ಕಲಾಭಿಮಾನಿಗಳ ಮನತಣಿಸಿದ ‘ರಾಜು ಗಾನಲಹರಿ’
ಮೈಸೂರು

ಕಲಾಭಿಮಾನಿಗಳ ಮನತಣಿಸಿದ ‘ರಾಜು ಗಾನಲಹರಿ’

April 21, 2019

ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ಸಭಾಂಗಣದಲ್ಲಿ ನಾದಾಮೃತ ಸಂಗೀತ ವಿದ್ಯಾಲಯ ಆಯೋಜಿಸಿದ್ದ ‘ರಾಜು ಗಾನಲಹರಿ’ ಭಾವಗೀತೆಗಳ ಗಾಯನ ಕಲಾಭಿಮಾನಿಗಳ ಮನ ತಣಿಸಿತು.

ಮೊದಲಿಗೆ ವೇದಿಕೆ ಆಗಮಿಸಿದ ಗಾಯಕ ನಿತಿನ್ ಅವರು ಲಕ್ಷ್ಮಿನಾರಾಯಣ ಭಟ್ ರಚಿತ ‘ಬನ್ನಿ ಹರಸಿ ತಂದೆ ಅಸನರಾಗಿ ಮುಂದೆ’ ಹಾಡನ್ನು ಹಾಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ನಂತರ ನಾದಾಮೃತ ಸಂಗೀತ ವಿದ್ಯಾಲಯದ ವಿದ್ಯಾರ್ಥಿ ಗಳು ಎಸ್.ರಾಮನಾಥ್ ರಚಿತ ‘ಕಲಿಸು ಗುರುವೇ ಕಲಿಸು’, ಪುರಂದರದಾಸರ ‘ಆಡ ಹೋಗೋಣ ಬಾರೋ ರಂಗ’ ಹಾಡುಗಳನ್ನು ಹಾಡಿ ಕಲಾರಸಿಕರನ್ನು ರಂಜಿಸಿದರು.

ಗಾಯಕರಾದ ಶ್ರೀನಿವಾಸ್, ನಿತಿನ್, ಅಮೃತ, ಸಹನಾ, ಜ್ಯೋತಿಭಟ್ ಹಾಗು ನಾದಾಮೃತ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಡಿವಿಜಿಯವರ ‘ ಧೃತ ನಾಗವೀಣೆ ಶೃತಿ ರಮ್ಯ ಗಾನೆ’, ಜಯಶ್ರೀ ಅರವಿಂದ್ ರಚಿತ ‘ಕೊಳಲನು ನುಡಿಸಿ’, ಮುಕ್ತಾಯಕ್ತರ ‘ಮತ್ತೆ ಚಂದ್ರೋದಯವಾಗಿದೆ’, ಹೆಚ್.ಎಸ್.ವೆಂಕಟೇಶಮೂರ್ತಿತವರ ‘ಸಖನೆ’, ‘ಅಮ್ಮ ಬೇಕೆ ಬೇಕು’, ಎಂ.ಎನ್,ವ್ಯಾಸರಾವ್ ರಚಿತ ‘ಯಾವುದೋ ರಾಗ’, ಎನ್.ಎಸ್.ಲಕ್ಷ್ಮಿ ನಾರಾಯಣ ಭಟ್ಟರ ‘ನೀನೆಲ್ಲೋ ನಾನೆಲ್ಲೋ’, ಶಿಶುನಾಳ ಶರೀಫರ ‘ಹೌದೆ ನಮ್ಮವ್ವ’, ಜಿ.ಪಿ.ರಾಜರತ್ನಂ ಅವರ ‘ಹೆಂಡ ಹೆಣ್ತಿ’, ನಿಸಾರ್ ಅಹಮದ್ ರಚಿತ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಡುಗಳನ್ನು ಹಾಡಿ ಸಂಗೀತ ಪ್ರಿಯರ ಮನಗೆದ್ದರು. ಇದಕ್ಕೂ ಮೊದಲು ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ರಂಗಕರ್ಮಿ ಕಿರಗಸೂರು ರಾಜಪ್ಪ ಮಾತನಾಡಿ, ಸುಗಮ ಸಂಗೀತದಲ್ಲಿ ರಾಜು ಅನಂತಸ್ವಾಮಿ ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ. ಕವನಗಳಿಗೆ ರಾಗ ಸಂಯೋಜನೆಯನ್ನು ಮಾಡುವ ವಿಶೇಷ ಕೌಶಲ್ಯವನ್ನು ಕರಗತಮಾಡಿಕೊಂಡಿದ್ದ ಅವರು, ಇತರ ಗಾಯಕರಿಗೆ ಮಾದರಿಯಾಗಿದ್ದಾರೆ ಎಂದರು.

ಖ್ಯಾತ ಗಾಯಕಿ ರಮ್ಯ ವಸಿಷ್ಠ ಮಾತನಾಡಿ, ಸಂಗೀತ ಒಂದಕ್ಕೊಂದು ಕೊಂಡಿಯಾಗಿರುತ್ತದೆ ಎಂಬುದನ್ನು ಮೊದಲು ನನಗೆ ಪರಿಚಯಿಸಿದ್ದು, ರಾಜು ಅನಂತಸ್ವಾಮಿಯವರು. ಅವರು ಸಂಗೀತ ಸಂಯೋಜಿಸಿದ ಹಾಡಿನ ಸಾಲಿನಲ್ಲಿ 12 ಸ್ವರಗಳನ್ನು ಬಳಸುತ್ತಿದ್ದರು. ಒಳ್ಳೆಯ ಸಂಗೀತಗಾರರಾಗುವ ಇಚ್ಛೆ ಉಳ್ಳವರು ರಾಜು ಅನಂತಸ್ವಾಮಿಯವರ ಸಂಯೋಜಿಸಿದ ಹಾಡುಗಳನ್ನು ಕೇಳಬೇಕು ಎಂದರು. ವೇದಿಕೆಯಲ್ಲಿ ಗಾನಭಾರತಿ ಅಧ್ಯಕ್ಷ ಡಾ.ಸಿ.ಜಿ.ನರಸಿಂಹನ್, ಶಾಂತಾ ಅನಂತಸ್ವಾಮಿ, ಬಿ.ಜಿ.ಕವಿತಾ, ಹೆಚ್.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Translate »