ಜಿಲ್ಲಾದ್ಯಂತ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಮಂಡ್ಯ

ಜಿಲ್ಲಾದ್ಯಂತ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

January 24, 2019

ಸುರಂಗಕ್ಕೆ ಕುತ್ತು ತಂದಿರುವ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹ

ಮಿಮ್ಸ್ ವಿರುದ್ಧ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ಸಬ್ಬನಕುಪ್ಪೆ ಗ್ರಾಪಂ ವಿರುದ್ಧ ನೌಕರಳ ಧರಣಿ

ತಾ.ಕಚೇರಿ ಎದುರು ಭತ್ತ ಸುರಿದು ಪ್ರತಿಭಟನೆ

ನೆಲಮಾಕನಹಳ್ಳಿ ಪಡಿತರದಾರರ ಪ್ರತಿಭಟನೆ

ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬುಧವಾರ ಜಿಲ್ಲಾದ್ಯಂತ ವಿವಿಧ ಸಂಘಟನೆಗಳ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.

ಮಂಡ್ಯದಲ್ಲಿ ಹೊರಗುತ್ತಿಗೆ ಕಾರ್ಮಿಕರು ಹಾಗೂ ರೈತರು, ಮದ್ದೂರಲ್ಲಿ ರೈತರು, ಬೆಸಗರಹಳ್ಳಿ, ಮಳವಳ್ಳಿಯಲ್ಲಿ ಪಡಿತರದಾರರು, ಸಬ್ಬನಕುಪ್ಪೆ ಗ್ರಾಪಂ ಮುಂದೆ ನೌಕರೆಯೊಬ್ಬರು ಒಳಗೊಂಡಂತೆ ಹಲವೆಡೆ ಪ್ರತಿಭಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಶ್ರೀರಂಗಪಟ್ಟಣ ತಾಲೂಕಿನ ವಿವಿಧ ಕಡೆಗಳಲ್ಲಿ 100ಕ್ಕೂ ಹೆಚ್ಚು ಅಕ್ರಮ ಕಲ್ಲು ಕ್ವಾರೆಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಯಿಂದ ಚನ್ನನಕೆರೆ ಬಳಿಯ ಸುರಂಗಕ್ಕೆ ಅಪಾಯವಿದೆ. ಆದ್ದರಿಂದ ಗಣಿಗಾರಿಕೆ ತಡೆಯುವಂತೆ ವಿವಿಧ ಗ್ರಾಮಗಳ ರೈತರು ಬುಧವಾರ ಮಂಡ್ಯದಲ್ಲಿ ಜಿಲ್ಲಾಧಿಕಾರಿ, ಎಸ್‍ಪಿ ಸೇರಿ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಿವಿಧ ಗ್ರಾಮಗಳ ಎಚ್.ಎಲ್.ಸೋಮಶೇಖರ್, ಬಿ.ಸಿದ್ದೇ ಗೌಡ, ಎಚ್.ಆರ್.ಕುಮಾರ್, ಡಿ.ಎಸ್.ಚಂದ್ರಶೇಖರ್, ಕೆ.ನಾಗೇಂದ್ರಸ್ವಾಮಿ, ತೇಜಸ್‍ಕುಮಾರ್ ಮೊದಲಾವರು ತೆರಳಿ ಮನವಿ ಸಲ್ಲಿಸಿದ್ದು, ಈ ಸಂಬಂಧ ತಕ್ಷಣ ಕ್ರಮಕೈಗೊಳ್ಳದಿದ್ದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವು ದಾಗಿ ಎಚ್ಚರಿಕೆ ನೀಡಿದರು. ತಾಲೂಕಿನ ಕಂದಾಯ ಗ್ರಾಮಗಳಾದ ಚನ್ನನಕೆರೆ, ಕಾಳೇನಹಳ್ಳಿ, ಟಿ.ಎಂ.ಹೊಸೂರು, ಗೌಡಹಳ್ಳಿ, ಕೋಡಿಶೆಟ್ಟಿಪುರ, ನೀಲನಕೊಪ್ಪಲು, ಮುಂಡುಗ ದೊರೆ, ಹಂಗರಹಳ್ಳಿ ಭಾಗದಲ್ಲಿ 100ಕ್ಕೂ ಹೆಚ್ಚು ಕಲ್ಲು ಕ್ವಾರೆ ಗಳು, 50ಕ್ಕೂ ಹೆಚ್ಚು ಜಲ್ಲಿ ಯಂತ್ರದ ಉದ್ಯಮಗಳು ಯಾವುದೇ ಪರವಾನಗಿ ಇಲ್ಲದೆ ನಡೆಯುತ್ತಿವೆ. ಚನ್ನನಕೆರೆ ಭಾಗದಲ್ಲಿ ವಿಶ್ವೇಶ್ವರಯ್ಯ ನಾಲೆಯ 2 ಕಿ.ಮೀ. ಸುರಂಗವಿದ್ದು, ಸುರಂಗದ ಮೂಲಕ 800 ಕ್ಯೂಸೆಕ್ ನೀರು ಅರಕೆರೆ ಹೋಬಳಿ, ಬನ್ನೂರು ಹೋಬಳಿ, ಮಳವಳ್ಳಿ ತಾಲೂಕಿನ ಕೆರೆ, ಕಟ್ಟೆ ಮತ್ತು ಜಮೀನುಗಳಿಗೆ ಹರಿಯುತ್ತದೆ. ಈ ಸುರಂಗದ ಅಕ್ಕಪಕ್ಕದಲ್ಲೇ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಆಳವಾಗಿ ಬಂಡೆಗಳನ್ನು ಕೊರೆದು ಭಾರಿ ಸ್ಪೋಟಕಗಳನ್ನು ತುಂಬಿ ಸ್ಪೋಟಿಸಲಾಗುತ್ತಿದೆ. ಸ್ಪೋಟ ದಿಂದ ಸುರಂಗ ಬಿರುಕು ಬಿಟ್ಟು ಕುಸಿಯುವ ಆತಂಕವಿದೆ. ಆದ್ದರಿಂದ ಈ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಷೇಧಿಸಿ, ತಜ್ಞರ ಸಮಿತಿಯಿಂದ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಂತೆಯೇ, ಟಿ.ಎಂ.ಹೊಸೂರು ಗ್ರಾಮ ಪರಿಮಿತಿಯಲ್ಲಿ 10 ಚಕ್ರದ ಭಾರಿ ವಾಹನಗಳಲ್ಲಿ 35ರಿಂದ 40 ಟನ್‍ವರೆಗೆ ಜಲ್ಲಿ ಮತ್ತು ಎಂ.ಸ್ಯಾಂಡ್ ಅನ್ನು ತುಂಬಿಕೊಂಡು ದಿನವೊಂದಕ್ಕೆ 400ಕ್ಕೂ ಹೆಚ್ಚು ಲಾರಿಗಳು ಸಂಚರಿಸುತ್ತವೆ. ಇದರಿಂದಾಗಿ ರಸ್ತೆಗಳೆಲ್ಲಾ ಗುಂಡಿ ಬಿದ್ದಿವೆ. ಜೊತೆಗೆ ರಸ್ತೆಯ ಇಕ್ಕೆಲಗಳ ಮನೆಗಳಿಗೆ ಧೂಳು ತುಂಬಿಕೊಂಡು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತಿದೆ ಎಂದು ದೂರಿದರು.

ಟಿ.ಎಂ.ಹೊಸೂರು ಹಾಗೂ ಕಾಳೇನಹಳ್ಳಿ ಗ್ರಾಮಗಳಲ್ಲಿ ಗಣಿ ಸ್ಫೋಟದಿಂದಾಗಿ ಮನೆಗಳು ಬಿರುಕು ಬಿಡುತ್ತಿವೆ. ಜೊತೆಗೆ 10ಕ್ಕೂ ಹೆಚ್ಚು ಡಾಂಬಾರ್ ಪ್ಲಾಂಟ್‍ಗಳು ಕಾರ್ಯನಿರ್ವಹಿ ಸುತ್ತಿದ್ದು, ರೈತರ ಬೆಳೆಗಳು ನಾಶವಾಗುತ್ತಿದೆ. ಕೊಳವೆ ಬಾವಿ ಗಳು ಬತ್ತಿಹೋಗುತ್ತಿವೆ. ಆದ್ದರಿಂದ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಹೊರಗುತ್ತಿಗೆ ಕಾರ್ಮಿಕರ ಧರಣಿ: ಮೂಲ ಸೌಲಭ್ಯಗಳನ್ನು ಕಲ್ಪಿಸದೆ ಕಿರುಕುಳ ನೀಡುತ್ತಿರುವ ಏಜೆನ್ಸಿಗಳ ವಿರುದ್ಧ ಕ್ರಮಕ್ಕೆ ಹಾಗೂ ಹೊರಗುತ್ತಿಗೆಯನ್ನು ಸರ್ಕಾರಿ ಸ್ವಾಮ್ಯದ ಕಿಯಾನಿಕ್ಸ್‍ಗೆ ನೀಡುವಂತೆ ಒತ್ತಾಯಿಸಿ ಹೊರಗುತ್ತಿಗೆ ಕಾರ್ಮಿಕರು ನಗರದಲ್ಲಿ ಮಿಮ್ಸ್ ಎದುರು ಪ್ರತಿಭಟನಾ ಧರಣಿ ನಡೆಸಿದರು.

ಸರ್ಕಾರಿ ಆಸ್ಪತ್ರೆಗಳ ನಾನ್ ಕ್ಲಿನಿಕಲ್ ಹಾಗೂ ಇತರೆ ಹೊರಗುತ್ತಿಗೆ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ನಗರದ ಮಂಡ್ಯ ಮೆಡಿಕಲ್ ಕಾಲೇಜು ಎದುರು ಸಮಾವೇಶಗೊಂಡ ಕಾರ್ಮಿಕರು ಧರಣಿ ನಡೆಸಿ ಏಜೆನ್ಸಿಗಳ ಕಿರುಕುಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಹೊರಗುತ್ತಿಗೆ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಮಂಡ್ಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಾನ್ ಕ್ಲಿನಿಕಲ್ ಹಾಗೂ ಭದ್ರತಾ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ನಿಯಮಾನು ಸಾರ ರಜೆ ನೀಡದೆ ಅನಗತ್ಯವಾಗಿ ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಒಡ್ಡುತ್ತಿರುವ ಏಜೆನ್ಸಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹೊರಗುತ್ತಿಗೆ ಕಾರ್ಮಿಕರ ಒಕ್ಕೂಟದ ವೆಂಕಟಲಕ್ಷ್ಮಿ, ಚಿನ್ನರಾಜು, ಯಶೋದಮ್ಮ, ರತ್ನಮ್ಮ, ಮಹದೇವಮ್ಮ, ಮಹೇಶ, ದಾಸಪ್ಪ ಸೇರಿದಂತೆ ಹಲವು ಕಾರ್ಮಿಕರು ಭಾಗವಹಿಸಿದ್ದರು.

ಮಹಿಳಾ ನೌಕರಳ ಪ್ರತಿಭಟನೆ: ಗ್ರಾಮ ಪಂಚಾಯತಿ ಅಧ್ಯಕ್ಷರು ಏಕಾಏಕಿ ತನ್ನದಲ್ಲದ ತಪ್ಪಿಗೆ ಕೆಲಸದಿಂದ ವಜಾ ಮಾಡಿ ದ್ದಾರೆ. ಜೊತೆಗೆ 18 ತಿಂಗಳ ವೇತನ ನೀಡದಿರುವುದನ್ನು ಖಂಡಿಸಿ ವಜಾಗೊಂಡ ಮಹಿಳಾ ನೌಕರಳೊಬ್ಬಳು ತನ್ನ ಮಕ್ಕಳೊಂದಿಗೆ ಶ್ರೀರಂಗಪಟ್ಟಣ ತಾಲೂಕಿನ ಸಬ್ಬನಕುಪ್ಪೆ ಗ್ರಾಮದಲ್ಲಿ ಧರಣಿ ಕುಳಿತಿದ್ದಾರೆ. ಗ್ರಾಪಂ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ಮಾಡು ತ್ತಿರುವ ನೌಕರೆ ಚನ್ನಾಜಮ್ಮ ಅವರು ಕಳೆದ 18 ತಿಂಗಳಿಂದ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ವೇತನ ನೀಡಬೇಕು ಅಂತಾ ಆಗ್ರಹಿಸಿ ಧರಣಿ ಕುಳಿತಿದ್ದು, ವೇತನ ಬಾಕಿ ಉಳಿಸಿಕೊಂಡಿದ್ದಲ್ಲದೆ ಕೆಲಸದಿಂದ ವಜಾ ಮಾಡಿರೋ ಗ್ರಾಪಂ ಅಧ್ಯಕ್ಷೆ ಮಂಜುಳಾ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆ ಕುಟುಂಬಸ್ಥರ ಜೊತೆಗೂಡಿ ಧರಣಿ ಕುಳಿತಿದ್ದು, ಬಾಕಿ ಉಳಿಸಿರುವ ವೇತನ ನೀಡಬೇಕು. ಜೊತೆಗೆ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡುತ್ತಿ ದ್ದಾರೆ. ಅಷ್ಟೇ ಅಲ್ಲದೇ ಕೆಲಸಕ್ಕೆ ತೆಗೆದುಕೊಳ್ಳದಿದರೆ ಮೇಲ್ಮ ಟ್ಟದ ಅಧಿಕಾರಿಗಳಿಗೆ ದೂರು ನೀಡಿ, ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಎಚ್ಚರಿಕೆ ನೀಡಿದ್ದಾರೆ.

ರೈತರಿಂದ ಪ್ರತಿಭಟನೆ: ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿದ ರೈತರು, ಮದ್ದೂರಿನ ತಾಲೂಕು ಕಚೇರಿ ಮುಂದೆ ಭತ್ತ ಸುರಿದು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಚೆನ್ನಸಂದ್ರ ಲಕ್ಷ್ಮಣ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದ ರೈತರು, ಜಿಲ್ಲೆಯಲ್ಲಿ 7 ಜನ ಜೆಡಿಎಸ್ ಶಾಸಕರಿದ್ದರೂ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಕುಮಾರಸ್ವಾಮಿ ಸೇರಿ ಜಿಲ್ಲೆಯ ಶಾಸಕರಿಗೆ ಧಿಕ್ಕಾರ ಕೂಗಿದ ಹೋರಾಟಗಾರರು, ರೆಸಾರ್ಟ್ ರಾಜಕೀಯ ಬಿಟ್ಟು ರೈತರ ಸಮಸ್ಯೆ ಬಗೆಹರಿಸು ವಂತೆ ಒತ್ತಾಯ ಮಾಡಿದರು. ರೈತರ ಸಮಸ್ಯೆ ಬಗೆಹರಿಸದೇ ಇದ್ದರೆ ತಾಲೂಕು ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆ ಯನ್ನು ಹೋರಟಗಾರರು, ಜನಪ್ರತಿನಿಧಿಗಳಿಗೆ ನೀಡಿದರು.

ಪಡಿತರದಾರರ ಪ್ರತಿಭಟನೆ: ಮಳವಳ್ಳಿ ತಾಲೂಕಿನ ನೆಲ ಮಾಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಡಿತರ ವಿತರಣೆಯಲ್ಲಿ ಅಕ್ರಮವೆಸಗುತ್ತಿದ್ದಾರೆ ಎಂದು ಆರೋಪಿಸಿ ಪಡಿತರದಾರರು ಪ್ರತಿಭಟನೆ ನಡೆಸಿದರು.

ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾಧ್ಯಕ್ಷ ಟಿ.ಅಶ್ರಫ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜನತೆ ಬಡ ಕುಟುಂಬಗಳಿಗೆ ಸರ್ಕಾರ ನೀಡುವ ಪಡಿತರವನ್ನು ಕಾರ್ಡ್‍ಗಳಲ್ಲಿ ನೋಂದಣಿ ಯಾಗಿರುವ ಸದಸ್ಯ ಫಲಾನುಭವಿಗಳಲ್ಲಿ ಮೃತಪಟ್ಟವರ ಹೆಸರು ಡಿಲೀಟ್ ಮಾಡಿಸದೇ ಅವರ ಹೆಸರಿನಲ್ಲೂ ಪಡಿತರ ಪಡೆದು ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡು ವರ್ಷಗಳಿಂದ ಇದೇ ರೀತಿ ವಿತರಣೆ ಮಾಡುತ್ತಿದ್ದು, ಇಲ್ಲಿನ ಸಹಕಾರ ಸಂಘದ ಕಾರ್ಯದರ್ಶಿ ಸೌಮ್ಯ ಎಂಬು ವರು ಶಾಮೀಲಾಗಿ ಅಕ್ರಮವಾಗಿ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದು, ಈ ವಿಚಾರವಾಗಿ ಗ್ರಾಮ ಲೆಕ್ಕಾಧಿಕಾರಿ ಮಧು ಎಂಬುವರ ಗಮನಕ್ಕೆ ತಂದರೂ ಯಾವುದೇ ಕ್ರಮವಹಿಸಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ನೆಲಮಾಕನಹಳ್ಳಿ ಘಟಕದ ಅಧ್ಯಕ್ಷ ನಾಗರಾಜೇಗೌಡ, ರೈತ ಮುಖಂಡರಾದ ಚಿಕ್ಕತಮ್ಮೇಗೌಡ, ಶಿವಪ್ಪ, ರಮೇಶ್, ಸುನೀಲ್, ಮರಿಸ್ವಾಮಿ, ಜಯರಾಮು ಮೊದಲಾದವರು ಪಾಲ್ಗೊಂಡಿದ್ದರು.

Translate »