ಮೈಸೂರು: ಮಳೆಯಿಂದ ಅವಾಂತರ ಉಂಟಾಗಿದ್ದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ ಅವರು ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಮೈಸೂರಿನ ಕನಕಗಿರಿ, ಗುಂಡೂರಾವ್‍ನಗರ, ಮುನೇಶ್ವರ ಹಾಗೂ ಶ್ರೀರಾಂಪುರ ಬಡಾವಣೆಗಳಲ್ಲಿ ಪರಿಶೀಲನೆ ನಡೆಸಿದ ಅವರು, ಮಳೆಯಿಂದ ನೀರು ನುಗ್ಗಿ ತೀವ್ರ ಸಮಸ್ಯೆಯಾಗಿದೆ. ಸ್ಥಳದಲ್ಲಿ ಚರಂಡಿ ತೆರವುಗೊಳಿಸುವುದು, ಕಿರು ಸೇತುವೆಗಳ ನಿರ್ಮಾಣ, ಡೀ ಶೆಲ್ಟಿಂಗ್ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆ ಹಾಗೂ ಮುಡಾ ಅಧಿಕಾರಿಗಳಿಗೆ ಸೂಚಿಸಿದರು.
ಗಣಪತಿ ಆಶ್ರಮದ ಹಿಂಭಾಗದ ತಗ್ಗು ಪ್ರದೇಶದಲ್ಲಿ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕು, ಗುಂಡೂರಾವ್‍ನಗರ ಹಾಗೂ ಮುನೇಶ್ವರನಗರ ಬಡಾವಣೆಯಲ್ಲಿ ಕಸ- ಕಡ್ಡಿಗಳಿಂದ ತುಂಬಿರುವ ಕಿರು ಸೇತುವೆಗಳಡಿಯ ಮಣ್ಣನ್ನು ತೆರವುಗೊಳಿಸುವಂತೆಯೂ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಮಳೆಗಾಲದಲ್ಲಿ ಹಾನಿ ಉಂಟಾಗದಂತೆ ಮುಂಜಾಗ್ರತೆ ವಹಿಸಿ ವಸತಿ ಪ್ರದೇಶಗಳಿಗೆ ತೊಂದರೆ ಉಂಟಾಗದಂತೆ ಕ್ರಮ ವಹಿಸಬೇಕು. ಆಗಿಂದಾಗ್ಗೆ ಇಂಜಿನಿಯರ್‍ಗಳು ತಮ್ಮ ವ್ಯಾಪ್ತಿಯಲ್ಲಿ ಅಡ್ಡಾಡಿ ಪರಿಶೀಲಿಸುತ್ತಿರಬೇಕು, ಕ್ಷಿಪ್ರ ಕಾರ್ಯಾಚರಣೆ ತಂಡದ ಸಿಬ್ಬಂದಿ ಸದಾ ಜಾಗೃತರಾಗಿರಬೇಕೆಂದು ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗರಾಜ ಮೂರ್ತಿ, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುರೇಶ್‍ಕುಮಾರ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.