ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅರಿವೇ ಇಲ್ಲ
ಮೈಸೂರು

ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅರಿವೇ ಇಲ್ಲ

December 29, 2019

ಮೈಸೂರು,ಡಿ.28(ಎಸ್‍ಪಿಎನ್)-ಗ್ರಾಹಕ ಸಂರಕ್ಷಣಾ ಕಾಯ್ದೆ ನಗರ ಪ್ರದೇಶ ದಲ್ಲಿ ವ್ಯಾಪಕ ಬಳಕೆಯಾಗುತ್ತಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಇದರ ಜಾಗೃತಿ ಇಲ್ಲದಂತಾಗಿ, ಬಳಕೆದಾರರೇ ಇಲ್ಲದಂತಾ ಗಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯ ಎಂ.ಸಿ. ದೇವಕುಮಾರ್ ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿನೋಬಾ ರಸ್ತೆಯ ನಂಜ ರಾಜ ಬಹದ್ದೂರ್ ಛತ್ರದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸಂಯು ಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2019ರ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾಹಕರ ಹಿತರಕ್ಷಣಾ ದೃಷ್ಟಿಯಿಂದ 1986ರ ಡಿಸೆಂಬರ್ 24 ರಂದು ದೇಶಾ ದ್ಯಂತ ಜಾರಿಗೆ ಬಂತು. ಈ ದಿನವನ್ನು `ರಾಷ್ಟ್ರೀಯ ಗ್ರಾಹಕ ದಿನಾಚರಣೆ’ಯನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ. ದಿನನಿತ್ಯ ವಹಿವಾಟಿನಲ್ಲಿ ಮೋಸ ಹೋಗುವ ಗ್ರಾಹಕರಿಗೆ ಪರಿಹಾರ ಒದಗಿಸುವ ವೇದಿಕೆ ಯಾಗಿ ಗ್ರಾಹಕ ನ್ಯಾಯಾಲಯ ರಚನೆ ಯಾಗಿದೆ. ಇದು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಗಳನ್ನು ರಚನೆ ಮಾಡಲಾಗುತ್ತಿದ್ದು, ಇದರ ಮೂಲಕ ನೊಂದ ಗ್ರಾಹಕರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದರು.

ಗೆಜೆಟ್ ಹೊರಡಿಸಿಲ್ಲ: 1986ರ ರಾಷ್ಟ್ರೀಯ ಗ್ರಾಹಕ ಕಾಯ್ದೆಗೆ 2019ರ ಆಗಸ್ಟ್‍ನಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ತಂದು, ರಾಷ್ಟ್ರಪತಿಗಳ ಅಂಕಿತವೂ ಬಿದ್ದಿದೆ. ಆದರೆ, ಇನ್ನೂ ಸಂಬಂಧಿಸಿದ ಇಲಾಖೆಯಿಂದ ಗೆಜೆಟ್ ಹೊರಡಿಸದ ಹಿನ್ನೆಲೆಯಲ್ಲಿ ಗ್ರಾಹಕ ತಿದ್ದು ಪಡಿ ಕಾಯ್ದೆ ಜಾರಿಯಾಗಿಲ್ಲ ಎಂದರು.

ಗ್ರಾಹಕರಿಗಿರುವ ಹಕ್ಕುಗಳು: ಗ್ರಾಹಕ ತನಗೆ ಬೇಕಾದ ವಸ್ತುಗಳನ್ನು ಯೋಗ್ಯ ಮತ್ತು ಪೈಪೋಟಿ ದರದಲ್ಲಿ ಪಡೆಯುವ ಹಕ್ಕು ಹೊಂದಿದ್ದಾನೆ. ಜೀವಕ್ಕೆ ಮತ್ತು ಆಸ್ತಿ-ಪಾಸ್ತಿ ಗಳಿಗೆ ಅಪಾಯವನ್ನುಂಟು ಮಾಡುವ ಸರಕು ಮತ್ತು ಮಾರಾಟದ ವಿರುದ್ಧ ರಕ್ಷಣೆ ಪಡೆಯುವ ಹಕ್ಕು ಹೊಂದಿದ್ದು, ಗ್ರಾಹಕ ತನ್ನ ಕುಂದು-ಕೊರತೆಗಳನ್ನು ಗ್ರಾಹಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಪರಿಹರಿಸಿಕೊಳ್ಳಬಹುದಾಗಿದೆ ಎಂದರು.

ವಿವಿಧ ಇಲಾಖೆಗಳಿಂದ ಪ್ರಾತ್ಯಕ್ಷಿಕೆ ಪ್ರದರ್ಶನ: ರಾಷ್ಟ್ರೀಯ ಗ್ರಾಹಕ ಹಕ್ಕು ದಿನಾಚರಣೆ ಅಂಗವಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ `ಸಾರ್ವಜನಿಕ ವಿತರಣೆ’. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ `ಆಹಾರ ಕಲಬೆರಕೆ-ಸಾಮಾನ್ಯ ವಿಷಯ’. ಕೃಷಿ ಇಲಾಖೆ ಯಿಂದ `ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿಷಯ’. ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ವಿಷಯಗಳ ಬಗ್ಗೆ. ಔಷಧ ನಿಯಂತ್ರಣ ಇಲಾಖೆಯಿಂದ `ಔಷಧ ವಿಷಯ’. ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ `ತೂಕ ಮತ್ತು ಅಳತೆ ವಿಷಯ’. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ `ಮಹಿಳಾ ಮತ್ತು ಮಕ್ಕಳ ಹಕ್ಕುಗಳು’, ಸಾರ್ವಜನಿಕ ಶಿಕ್ಷಣ ಇಲಾಖೆ(ಶಿಕ್ಷಣ ಅಭಿಯಾನ)ಯಿಂದ `ಶೈಕ್ಷಣಿಕ ಹಕ್ಕು’. ಐಓಸಿ-ಪೆಟ್ರೋಲ್ ವಿಭಾಗ ಮತ್ತು ಎಲ್‍ಪಿಜಿ ವಿಭಾಗದಿಂದ `ಪೆಟ್ರೋಲಿಯಂ ಹಾಗೂ ಎಲ್‍ಪಿಜಿ’; ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಹಾಗೂ ಮೈಸೂರು ಗ್ರಾಹಕ ಪರಿಷತ್ ವತಿಯಿಂದ `ನಾಗರಿಕ ಸನ್ನದುಗಳು, ಗ್ರಾಹಕ ಸಂರಕ್ಷಣಾ ಕಾಯೆ’್ದ ಹಾಗೂ `ಗ್ರಾಹಕ ಸಂರಕ್ಷಣೆ ಮತ್ತು ಕಲಬೆರಕೆ’ ವಿಷಯಗಳು. ಮೈಸೂರು ಹಾಲು ಒಕ್ಕೂಟ ಮಹಾಮಂಡಳದಿಂದ `ಹಾಲು ಮತ್ತು ಹಾಲಿನ ಉತ್ಪನ್ನಗಳ ಕಲಬೆರಕೆ’ ವಿಷಯಗಳ ಬಗ್ಗೆ ಸಂಬಂಧಪಟ್ಟ ಆಯಾಯ ಇಲಾಖಾ ಅಧಿಕಾರಿಗಳಿಂದ ಗ್ರಾಹಕರಿಗೆ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿತ್ತು.

ಈ ವೇಳೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಪಿ.ಶಿವಣ್ಣ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಹೆಚ್.ಕೆ.ರಾಮು, ಡಾ.ಹೆಚ್. ಎಸ್.ನಾಗರತ್ನ, ಮೈಸೂರು ಗ್ರಾಹಕ ಪರಿಷತ್ ಸದಸ್ಯ ರಾಮನಾಥ್ ಇದ್ದರು. ಈ ವೇಳೆ ಕೆಲ ಗ್ರಾಹಕರು, ಕೆಎಸ್‍ಆರ್‍ಟಿಸಿ, ಔಷಧ ವಿತರಣೆ, ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಸಂಬಂಧಪಟ್ಟ ಕೆಲ ಗೊಂದಲಗಳ ಬಗ್ಗೆ ಸಂವಾದ ನಡೆಸಿ, ಉತ್ತರ ಪಡೆದರು.

Translate »