ಮಡಿಕೇರಿ ವ್ಯಾಪ್ತಿಯಲ್ಲಿ ಮತ್ತೆ ಮಳೆ
ಕೊಡಗು

ಮಡಿಕೇರಿ ವ್ಯಾಪ್ತಿಯಲ್ಲಿ ಮತ್ತೆ ಮಳೆ

October 10, 2018

ಹಾಲೇರಿ-ಹಟ್ಟಿಹೊಳೆ ಸಂಪರ್ಕ ಕಡಿತ, ಆತಂಕದಲ್ಲಿ ಜನತೆ
ಮಡಿಕೇರಿ:  ಮಡಿಕೇರಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮತ್ತೆ ಮಳೆ ಮುಂದುವರಿದಿದೆ. ಸೋಮವಾರ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನ ಗುಡುಗು ಸಿಡಿಲಿನ ಸಹಿತ ಕೆಲಕಾಲ ಧಾರಾಕಾರ ಮಳೆ ಸುರಿದಿದ್ದು, ಜನರ ಮನದಲ್ಲಿ ಮತ್ತೆ ಆತಂಕ ಮೂಡಿದೆ. ಹಾಲೇರಿ ಹಟ್ಟಿಹೊಳೆ ವ್ಯಾಪ್ತಿ ಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆ ಸಂಚಾರ ಸ್ಥಗಿತ ಗೊಂಡಿದೆ. ಇದೀಗ ಮಡಿಕೇರಿ-ಸುಂಟಿಕೊಪ್ಪ-ಮಾದಾಪುರ ಪರ್ಯಾಯ ರಸ್ತೆಯಲ್ಲಿ ವಾಹನÀಗಳು ಸಂಚರಿಸುತ್ತಿವೆ. ಹಾಲೇರಿ ಬಳಿ ಈ ಹಿಂದೆ ದುರಸ್ಥಿ ಪಡಿಸಲಾದ ರಸ್ತೆಯಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಜೀಪುಗಳು ಸಂಚರಿಸಲು ಕೂಡ ಸಾಧ್ಯವಿಲ್ಲದಂತಾಗಿದೆ. ಇದರಿಂದಾಗಿ ಹಾಲೇರಿ-ಹಟ್ಟಿಹೊಳೆ ಸಂಪರ್ಕ ಕಡಿತಗೊಂಡಿದೆ.

ಮಕ್ಕಂದೂರು, ಗಾಳಿಬೀಡು, ಕಾಲೂರು, ಮೊಣ್ಣಂಗೇರಿ, ಜೋಡು ಪಾಲ, ತಂತಿಪಾಲ, ಮುಕ್ಕೋಡ್ಲು, ಭಾಗಮಂಡಲ, ಚೆಟ್ಟಿಮಾನಿ ಸೇರಿದಂತೆ ನಾಪೋಕ್ಲು, ಕೊಟ್ಟಮುಡಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಈ ಹಿಂದೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಧ್ವಂಸಗೊಂಡ ಗ್ರಾಮಗಳಲ್ಲಿ ಕೂಡ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳಿಗೆ ಜೀವಭಯ ಕಾಡುತ್ತಿದೆ. ಈ ಹಿಂದೆ ಭೂಕುಸಿದ ಸ್ಥಳಗಳಲ್ಲಿ ಇಂದಿಗೂ ಭಾರಿ ಬಿರುಕುಗಳಿದ್ದು, ಬೆಟ್ಟ ಶ್ರೇಣಿಗಳು ಮಳೆ ನೀರಿನಿಂದ ಮತ್ತೆ ಕುಸಿಯುವ ಆತಂಕ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ದುರಸ್ಥಿಪಡಿಸಲಾದ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿದ್ದು ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿರುವ ಮಾಹಿತಿಯೂ ಲಭ್ಯವಾಗಿದೆ. ಮಾತ್ರವಲ್ಲದೆ ಈ ಹಿಂದೆ ಪ್ರಕೃತಿ ವಿಕೋಪ ಘಟಿಸಿದ ಪ್ರದೇಶಗಳ ಕೆಲವು ಭಾಗಗಳು ಜನ ವಾಸಕ್ಕೆ ಯೋಗ್ಯವಲ್ಲ ಎಂಬ ವೈಜ್ಞಾನಿಕ ವರದಿಯೂ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ ಅಂತಹ ಪ್ರದೇಶಗಳಲ್ಲಿ ಇಂದಿಗೂ ಜನ ವಾಸ ಮಾಡುತ್ತಿದ್ದು, ಅಲ್ಲಿನ ಗ್ರಾಮಸ್ಥರಿಗೆ ಆತಂಕ ಸೃಷ್ಟಿಯಾಗಿದೆ.

ಪ್ರಕೃತಿ ವಿಕೋಪಕ್ಕೆ ಮಂಡಿಯೂರಿ ಇದೀಗ ಮತ್ತೆ ಸಹಜ ಸ್ಥಿತಿಗೆ ಮರುಳುತ್ತಿರುವ ಮಡಿಕೇರಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮತ್ತೆ ಮಳೆಯಾಗುತ್ತಿರುವುದು ಜನರಿಗೆ ನುಂಗುಲಾರದ ತುತ್ತಾಗಿ ಪರಿಣಮಿಸಿದೆ. ದಕ್ಷಿಣ ಒಳನಾಡಿನಲ್ಲಿ ವಾಯುಭಾರ ಕುಸಿತಗೊಂಡಿರುವುದು ಮಳೆ ಸುರಿಯಲು ಕಾರಣ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಕೊಡಗು ಜಿಲ್ಲೆಯಲ್ಲಿ ಅದರ ಪ್ರಭಾವ ಕಂಡು ಬರುತ್ತಿದೆ.

Translate »