ಕೊರೊನಾ ನಿರ್ನಾಮಕ್ಕೆ ಮುನ್ನೆಚ್ಚರಿಕೆಯೇ ರಾಮಬಾಣ
ಮೈಸೂರು

ಕೊರೊನಾ ನಿರ್ನಾಮಕ್ಕೆ ಮುನ್ನೆಚ್ಚರಿಕೆಯೇ ರಾಮಬಾಣ

April 3, 2020

ಮೈಸೂರಿನ ಶ್ರೀ ಕಲ್ಯಾಣ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಸಂದೇಶ

ಮೈಸೂರು, ಏ.2(ಪಿಎಂ)- ಕೊರೊನಾ ನಿರ್ನಾಮಕ್ಕೆ ಮುನ್ನೆಚ್ಚರಿಕೆ ಕ್ರಮಗಳೇ ರಾಮಬಾಣ ಎಂಬ ಸಂದೇಶ ಸಾರುವ ಕಾರ್ಯಕ್ರಮ ರಾಮನವಮಿ ಅಂಗವಾಗಿ ಮೈಸೂರಿನಲ್ಲಿ ಗುರುವಾರ ನಡೆಯಿತು.

ಮೈಸೂರಿನ ಡಾ.ರಾಜಕುಮಾರ್ ರಸ್ತೆಯ ಶ್ರೀ ಕಲ್ಯಾಣ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನ ಆವರಣದಲ್ಲಿ ಗುರುವಾರ ರಾಮನವಮಿ ಅಂಗವಾಗಿ `ಶ್ರೀರಾಮನ ಜಪಿಸೋಣ ಕೊರೊನಾ ಓಡಿಸೋಣ’ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಈ ಜಾಗೃತಿ ಮೂಡಿಸಲಾ ಯಿತು. ಕೊರೊನಾ ವೇಷಧಾರಿಗೆ ಶ್ರೀರಾಮನ ವೇಷಧಾರಿಯು ಬಿಲ್ಲಿನಿಂದ ಬಾಣ ಬಿಟ್ಟು ವಿನಾಶಗೊಳಿಸುವ ಅಣಕ ಪ್ರದರ್ಶನದ ಮೂಲಕ ಸಂದೇಶ ರವಾನಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ರಾಮನವಮಿ ಹಿಂದೂಗಳ ಪವಿತ್ರ ಹಬ್ಬ. ಈ ಬಾರಿಯ ರಾಮನವಮಿಗೆ ಚೀನಾ ವೈರಾಣು ತಡೆಯೊಡ್ಡಿದೆ. ಹೀಗಾಗಿ ಎಲ್ಲರೂ ಮನೆಯಲ್ಲೇ ಉಳಿದು ರಾಮನವಮಿ ಆಚರಿಸಬೇಕು ಎಂದರು.

ಮೈಸೂರಿನಲ್ಲಿ ಮನೆ ಬಾಗಿಲಿಗೆ ಅಗತ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಯಾರೂ ಮನೆಯಿಂದ ಹೊರಬಾರದೇ ಕೊರೊನಾ ತಡೆಗೆ ಸಹಕಾರ ನೀಡಬೇಕು. ಹಿರಿಯ ನಾಗರಿಕರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು. ಸಂಸದ ಪ್ರತಾಪಸಿಂಹ ಮಾತನಾಡಿ, ಕಟ್ಟಕಡೆಯ ಭಾರತೀಯರನ್ನೂ ಕಾಪಾಡಬೇಕು ಎಂಬ ಸದುದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಲಾಕ್‍ಡೌನ್ ನಿರ್ಧಾರ ತೆಗೆದುಕೊಂಡರು. ಚೀನಿ ಉತ್ಪನ್ನಗಳನ್ನು ಭಾರತದಿಂದ ನಿರ್ಮೂಲನೆ ಮಾಡಲು ಮೋದಿಯವರ ಕರೆಯಂತೆ `ಮೇಕ್ ಇನ್ ಇಂಡಿಯಾ’ಗೆ ಉತ್ತೇಜಿಸಲು ಎಲ್ಲರೂ ಮುಂದಾಗಬೇಕು. ಸ್ವದೇಶಿ ಉತ್ಪನ್ನಗಳನ್ನೇ ಖರೀದಿಸಿದರೆ ದೇಶದ ಭವಿಷ್ಯ ಉಜ್ವಲವಾಗಲಿದೆ ಎಂದರು. ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಮಾತನಾಡಿ, ಕೊರೊನಾ ಸೊಂಕು ತಡೆಗೆ ಜಿಲ್ಲಾಡಳಿತ, ನಗರಪಾಲಿಕೆ ಶ್ರಮಿಸುತ್ತಿವೆ. ಇದಕ್ಕೆ ಜನಸಾಮಾನ್ಯರೂ ಕೈಜೋಡಿಸಬೇಕು. ಲಾಕ್‍ಡೌನ್ ಸಂದರ್ಭ ಪ್ರತಿಯೊಬ್ಬರೂ ಸುತ್ತಮುತ್ತಲಿನ ಹಿರಿಯ ನಾಗರಿಕರು, ಅಶಕ್ತರಿಗೆ ಸಹಾಯಹಸ್ತ ಚಾಚಬೇಕು ಎಂದರು.

ಇದೇ ವೇಳೆ ವಿ.ಸೋಮಣ್ಣ ನಿರಾಶ್ರಿತರಿಗೆ ಆಹಾರ ವಿತರಿಸಿದರು. ಗಣಪತಿ ಸಚ್ಚಿದಾನಂದ ಆಶ್ರಮದ ಆಡಳಿತಾಧಿಕಾರಿ ಪ್ರಸಾದ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಗಿರಿಧರ್, ಮುಖಂಡರಾದ ಮೈ.ವಿ.ರವಿಶಂಕರ್, ಬಿ.ಪಿ.ಮಂಜುನಾಥ್, ವಿಕ್ರಂ ಅಯ್ಯಂಗಾರ್ ಮತ್ತಿತರಿದ್ದರು.

Translate »