ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆ; ಭಯದಲ್ಲಿ ಜನತೆ
ಕೊಡಗು

ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆ; ಭಯದಲ್ಲಿ ಜನತೆ

October 6, 2018

ಮಡಿಕೇರಿ:  ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರ ಧಾರಾಕಾರ ಮಳೆ ಸುರಿದಿದೆ. ಗುಡುಗು ಸಿಡಿಲಿನೊಂದಿಗೆ ಬಿರುಗಾಳಿ ಸಹಿತ ಸುರಿದ ಮಳೆಗೆ ಕೆಲಕಾಲ ಕೊಡಗು ಜಿಲ್ಲೆ ತತ್ತರಿಸುವಂತಾಯಿತು.

ವಿರಾಜಪೇಟೆ, ಸೋಮವಾರಪೇಟೆಯಲ್ಲಿ ಧಾರಾಕಾರ ಮಳೆ ಸುರಿದ ಬಗ್ಗೆ ವರದಿಯಾಗಿದೆ. ವಿರಾಜಪೇಟೆಯಲ್ಲಿ ಮಳೆಯಿಂದಾಗಿ ವಿದ್ಯುತ್ ಪೂರೈಕೆ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಪ್ರಕೃತಿ ವಿಕೋಪದಿಂದ ತತ್ತರಿಸಿ ಸಹಜ ಸ್ಥಿತಿಯತ್ತ ಮರಳುತ್ತಿರುವ 32 ಗ್ರಾಮಗಳ ನಿವಾಸಿಗಳಿಗೆ ಮಹಾಮಳೆ ಮತ್ತೆ ಆತಂಕವನ್ನು ತಂದೊಡ್ಡಿದೆ. ಸಂಪೂರ್ಣ ಧ್ವಂಸ ಗೊಂಡು ಇದೀಗ ದುರಸ್ಥಿ ಪಡಿಸಲಾದ ಗ್ರಾಮೀಣ ಭಾಗದ ರಸ್ತೆಗಳು ಕೆಸರಿನ ಗದ್ದೆಯಂತಾಗಿದ್ದು, ಜನ ಮತ್ತು ವಾಹನ ಸಂಚಾರ ದುಸ್ಥರವಾಗಿ ಪರಿಣಮಿಸಿದ ಬಗ್ಗೆಯೂ ವರದಿಯಾಗಿದೆ. ಈ ಹಿಂದೆ ಬಿರುಕು ಬಿಟ್ಟಿರುವ ಬೆಟ್ಟ ಶ್ರೇಣಿಗಳು ಮಳೆಯ ನೀರಿನಿಂದ ಮತ್ತೊಮ್ಮೆ ಕುಸಿಯುವ ಸಾಧ್ಯತೆಯಿದ್ದು, ಬೆಟ್ಟ ತಪ್ಪಲುಗಳ ನಿವಾಸಿಗಳು ಭಯಭೀತರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಕಂಡುಬಂದಿತ್ತು. ಪ್ರಕೃತಿ ವಿಕೋಪದ ಕಾಮಗಾರಿಗಳು, ವಿದ್ಯುತ್ ಲೈನ್, ರಸ್ತೆ ದುರಸ್ಥಿ ಕಾರ್ಯಗಳು ಭರದಿಂದ ಸಾಗುತ್ತಿರುವ ನಡುವೆಯೇ ಮಳೆ ಸುರಿಯುತ್ತಿರುವುದರಿಂದ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದೆ.

ದಿಢೀರನೆ ಸುರಿದ ಧಾರಾಕಾರ ಮಳೆಯಿಂದಾಗಿ ಶುಕ್ರವಾರ ಮಡಿಕೇರಿ ಸಂತೆ ಅಸ್ತವ್ಯಸ್ತಗೊಂಡಿತು. ಮಳೆಯಿಂದಾಗಿ ಗ್ರಾಹಕರು ಮತ್ತು ವರ್ತಕರು ಪರದಾಡುವಂತಾಯಿತ್ತಲ್ಲದೇ, ಹಲವು ವರ್ತಕರು ವ್ಯಾಪಾರವನ್ನು ಬಂದ್ ಮಾಡಿ ಗಂಟು-ಮೂಟೆ ಕಟ್ಟುತ್ತಿದ್ದದು ಕಂಡು ಬಂತು.

Translate »