪ್ರತಿ ತಿಂಗಳು ಗುರುತು ನೀಡದೆ ಪಡಿತರ ಪಡೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ, ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ದರ್ಶನ್, ರೋಷನ್ ಸೇರಿದಂತೆ ಶಿರಂಗಳ್ಳಿ ಹಾಗೂ ಗರ್ವಾಲೆ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.

Translate »