ಡೀನ್ ನೇಮಕ, ಸಮರ್ಪಕ ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಕಾವಾ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಡೀನ್ ನೇಮಕ, ಸಮರ್ಪಕ ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಕಾವಾ ವಿದ್ಯಾರ್ಥಿಗಳ ಪ್ರತಿಭಟನೆ

December 29, 2019

ಮೈಸೂರು,ಡಿ.28(ಪಿಎಂ)-ಖಾಯಂ ಡೀನ್ ನೇಮಕ ಮಾಡಬೇಕು ಹಾಗೂ ಸಮರ್ಪಕ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು (ಕಾವಾ) ವಿದ್ಯಾರ್ಥಿಗಳು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ ಕಾಲೇಜು ಆರಂಭವಾಗುವ ವೇಳೆಗೆ ಪ್ರತಿಭಟ ನೆಗೆ ಇಳಿದ ವಿದ್ಯಾರ್ಥಿಗಳು, ಕಾಲೇಜಿನ ಎಲ್ಲಾ ತರಗತಿಗಳ ಬೀಗದ ಕೈಗಳನ್ನು ಇಟ್ಟಿರುವ ಕಚೇರಿ ಕೊಠಡಿಯ ಒಳ ಹೋಗ ದಂತೆ ಬಾಗಿಲಿಗೆ ಹಳೇ ಕುರ್ಚಿಗಳು, ಏಣಿ ಹಾಗೂ ಇಟ್ಟಿಗೆ ಸೇರಿದಂತೆ ವಸ್ತುಗಳನ್ನು ಹಾಕಿ, ದಿಗ್ಬಂಧನ ವಿಧಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಒಳಪಡುವ ಕಾವಾ ಕಾಲೇಜಿನಲ್ಲಿ 200ಕ್ಕೂ ವಿದ್ಯಾರ್ಥಿಗಳು ವ್ಯಾಸಂಗ ಮಾಡು ತ್ತಿದ್ದು, ಈ ಪೈಕಿ ಬಹುತೇಕ ವಿದ್ಯಾರ್ಥಿಗಳು ಪ್ರತಿಭಟನೆ ಯಲ್ಲಿ ಪಾಲ್ಗೊಂಡು, ಆಕ್ರೋಶ ವ್ಯಕ್ತಪಡಿಸಿದರು.

ವಾರ್ಷಿಕವಾಗಿ ನಡೆಯುತ್ತಿದ್ದ ರಾಷ್ಟ್ರೀಯ ಕಾರ್ಯಾ ಗಾರ ಕಳೆದ ಮೂರು ವರ್ಷಗಳಿಂದ ನಡೆದಿಲ್ಲ. ಕಚೇರಿ ಸಿಬ್ಬಂದಿ ಹಾಗೂ ಅಧ್ಯಾಪಕರ ನಡುವೆ ಸಮನ್ವಯತೆ ಇಲ್ಲದೇ ಕಾಲೇಜಿನಲ್ಲಿ ಮೂಲಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಕಚೇರಿ ಸಿಬ್ಬಂದಿ ಹಾಗೂ ಅಧ್ಯಾಪಕರು ಯಾವುದೇ ಸಮಸ್ಯೆ ಪರಿಹರಿಸಲು ಮನವಿ ಮಾಡಿದರೂ ಪರಸ್ಪರ ಬೆರಳು ತೋರಿಸುತ್ತಾರೆ. ಕೊನೆಗೆ ಡೀನ್ ಇಲ್ಲ ಎಂದು ಕೈಚೆಲ್ಲುತ್ತಾರೆ ಎಂದು ಆರೋಪಿಸಿದರು.

ಸರ್ಕಾರಿ ಶಾಲೆಯಲ್ಲಿ ಅವ್ಯವಸ್ಥೆಯಾದರೆ ಕೇಳಲು ಎಸ್‍ಡಿಎಂಸಿ ಎಂಬ ವ್ಯವಸ್ಥೆಯಾದರೂ ಇದೆ. ಆದರೆ ನಮ್ಮ ವ್ಯಥೆ ಕೇಳುವವರು ಯಾರೂ ಇಲ್ಲ. ಕಾವಾ ಕಾಲೇಜು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ನಾಲ್ಕು ವರ್ಷ ಕಳೆದರೂ ಈ ಕಾಲೇಜಿನ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ. ಇನ್ನೂ ಕಾಲೇಜಿನ ಕಾಂಪೌಂಡ್ ಸಹ ಕಟ್ಟಿಲ್ಲ. ಕೊಠಡಿಗಳ ಕೊರತೆಯೂ ಇದೆ ಎಂದು ಕಿಡಿಕಾರಿದರು.

ಕಾಂಪೌಂಡ್ ಸೇರಿದಂತೆ ಬಾಕಿ ಕಾಮಗಾರಿಗಳು ಹಾಗೂ ಯಾವುದೇ ಕೆಲಸಗಳನ್ನು ಅರೆಬರೆ ಮಾಡಲಾಗುತ್ತಿದೆ. ಶುಕ್ರ ವಾರ ಮಧ್ಯಾಹ್ನ ಕಾಲೇಜಿನ ವಿದ್ಯುತ್ ಕಡಿತ ಮಾಡಲಾಗಿದೆ. ವಿದ್ಯುತ್ ಬಿಲ್ ಕಟ್ಟದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳ ಲಾಗಿದೆ ಎನ್ನಲಾಗಿದೆ. ಇಂತಹ ಅವ್ಯವಸ್ಥೆಯನ್ನು ಕೇಳಲು ಡೀನ್ ಇಲ್ಲ. ಕೂಡಲೇ ಖಾಯಂ ಡೀನ್ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮಧ್ಯಾಹ್ನ ಸುಮಾರು 2 ಗಂಟೆಯ ವರೆಗೂ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಸೋಮ ವಾರ ಪ್ರತಿಭಟನೆ ಮುಂದುವರೆಸಲು ಒಕ್ಕೊರಲಿನಿಂದ ತೀರ್ಮಾನಿಸಿ ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟರು.

Translate »