ಪರಿಶಿಷ್ಟ ಪಂಗಡಕ್ಕೆ ಪರಿವಾರ, ತಳವಾರ ಸಮುದಾಯಗಳ ಸೇರ್ಪಡೆ ವಿಧೇಯಕಕ್ಕೆ ರಾಜ್ಯಸಭೆ ಅಂಗೀಕಾರ
ಮೈಸೂರು

ಪರಿಶಿಷ್ಟ ಪಂಗಡಕ್ಕೆ ಪರಿವಾರ, ತಳವಾರ ಸಮುದಾಯಗಳ ಸೇರ್ಪಡೆ ವಿಧೇಯಕಕ್ಕೆ ರಾಜ್ಯಸಭೆ ಅಂಗೀಕಾರ

December 13, 2019

ನವದೆಹಲಿ, ಡಿ.12-ಕಳೆದ ಮೂರೂ ವರೆ ದಶಕಕ್ಕೂ ಅಧಿಕ ಕಾಲದಿಂದ ಪರಿ ವಾರ ಮತ್ತು ತಳವಾರ ಸಮುದಾಯ ಗಳು ನಡೆಸುತ್ತಿದ್ದ ಹೋರಾಟಕ್ಕೆ ಫಲ ದೊರಕುವ ಕಾಲ ಸನ್ನಿಹಿತವಾಗಿದೆ.

ಇಂದು ರಾಜ್ಯಸಭೆಯಲ್ಲಿ ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂ ಧಿತ ವಿಧೇಯಕ ಅಂಗೀಕಾರವಾಗಿದೆ. ಇದರೊಂದಿಗೆ ಮೈಸೂರು, ಚಾಮರಾಜ ನಗರ, ಮಂಡ್ಯ, ಹಾಸನ ಸೇರಿದಂತೆ ರಾಜ್ಯ ದಾದ್ಯಂತ ಇರುವ ಸುಮಾರು 20 ಲಕ್ಷ ಪರಿವಾರ ಮತ್ತು ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸವಲತ್ತು ಲಭಿಸುವ ದಿನಗಳು ಸಮೀಪಿಸಿವೆ. ಕಳೆದ 36 ವರ್ಷ ಗಳಿಂದ ಈ ಸಮುದಾಯಗಳು ಪರಿಶಿಷ್ಟ ಪಂಗಡಕ್ಕೆ ತಮ್ಮನ್ನು ಸೇರಿಸಬೇಕೆಂದು ಬೇಡಿಕೆ ಸಲ್ಲಿಸಿ, ಹೋರಾಟ ನಡೆಸುತ್ತಲೇ ಬಂದಿದ್ದವು. ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಪರಿಶಿಷ್ಟ ಪಂಗಡದಡಿ ಹಕ್ಕು ಪ್ರತಿಪಾದಿಸಿ ಕೊನೆಗೆ ಕಾನೂನು ಹೋರಾಟ ನಡೆಸುವ ಸಂಕಷ್ಟಕ್ಕೆ ಗುರಿ ಯಾಗಿದ್ದರು. ಈ ಸಮುದಾಯಗಳು ಇನ್ನೂ ಪರಿಶಿಷ್ಟ ಪಂಗಡದ ಮಾನ್ಯತೆ ಪಡೆದಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳು ಅದೆಷ್ಟೋ ರಾಜಕೀಯ ನಾಯಕರ ಮೇಲೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸಿ ಕೋರ್ಟ್‍ಗೆ ಅಲೆಯುವಂತೆ ಮಾಡಿದ್ದರು. ಆದರೂ ನಿರಂತರ ಹೋರಾಟ ನಡೆಸುತ್ತಾ ಬಂದ ಈ ಎರಡು ಸಮು ದಾಯಗಳ ನಾಯಕರು, ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಬೇಡಿಕೆ ಮಂಡಿ ಸುತ್ತಲೇ ಬಂದಿದ್ದರು. ಬಿ.ಎಸ್.ಯಡಿ ಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾ ಗಿದ್ದ ಸಂದರ್ಭದಲ್ಲಿ ಪರಿವಾರ ಮತ್ತು ತಳವಾರ ಸಮುದಾಯದ ಮನವಿಯನ್ನು ಪರಿಗಣಿಸಿ ಕುಲಶಾಸ್ತ್ರ ಅಧ್ಯಯನಕ್ಕೆ ಸಮಿತಿ ರಚಿಸಿ, ಆದೇಶಿಸಿದ್ದರು. ಇದರ ವರದಿ ಆಧರಿಸಿ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಈ ಎರಡು ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ದಾಖಲೆ ಮತ್ತು ಸಂಪೂರ್ಣ ಮಾಹಿತಿ, ಪುರಾವೆಗಳೊಂ ದಿಗೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಆದರೆ ಕೆಲ ಮಾಹಿತಿ ಇಲ್ಲ ಎಂಬ ಕಾರಣ ಕ್ಕಾಗಿ ಕೇಂದ್ರ ಸರ್ಕಾರ ಮತ್ತೊಮ್ಮೆ ಕಡತವನ್ನು ರಾಜ್ಯಕ್ಕೆ ವಾಪಸ್ ಕಳುಹಿಸಿತ್ತು. ಈ ವೇಳೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನವರು ಸಂಪೂರ್ಣ ಮಾಹಿತಿಯನ್ನು ಕೇಂದ್ರಕ್ಕೆ ಸಲ್ಲಿಸಿದ್ದರು.

ರಾಜ್ಯದಿಂದ ಸಲ್ಲಿಸಲಾದ ಕಡತವನ್ನು ಕೇಂದ್ರ ಸಂಪುಟ ಚರ್ಚಿಸಿ ಅಂಗೀಕಾರವನ್ನೂ ನೀಡಿತ್ತು. ಆದರೆ ಇದಕ್ಕೆ ಸಂಬಂಧಪಟ್ಟ ವಿವಿಧ ಏಳು ಇಲಾಖೆಗಳು ಅನುಮತಿ ನೀಡಿಲ್ಲ ಎಂಬ ಕಾರಣಕ್ಕೆ ಕಡತ ನೆನೆಗುದಿಗೆ ಬಿದ್ದಿತ್ತು. ಆದರೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಅವರ ಮೇಲೆ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಜನಾಂಗದ ಮುಖಂಡರು ಒತ್ತಡ ತಂದ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ರಾಜ್ಯಸಭೆಯಲ್ಲಿ ಈ ಸಂಬಂಧಿತ ವಿಧೇಯಕವನ್ನು ಮಂಡಿಸಲಾಯಿತು. ಆದರೆ ರಾಜ್ಯಸಭೆಯಲ್ಲಿ ಇತರೆ ವಿಷಯದ ಮೇಲಿನ ಚರ್ಚೆ ನಡುವೆ ಗದ್ದಲ ಉಂಟಾದ ಕಾರಣ ಮಸೂದೆ ಚರ್ಚೆಗೆ ಬರದೆ ಮುಂದೂಡಲ್ಪಟ್ಟಿತ್ತು. ಆದರೂ ಛಲ ಬಿಡದ ಈ ಜನಾಂಗದ ಮುಖಂಡರು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಒತ್ತಡ ತಂದಿದ್ದರು. ಇದರ ಫಲವಾಗಿ ಇಂದು ರಾಜ್ಯಸಭೆಯಲ್ಲಿ ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಧೇಯಕವನ್ನು ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವೆ ರೇಣುಕಾ ಸಿಂಗ್ ಸರೌತಾ ಮಂಡಿಸಿದರು. ವಿಧೇಯಕ ಸಂಬಂಧ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ಸದನಕ್ಕೆ ವಿವರಿಸಿದರು. ನಂತರ ಕೆಲವೇ ನಿಮಿಷಗಳಲ್ಲಿ ರಾಜ್ಯಸಭೆಯು ಮಸೂದೆಗೆ ಅನುಮೋದನೆಯನ್ನೂ ನೀಡಿತು. ಪ್ರಸಕ್ತ ಅಧಿವೇಶನದಲ್ಲೇ ಲೋಕಸಭೆಯಲ್ಲೂ ವಿಧೇಯಕವನ್ನು ಮಂಡಿಸುವ ಸಾಧ್ಯತೆಗಳಿವೆ. ಉಭಯ ಸದನಗಳ ಅಂಗೀಕಾರವನ್ನು ಪಡೆದರೆ, ಈ ಎರಡೂ ಸಮುದಾಯಗಳ ಮೂರೂವರೆ ದಶಕಗಳ ಹೋರಾಟಕ್ಕೆ ಫಲ ಸಿಕ್ಕಂತಾಗುತ್ತದೆ.

ಅನಂತಕುಮಾರರ ಅವಿರತ ಪ್ರಯತ್ನ
ನವದೆಹಲಿ, ಡಿ.12-ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಸಾಕಷ್ಟು ಪರಿಶ್ರಮಪಟ್ಟಿದ್ದರು. ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಿ.ಎಸ್.ಯಡಿ ಯೂರಪ್ಪ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ ಕ್ಷಣದಿಂದಲೇ ಅನಂತಕುಮಾರ್ ತೀವ್ರ ಆಸಕ್ತಿ ವಹಿಸಿ ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಮಟ್ಟದಲ್ಲಿ ಮಾಡಿದ್ದರು.

ಕೇಂದ್ರ ಸಂಪುಟದಲ್ಲಿ ಈ ಪ್ರಸ್ತಾವ ಅಂಗೀಕಾರವಾಗುವುದರೊಂದಿಗೆ ಸಂಸತ್ತಿನ ಉಭಯ ಸದನಗಳಲ್ಲಿ ವಿಧೇಯಕ ಮಂಡಿಸುವ ಹಂತಕ್ಕೆ ತಂದಿದ್ದರು. ಆದರೆ, ಅವರ ಅಕಾಲಿಕ ನಿಧನದ ನಂತರ ಈ ಹೊಣೆಗಾರಿಕೆಯನ್ನು ಮುಂದೆ ಸಂಸದ ಪ್ರತಾಪ್ ಸಿಂಹ ನಿರ್ವಹಿಸಿ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಅವರ ಮೇಲೆ ಒತ್ತಡ ತಂದು ಕೊನೆಗೂ ವಿಧೇಯಕ ರಾಜ್ಯಸಭೆಯಲ್ಲಿ ಮಂಡಿತವಾಗಿ, ಅಂಗೀಕಾರವೂ ಆಗಿದೆ.

ತಮ್ಮ ಮಹತ್ವಾಕಾಂಕ್ಷಿ ಹಾಗೂ ಬಹು ದಿನದ ಬೇಡಿಕೆಯಾದ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾಪ ರಾಜ್ಯಸಭೆಯಲ್ಲಿ ಮಂಡಿತವಾಗಿ, ಅದರ ಅಂಗೀಕಾರಕ್ಕೆ ಕಾರಣಕರ್ತರಾದ ದಿವಂಗತ ಕೇಂದ್ರ ಸಚಿವ ಅನಂತಕುಮಾರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ಪ್ರಹ್ಲಾದ್ ಜೋಷಿ, ಸಚಿವ ಶ್ರೀರಾಮುಲು, ಸಂಸದರಾದ ಪ್ರತಾಪ್ ಸಿಂಹ, ಶ್ರೀನಿವಾಸಪ್ರಸಾದ್ ಅಲ್ಲದೆ ಈ ಹಿಂದೆ ಹೋರಾಟ ನಡೆಸಿದ್ದ ದಿವಂಗತ ಚಿಕ್ಕಮಾಧು ಅವರಿಗೂ ಮಾಜಿ ಎಂಎಲ್‍ಸಿ ಸಿದ್ದರಾಜು ಹಾಗೂ ಅಪ್ಪಣ್ಣ ಕೃತಜ್ಞತೆ ಸಲ್ಲಿಸಿದ್ದಾರೆ.

Translate »