ಮೈಸೂರಿನಲ್ಲಿ ರೈತ ಸಂಘದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ
ಮೈಸೂರು

ಮೈಸೂರಿನಲ್ಲಿ ರೈತ ಸಂಘದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ

October 20, 2019

ಮೈಸೂರು, ಅ.19(ಪಿಎಂ)- ಕೃಷಿ ಕ್ಷೇತ್ರ ಹಾಗೂ ಆಹಾರ ಉತ್ಪನ್ನಗಳನ್ನು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‍ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ತರಬಾರದೆಂದು ಆಗ್ರಹಿಸಿ ಅ.24ರಂದು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸೂರು ಕುಮಾರ್ ತಿಳಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಉತ್ಪನ್ನಗಳು ಹಾಗೂ ಕೃಷಿ ಕ್ಷೇತ್ರವನ್ನು ಆರ್‍ಸಿಇಪಿ ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ತರಬಾರದೆಂದು ಆಗ್ರಹಿಸಿ ಅಂದು ದೇಶಾದ್ಯಂತ ರೈತ ಸಂಘಟನೆಗಳು ಚಳವಳಿಗೆ ಮುಂದಾಗಿವೆ. ಅದೇ ರೀತಿ ಮೈಸೂರಿನಲ್ಲಿ ರೈತ ಸಂಘದ ವತಿಯಿಂದ ಅಂದು ಬೆಳಿಗ್ಗೆ 10.30ಕ್ಕೆ ರಾಮಸ್ವಾಮಿ ವೃತ್ತದಿಂದ ದನಗಳ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. 15 ದೇಶಗಳೊಂದಿಗೆ ಭಾರತ ಸರ್ಕಾರ ಆರ್‍ಸಿ ಇಪಿ ಸಂಬಂಧ ಮಾತುಕತೆ ನಡೆಸುತ್ತಿದೆ. ಇದಕ್ಕೆ ಭಾರತ ಸರ್ಕಾರ ಸಹಿ ಹಾಕಿದರೆ ನಮ್ಮ ಆಹಾರ ಮತ್ತು ಕೃಷಿ ಕ್ಷೇತ್ರಕ್ಕೆ ದೊಡ್ಡ ಕಂಟಕ ಎದುರಾಗಲಿದೆ. ಈ ನವೆಂಬರ್‍ನಲ್ಲಿ ಸಹಿ ಹಾಕಲು ಉದ್ದೇಶಿಸಿದ್ದು, ಇದಕ್ಕೆ ಸಹಿ ಹಾಕಿದ್ದಲ್ಲಿ ಹೊರ ದೇಶಗಳಿಂದ ಹಾಲು, ಹಾಲಿನ ಉಪ ಉತ್ಪನ್ನ, ಕೃಷಿ ಉತ್ಪನ್ನ ಗಳು ಮತ್ತು ಇತರೆ ಉತ್ಪನ್ನಗಳು ಲಂಗು ಲಗಾಮು ಇಲ್ಲದೇ ಶುಲ್ಕರಹಿತವಾಗಿ ಹರಿದು ಬರುತ್ತವೆ. ಬಹು ಮುಖ್ಯವಾಗಿ 15 ಕೋಟಿ ಜನತೆ ಅವಲಂಬಿಸಿರುವ ಹೈನುಗಾರಿಕೆ ಸಂಪೂರ್ಣ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹೊರ ದೇಶಗಳು ಇದರಿಂದ ತೆರಿಗೆ ಮುಕ್ತವಾಗಿ ವ್ಯಾಪಾರ ನಡೆಸಲಿವೆ. ಇದರಿಂದ ಭಾರತದಲ್ಲಿ ಉತ್ಪತ್ತಿಯಾಗುವ ಉತ್ಪನ್ನಗಳಿಗೆ ಬೆಲೆ ಇಲ್ಲದಂತಾಗಲಿದೆ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಈ ಒಪ್ಪಂದಕ್ಕೆ ಸಹಿ ಮಾಡ ಬಾರದು. ಹೀಗಾಗಿ ಎಲ್ಲ ಸಂಘಟನೆಗಳು ಒಟ್ಟುಗೂಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಎಲ್ಲಾ ಜಿಲ್ಲಾ ಕೇಂದ್ರಗಳ ಮುಂದೆ ದನಕರುಗಳ ಜೊತೆಗೆ ಪ್ರತಿಭಟನೆ ನಡೆಸಲಾಗುತ್ತದೆ ಎಂದರು. ರೈತ ಸಂಘದ ಎಂ.ಎಸ್. ಅಶ್ವಥನಾರಾಯಣ ರಾಜೇ ಅರಸ್, ಸರಗೂರು ನಟರಾಜ್, ಪಿ.ಮರಂಕಯ್ಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »